ನಂದಿಪರ್ವತ ಆಶ್ರಮದ ಜೈನ ಸನ್ಯಾಸಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಅಮಾನುಷ ಹತ್ಯೆ ಖಂಡಿಸಿ ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಜೈನ ಸಮುದಾಯದವರು ಭಾನುವಾರ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು. ಬೆಳಗಾವಿ: ನಂದಿಪರ್ವತ ಆಶ್ರಮದ ಜೈನ ಸನ್ಯಾಸಿ ಆಚಾರ್ಯ ಶ್ರೀ ಕಾಮಕುಮಾರ ನಂದಿ ಮಹಾರಾಜರ ಅಮಾನುಷ ಹತ್ಯೆ ಖಂಡಿಸಿ ಇಲ್ಲಿನ ಸುವರ್ಣ ವಿಧಾನಸೌಧದ ಬಳಿ ಜೈನ ಸಮುದಾಯದವರು ಭಾನುವಾರ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜೈನ ಮುನಿ ಶ್ರೀ ಬಾಳಾಚಾರ್ಯ ಸಿದ್ದಸೇನ್ ಮಹಾರಾಜರ ನೇತೃತ್ವದಲ್ಲಿ ನೂರಾರು ಜನರು ಎನ್ ಎಚ್ 4 ನಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು.
‘ಹತ್ಯೆಯ ದಿನ ಜೈನ ಸಮುದಾಯಕ್ಕೆ ಕರಾಳ ದಿನ. ನಮ್ಮ ಪ್ರತಿಭಟನೆ ಯಾವುದೇ ಧರ್ಮ, ಜಾತಿ, ಪಕ್ಷ ಅಥವಾ ಯಾವುದೇ ಸರ್ಕಾರದ ವಿರುದ್ಧ ಅಲ್ಲ. ನಮ್ಮ ಜೈನ ಮುನಿಯ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದು ಜೈನ ಮುನಿ ತಿಳಿಸಿದರು.
ಇದನ್ನೂ ಓದಿ: ವಿದ್ಯುತ್ ಶಾಕ್ ಕೊಟ್ಟು, ಅಂಗಾಂಗ ಕತ್ತರಿಸಿ ಜೈನ ಮುನಿಯ ಬರ್ಬರ ಹತ್ಯೆ!
‘ನಮ್ಮ ಧ್ವನಿ ಮುಖ್ಯಮಂತ್ರಿಗಳಿಗೆ ಮಾತ್ರವಲ್ಲ, ಪ್ರಧಾನಿಯವರಿಗೂ ತಲುಪಬೇಕು. ಜೈನರು ಅಹಿಂಸೆಯನ್ನು ನಂಬುತ್ತಾರೆ. ಆದರೆ, ನಮ್ಮ ಮುನಿಗಳನ್ನು ಕೊಲ್ಲುವುದು ಸಹನೀಯವಲ್ಲ. ಇಂತಹ ಕೃತ್ಯಗಳು ಮರುಕಳಿಸದಂತೆ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದರು.
ಸಮಾಜದ ಮುಖಂಡ ಬಾಹುಬಲಿ ಚೌಗುಲೆ ಮಾತನಾಡಿ, ‘ಜೈನ ಮುನಿಗಳು ತಮ್ಮ ವಸ್ತ್ರಗಳನ್ನೂ ತ್ಯಾಗ ಮಾಡುವವರು. ಆರೋಪಿಯು ಮುನಿಗಳಿಂದ ಪಡೆದ ಹಣ ಟ್ರಸ್ಟ್‌ಗೆ ಸೇರಿತ್ತು. ಆ ಹಣವನ್ನು ಮರುಪಾವತಿಸಲು ಕೇಳಿದ ನಂತರ ಮುನಿಗಳನ್ನು ಕೊಲ್ಲಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ಚಿತ್ರಿಸಲಾಗಿದೆ ಎಂದರು.
ಇದನ್ನೂ ಓದಿ: ಬೆಳಗಾವಿ ಜೈನ ಮುನಿ ಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸಿ: ಬಿಜೆಪಿ ಆಗ್ರಹ
ಪ್ರತಿಭಟನೆಯಲ್ಲಿ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ ಉಪಸ್ಥಿತರಿದ್ದರು.