Home Uncategorized ಬಿಜೆಪಿಗೆ ನಾಗರಿಕತೆ ಇಲ್ಲ, ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ: ಸದನದಲ್ಲಿ ಬಿಜೆಪಿ ಶಾಸಕರ ನಡವಳಿಕೆ ಬಗ್ಗೆ ಸಿಎಂ...

ಬಿಜೆಪಿಗೆ ನಾಗರಿಕತೆ ಇಲ್ಲ, ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ: ಸದನದಲ್ಲಿ ಬಿಜೆಪಿ ಶಾಸಕರ ನಡವಳಿಕೆ ಬಗ್ಗೆ ಸಿಎಂ ಗರಂ

17
0

ನೆನ್ನೆ ವಿಧಾನಸಭೆಯಲ್ಲಿ ನಡೆದ ಗದ್ದಲ, ಬಿಜೆಪಿ ಶಾಸಕರ ನಡವಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಬೆಂಗಳೂರು: ನೆನ್ನೆ ವಿಧಾನಸಭೆಯಲ್ಲಿ ನಡೆದ ಗದ್ದಲ, ಬಿಜೆಪಿ ಶಾಸಕರ ನಡವಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರು, ಉಪಸಭಾಧ್ಯಕ್ಷರಾಗಿ ಕಲಾಪ ನಡೆಸುತ್ತಿದ್ದ ರುದ್ರಪ್ಪ ಲಮಾಣಿ ಅವರತ್ತ ಪೇಪರ್ ಎಸೆದು, ಮಸೂದೆ ಪ್ರತಿಗಳನ್ನು ಹರಿದು ಹಾಕಿದ್ದನ್ನು ಸಿಎಂ ಸಿದ್ದರಾಮಯ್ಯ ಅನಾಗರಿಕ ವರ್ತನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಶಾಸಕರು, ಮಾಜಿ ಸಚಿವ ನಡವಳಿಕೆಯ ಕಾರಣದಿಂದಾಗಿ 10 ಶಾಸಕರನ್ನು ಸದನದ ಮುಂದಿನ ಅವಧಿವರೆಗೂ ಅಮಾನತುಗೊಳಿಸಲಾಗಿದೆ. ಸರ್ಕಾರದ ನಡೆಯನ್ನು ಖಂಡಿಸಿರುವ ಜೆಡಿಎಸ್ ಹಾಗೂ ಬಿಜೆಪಿ ಇಂದು ಸದನದ ಕಲಾಪವನ್ನು ಬಹಿಷ್ಕರಿಸಿದ್ದವು. 

ಈ ವಿಚಾರವಾಗಿ ಸದನದಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಶಾಸಕರು ಅನಾಗರಿಕ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಹೇಳಿದ್ದು ಬಿಜೆಪಿಯನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಆರೋಪಿಸಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಹಾಗೂ ಸಂಸದೀಯ ವ್ಯವಸ್ಥೆ ವಿರೋಧಿ ಎಂದು ಹೇಳಿದ್ದಾರೆ. 

ಇದಷ್ಟೇ ಅಲ್ಲದೇ ಅವರು ಸಭಾಧ್ಯಕ್ಷರು, ಉಪಸಭಾಧ್ಯಕ್ಷರ ಹುದ್ದೆಗೆ ಗೌರವ ಹೊಂದಿಲ್ಲ ಎಂದು ಬಜೆಟ್ ಮೇಲಿನ ಚರ್ಚೆಗೆ ಪ್ರತಿಕ್ರಿಯೆ ನೀಡುವಾಗ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನೆನ್ನೆಯ ಬಿಜೆಪಿ ಶಾಸಕರ ನಡವಳಿಕೆಯನ್ನು ನಾನು ಏನೆಂದು ಕರೆಯಬೇಕು? ಅಸಭ್ಯ ಎನ್ನುವ ಶಬ್ದವೂ ಅವರ ನಡವಳಿಕೆಯನ್ನು ಸೂಚಿಸಲು ಸಭ್ಯವಾದ ಶಬ್ದವಾಗುತ್ತದೆ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆಗೆ ರಾಜ್ಯಪಾಲರಿಗೆ ಮನವಿ: ಬಸವರಾಜ ಬೊಮ್ಮಾಯಿ

