ಕೊಡಗು ಜಿಲ್ಲೆಯ ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜೋರಾದ ಗಾಳಿ ಸಹಿತ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಹಲವು ಪ್ರಕೃತಿ ವಿಕೋಪ ಘಟನೆಗಳು, ಆಸ್ತಿಪಾಸ್ತಿಗಳ ಹಾನಿ ವರದಿಯಾಗಿದೆ. ಮಡಿಕೇರಿ: ಕೊಡಗು ಜಿಲ್ಲೆಯ ಕಾವೇರಿ ನದಿಯ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜೋರಾದ ಗಾಳಿ ಸಹಿತ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಹಲವು ಪ್ರಕೃತಿ ವಿಕೋಪ ಘಟನೆಗಳು, ಆಸ್ತಿಪಾಸ್ತಿಗಳ ಹಾನಿ ವರದಿಯಾಗಿದೆ.
ಹಾರಂಗಿ ಜಲಾಶಯದ ಕ್ರೆಸ್ಟ್ ಗೇಟ್‌ಗಳನ್ನು ತೆರೆಯಲಾಗಿದ್ದು, ನದಿಗಳಿಗೆ 20 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡಲಾಗಿದ್ದು, ತಗ್ಗು ಪ್ರದೇಶಗಳಲ್ಲಿರುವ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಇಂದು ಕೊಡಗು ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಮಡಿಕೇರಿ ತಾಲೂಕಿನ ಭಾಗಮಂಡಲದಲ್ಲಿ ಕಳೆದ 24 ಗಂಟೆಗಳಲ್ಲಿ (ನಿನ್ನೆ ಬೆಳಗ್ಗೆ ಅಂತ್ಯಕ್ಕೆ) 238 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕಾವೇರಿ ನದಿ ಸಂಗಮದಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಆಯೆಂಗೇರಿ-ಭಾಗಮಂಡಲ ರಸ್ತೆಗೆ ನೀರು ನುಗ್ಗಿದೆ.
ಕಾವೇರಿ ನದಿ ಪ್ರವಾಹದಿಂದಾಗಿ ಭಾಗಮಂಡಲ ವ್ಯಾಪ್ತಿಯ ಬೆಂಗೂರು ಗ್ರಾಮಕ್ಕೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ನಾಪೋಕ್ಲು-ಮಡಿಕೇರಿ ರಸ್ತೆಯೂ ಜಲಾವೃತವಾಗುವ ಹಂತದಲ್ಲಿದೆ. ಕರಡಿಗೋಡು-ನೆಲ್ಲಿಹುದಿಕೇರಿ ವ್ಯಾಪ್ತಿಯಲ್ಲಿ ಕಾವೇರಿ ನದಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಸ್ಥಳಕ್ಕೆ ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನದಿ ಪಾತ್ರದ ಸಮೀಪದಲ್ಲಿರುವ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ಹವಾಮಾನ ಬದಲಾವಣೆ, ಮುಂಗಾರು ವಿಳಂಬ, ಮಳೆ ಕೊರತೆ: ರಾಜ್ಯಾದ್ಯಂತ ರೈತರಲ್ಲಿ ಆತಂಕ
ನೀರಿನ ಮಟ್ಟ ಹೆಚ್ಚಾದರೆ ಪರಿಹಾರ ಕೇಂದ್ರ ತೆರೆಯಲು ಜಿಲ್ಲಾಡಳಿತದಿಂದ ವ್ಯವಸ್ಥೆ ಮಾಡಲಾಗುತ್ತಿದೆ. ಭಾರೀ ಗಾಳಿ ಮತ್ತು ಮಳೆಯಿಂದಾಗಿ ಮರಗರುಳಿ ಹಲವಾರು ಮನೆಗಳಿಗೆ ಹಾನಿಯಾಗಿದೆ.
ಉಕ್ಕಿ ಹರಿಯುತ್ತಿರುವ ನೇತ್ರಾವದಿ ನದಿ: ದಕ್ಷಿಣ ಕನ್ನಡದಲ್ಲಿ ನಿನ್ನೆ ಕೂಡ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಲವು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳೂರಿನಲ್ಲಿ ಶನಿವಾರ ರಾತ್ರಿ ಲೇಡಿಹಿಲ್ ಸರ್ಕಲ್ ಬಳಿ ಬೃಹತ್ ಮರವೊಂದು ಧರೆಗುರುಳಿದ್ದು, ಮೋರ್ಗಾನ್ಸ್ ಗೇಟ್ ಬಳಿಯ ಪ್ಲೈವುಡ್ ಫ್ಯಾಕ್ಟರಿ ಬಳಿಯ ಕಟ್ಟಡವೊಂದು ಭಾರೀ ಮಳೆಗೆ ಕುಸಿದಿದೆ.
ತುಂಗಭದ್ರಾದಲ್ಲಿ ನೀರಿನ ಮಟ್ಟ ಏರಿಕೆ: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಗಾಜನೂರಿನ ತುಂಗಾ ಮೇಲ್ದಂಡೆ ಅಣೆಕಟ್ಟಿನಿಂದ ನೀರು ಬಿಟ್ಟ ನಂತರ ನದಿಗೆ ಜೀವ ತುಂಬಿದೆ.