ಕಾವೇರಿ ನದಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಸದ್ಯ ಯಾವುದೇ ಆದೇಶ ನೀಡದೆ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ. ಬೆಂಗಳೂರು: ಕಾವೇರಿ ನದಿ ನೀರಿಗಾಗಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಸದ್ಯ ಯಾವುದೇ ಆದೇಶ ನೀಡದೆ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ. ಅಷ್ಟರೊಳಗೆ ಎರಡು ರಾಜ್ಯಗಳ ಜಲಾಶಯಗಳ ವಾಸ್ತವ ಸ್ಥಿತಿ ಕುರಿತು ವರದಿ ಸಲ್ಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಿದೆ.
ವಾಸ್ತವ ಪರಿಸ್ಥಿತಿ ಅರಿಯದೆ ಯಾವುದೇ ಆದೇಶ ನೀಡುವುದು ಕಷ್ಟ ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ, ಸೋಮವಾರ ಉಭಯ ರಾಜ್ಯಗಳ ಸಭೆ ನಡೆಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಿದೆ. ಸಭೆಯಲ್ಲಿ 2 ರಾಜ್ಯಗಳ ಜಲಾಶಯಗಳ ನೀರಿನ ಕುರಿತು ಮಾಹಿತಿ ಪಡೆಯಲಾಗುತ್ತದೆ.
ಕರ್ನಾಟಕ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ ದಿವಾನ್, ರಾಜ್ಯದಲ್ಲಿ ಮಳೆ ಕಡಿಮೆಯಾಗಿದ್ದು, ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂಬ ವಾಸ್ತವ ಸ್ಥಿತಿಯನ್ನು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ: ಕಾವೇರಿ ವಿವಾದ: ತಮಿಳುನಾಡು ಸಲ್ಲಿಸಿರುವ ಅರ್ಜಿ ಸಮರ್ಥನೀಯವಲ್ಲ, ಪ್ರಬಲ ವಾದ ಮಂಡಿಸುತ್ತೇವೆ- ಸಿದ್ದರಾಮಯ್ಯ
ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಕರ್ನಾಟಕ ಸುಪ್ರೀಂ ಕೋರ್ಟ್ ಆದೇಶದಂತೆ 40 ಟಿಎಂಸಿ ನೀರು ಬಿಡುತ್ತಿಲ್ಲ. 15 ದಿನಗಳ ಕಾಲ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಮುಂದಿನ 20 ದಿನ ಮುಂದುವರೆಸಬೇಕು, ಸುಪ್ರೀಂ ಕೋರ್ಟ್ ಆದೇಶದಂತೆ ನೀರು ಬಿಡುಗಡೆ ಮಾಡದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದರು.
ಉಭಯ ರಾಜ್ಯಗಳ ವಾದ ಆಲಿಸಿದ ನ್ಯಾಯಪೀಠ, ಉಭಯ ರಾಜ್ಯಗಳ ಜಲಾಶಯಗಳ ನೀರಿನ ಸಂಗ್ರಹದ ಬಗ್ಗೆ ವಾಸ್ತವ ವರದಿ ಸಲ್ಲಿಸುವಂತೆ ತಿಳಿಸಿ, ಮುಂದಿನ ವಿಚಾರಣೆಯನ್ನು ಬರುವ ಶುಕ್ರವಾರಕ್ಕೆ ಮುಂದೂಡಿತು.