ಘಟನೆಯ ಬಗ್ಗೆ ನೋವು ವ್ಯಕ್ತಪಡಿಸಿರುವ ಸಿದ್ದರಾಮಯ್ಯ,  “ನಾನು 1983 ರಿಂದ ವಿಧಾನಸಭೆಯಲ್ಲಿದ್ದೇನೆ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸಿದ್ದೇನೆ ಆದರೆ ಎಂದಿಗೂ ಇಂತಹ ನಡವಳಿಕೆಯನ್ನು ಸದನದಲ್ಲಿ ನೋಡಿಲ್ಲ, ಕಾಂಗ್ರೆಸ್ ಶಾಸಕರು ಎಂದಿಗೂ ಈ ರೀತಿ ನಡೆದುಕೊಂಡಿಲ್ಲ ಎಂದು ಹೇಳಿದ್ದಾರೆ. ನೆನ್ನೆಯ ಘಟನೆಯಿಂದ ಲಮಾಣಿ ಅವರು ಕುಗ್ಗಿದ್ದಾರೆ, ಆದರೆ ಅವರೊಂದಿಗೆ ಕಾಂಗ್ರೆಸ್ ಎಂದಿಗೂ ಇರಲಿದೆ, ಆದ್ದರಿಂದ ಅವರು ಕುಗ್ಗಬಾರದು ಎಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.

ಲಮಾಣಿ ಅವರು ಶತಮಾನಗಳಿಂದ ಶೋಷಣೆಗೆ ಒಳಗಾದ ದಲಿತ ಸಮುದಾಯದವರಾಗಿದ್ದಾರೆ. ಒಂದು ವೇಳೆ ಸದನದಲ್ಲಿ ಮಾರ್ಷಲ್ ಗಳು ಇಲ್ಲದೇ ಇದ್ದಿದ್ದರೆ ಬಿಜೆಪಿಯವರು ಉಪಸಭಾಧ್ಯಕ್ಷರ ಮೇಲೆ ಹಲ್ಲೆಯ ಯತ್ನವನ್ನೂ ಮಾಡುವ ಸಾಧ್ಯತೆ ಇತ್ತು, ನೆನ್ನೆಯ ಅವರ ನಡವಳಿಕೆ ಹಾಗೆಯೇ ಇತ್ತು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಇದೇ ವೇಳೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ಬಿಜೆಪಿಯನ್ನು ಸಿದ್ದರಾಮಯ್ಯ ಟೀಕಿಸಿದ್ದು, ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಯಲ್ಲಿ ಹಾಗೂ ಸಂಮ್ವಿಧಾನದ ಬಗ್ಗೆ ಬಿಜೆಪಿಗರಿಗೆ ನಂಬಿಕೆ ಇಲ್ಲ. ಅವರು ರಚನಾತ್ಮಕ ವಿಪಕ್ಷವಾಗಿ ಕಾರ್ಯನಿರ್ವಹಿಸುವ ಬದಲು ಪ್ರತಿಭಟನೆಗಳಲ್ಲೇ ಕಾಲ ಕಳೆಯುತ್ತಾರೆ ಎಂದೂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬಿಜೆಪಿಯವರು ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಿಲ್ಲ. ಆದ್ದರಿಂದ ವಿಪಕ್ಷ ನಾಯಕನೇ ಇಲ್ಲದೇ ಮೊದಲ ಬಾರಿಗೆ ಬಜೆಟ್ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿ ವಿಪಕ್ಷನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ, ರಾಜಕೀಯವಾಗಿ ದಿವಾಳಿಯಾಗಿದೆ ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

ಪ್ರಧಾನಿ ಮೋದಿ ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡಿದ್ದರು ಆದರೆ ಕಾಂಗ್ರೆಸ್ ಆ ರೀತಿ ಎಂದಿಗೂ ಯೋಚಿಸುವುದಿಲ್ಲ.  ನಾವು ಬಿಜೆಪಿ ಮುಕ್ತ ಭಾರತ ಅಂತಲೋ ಬಿಜೆಪಿ ಮುಕ್ತ ಕರ್ನಾಟಕ ಎಂದೋ ಹೇಳುವುದಿಲ್ಲ. ಏಕೆಂದರೆ ಅವರು ಕೋಮುವಾದಿಗಳು ಹಾಗೂ ಸಾಮಾಜಿಕ ಸೌಹಾರ್ದತೆಯನ್ನು ಹಾಳುಮಾಡುವ ದುಷ್ಟ ಶಕ್ತಿಗಳು, ನಮ್ಮ ಉದ್ದೇಶ ಒಂದೇ ಅದು ಅಂತಹ ಶಕ್ತಿಗಳು ಅಧಿಕಾರಕ್ಕೆ ಬರಬಾರದೆಂಬುದಾಗಿದೆ ಎಂದು ಸಿದ್ದರಾಮಯ್ಯ ಸದನಕ್ಕೆ ತಿಳಿಸಿದರು.

LEAVE A REPLY

Please enter your comment!
Please enter your name here