ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ನಂತರ ಹತ್ಯೆಗೈದ ಆರೋಪದ ಮೇಲೆ ಒಡಿಶಾದ ವಲಸೆ ಕಾರ್ಮಿಕನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ನಂತರ ಹತ್ಯೆಗೈದ ಆರೋಪದ ಮೇಲೆ ಒಡಿಶಾದ ವಲಸೆ ಕಾರ್ಮಿಕನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
21 ವರ್ಷದ ಸಂತ್ರಸ್ತೆಯನ್ನು ಲಕ್ಷ್ಮೀಸಾಗರ ಪ್ರದೇಶದ ನಿವಾಸಿ ಮಹಾನಂದ ಎಂದು ಪೊಲೀಸರು ಗುರುತಿಸಿದ್ದು, ಆರೋಪಿಯನ್ನು ಕೃಷ್ಣಚಂದ್ ಸೇಟಿ ಎಂದು ಹೆಸರಿಸಲಾಗಿದೆ.
ಮೂಲತಃ ಕಲಬುರಗಿಯವರಾದ ಸಂತ್ರಸ್ತೆ ಲಕ್ಷ್ಮೀಸಾಗರದ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಮನೆಯ ಮುಂದೆ ಶವವಾಗಿ ಪತ್ತೆಯಾಗಿದ್ದಾರೆ. ಅದೇ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಸಹೋದರಿಯೊಂದಿಗೆ ಅವರು ವಾಸಿಸುತ್ತಿದ್ದರು.
ಆರೋಪಿ ಸಂತ್ರಸ್ತೆಯ ಪಕ್ಕದ ಮನೆಯಲ್ಲಿ ವಾಸವಾಗಿದ್ದು, ಟೆಕ್ ಪಾರ್ಕ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದನು.
ಪೊಲೀಸರ ಪ್ರಕಾರ, ಮಹಾನಂದ ಗುರುವಾರ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದರು.
ನಂತರ ರಾತ್ರಿ ಆಕೆ ಮನೆಯಿಂದ ಹೊರಬಂದಾಗ, ಆಕೆಯ ಚಲನವಲನವನ್ನು ಗಮನಿಸಿದ ಆರೋಪಿ, ಆಕೆಯನ್ನು ತನ್ನ ಮನೆಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಸಂತ್ರಸ್ತೆ ಅದನ್ನು ವಿರೋಧಿಸಿದ್ದು, ಸಹಾಯಕ್ಕಾಗಿ ಕಿರುಚಲು ಪ್ರಯತ್ನಿಸಿದ್ದಾರೆ. ಈ ವೇಳೆ, ಕೃಷ್ಣಚಂದ್ ಒಂದು ಕೈಯಿಂದ ಆಕೆಯ ಬಾಯಿಯನ್ನು ಮುಚ್ಚಿ, ಮತ್ತೊಂದು ಕೈಯಿಂದ ಆಕೆಯ ಕತ್ತು ಹಿಸುಕಿದ್ದಾನೆ. ಮಹಾನಂದ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ.
ಕೊಲೆ ಮಾಡಿದ ಬಳಿಕ ಆರೋಪಿ ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ತನ್ನ ಮನೆಯ ಮೂಲೆಯಲ್ಲಿಯೇ ಇಟ್ಟಿದ್ದ. ಮರುದಿನ ಬೆಳಗ್ಗೆ 5.30ರ ಸುಮಾರಿಗೆ ಶವವನ್ನು ಆಕೆಯ ಮನೆಯ ಮುಂದೆ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ, ಜನರು ಜಮಾಯಿಸಿದಾಗ, ಆರೋಪಿ ಕೂಡ ಆ ಗುಂಪಿನ ನಡುವೆ ನಿಂತು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದನು.
ಆದಾಗ್ಯೂ, ಪ್ರಾಥಮಿಕ ವಿಚಾರಣೆಯಲ್ಲಿ ಸರಿಯಾದ ಉತ್ತರ ನೀಡಲು ವಿಫಲವಾದ ನಂತರ ಪೊಲೀಸರು ಆತನ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಗ್ರಿಲ್ ಮಾಡಿದ ನಂತರ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.