ಮಳೆಗಾಲ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಜನತೆ ಪಶ್ಚಿಮ ಘಟ್ಟಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ, ಆದರೆ, ಬೆಂಗಳೂರಿನಲ್ಲೇ ಈ ಪಶ್ಚಿಮ ಘಟ್ಟಗಳು ನಿರ್ಮಾಣವಾದರೆ? ಹೇಗೆ… ಇಂತಹದ್ದೊಂದು ಯೋಜನೆಯ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ. ಬೆಂಗಳೂರು: ಮಳೆಗಾಲ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಜನತೆ ಪಶ್ಚಿಮ ಘಟ್ಟಗಳ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಸಾಮಾನ್ಯ, ಆದರೆ, ಬೆಂಗಳೂರಿನಲ್ಲೇ ಈ ಪಶ್ಚಿಮ ಘಟ್ಟಗಳು ನಿರ್ಮಾಣವಾದರೆ? ಹೇಗೆ… ಇಂತಹದ್ದೊಂದು ಯೋಜನೆಯ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.
ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣವಾಗಿರುವ ಲಾಲ್‌ಬಾಗ್‌ನಲ್ಲಿ ಮಿನಿ ಪಶ್ಚಿಮ ಘಟ್ಟಗಳನ್ನು ನಿರ್ಮಾಣ ಮಾಡಲು ಚಿಂತನೆಗಳು ನಡೆಯುತ್ತಿವೆ.
ಇದಕ್ಕಾಗಿ ಆರು ಎಕರೆ ಬಂಜರು ಭೂಮಿಯಲ್ಲಿ ಸಹ್ಯಾದ್ರಿ ಪ್ರದೇಶದಲ್ಲಿ ಬೆಳೆಯುವ ವಿವಿಧ ಜಾತಿಯ ಮರಗಳನ್ನು ಬೆಳೆಯಲು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಜೀವವೈವಿಧ್ಯ ತಜ್ಞ ಕೇಶವ ಮೂರ್ತಿ ಅವರು, “ಎರಡು ವರ್ಷಗಳ ಹಿಂದೆ ಸಹ್ಯಾದ್ರಿ ಪ್ರದೇಶದಿಂದ 190 ಕ್ಕೂ ಹೆಚ್ಚು ಜಾತಿಯ ಸಸಿಗಳನ್ನು ತರಿಸಿ ನೆಡಲಾಗಿದೆ, ಅದರಲ್ಲಿ ಕೆಲವು ಹಣ್ಣಿನ ಗಿಡಗಳು ಸೇರಿದಂತೆ 132 ಗಿಡಗಳು ಉಳಿದುಕೊಂಡಿವೆ ಎಂದು ಹೇಳಿದರು.
ಇದನ್ನೂ ಓದಿ: ಆಗಸ್ಟ್ 4 ರಿಂದ 15ರವರೆಗೆ ಲಾಲ್ ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ..!
ಇದರಿಂದ ಈಗ ಮತ್ತಷ್ಟು ಹೆಚ್ಚು ಗಿಡಗಳನ್ನು ನೆಡಲು ತೋಟಗಾರಿಕಾ ಇಲಾಖೆ ಉತ್ಸಾಹವಾಗಿದೆ, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮೈಸೂರು ಮತ್ತು ಕೊಡಗು ಜಿಲ್ಲೆಗಳ ಪಶ್ಚಿಮ ಘಟ್ಟಗಳ 400 ಕ್ಕೂ ಹೆಚ್ಚು ಜಾತಿಯ ಗಿಡಗಳನ್ನು ಲಾಲ್‌ಬಾಗ್‌ನಲ್ಲಿ ನೆಡಲಾಗಿದೆ ಎಂದು ತಿಳಿಸಿದ್ದಾರೆ.
ಇದರ ಭಾಗವಾಗಿ ಮಂಗಳವಾರ ಸಿದ್ದಾಪುರ ಸಮೀಪದ ಲಾಲ್‌ಬಾಗ್ ರಾಕ್ ಗಾರ್ಡನ್‌ನಲ್ಲಿ ತೋಟಗಾರಿಕಾ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್, ಖ್ಯಾತ ಪರಿಸರವಾದಿ ಡಾ.ಯಲ್ಲಪ್ಪ ರೆಡ್ಡಿ, ಕರ್ನಾಟಕ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಮಾಜಿ ಸಲಹೆಗಾರ ಎಂ.ಆರ್.ದೊರೆಸ್ವಾಮಿ ಜೊತೆಗೂಡಿ ಸಾಂಕೇತಿಕವಾಗಿ ಸಸಿ ನೆಟ್ಟರು.
ಕಳೆದ ಎರಡು ವರ್ಷಗಳಿಂದ ತೋಟಗಾರಿಕೆ ಇಲಾಖೆ ಸಿಬ್ಬಂದಿ ಮಣ್ಣಿನ ಫಲವತ್ತತೆ ಕುರಿತು ಕೆಲಸ ಮಾಡುತ್ತಿದ್ದು, ಮಂಗಳವಾರ ಸಹ್ಯಾದ್ರಿ ಬೆಟ್ಟದಿಂದ ತರಿಸಿದ್ದ 400 ಸಸಿಗಳನ್ನು ವಿದ್ಯಾರ್ಥಿ ಸ್ವಯಂಸೇವಕರ ನೆರವಿನಿಂದ ನೆಡಲಾಗಿದೆ.
ಮುಂದಿನ ದಿನಗಳಲ್ಲಿ, ಜಲಚರಗಳು ಮತ್ತು ಅಂತರ್ಜಲ ಮಟ್ಟ ಸುಧಾರಣೆಗಾಗಿ ಸಣ್ಣ ಕೊಳಗಳನ್ನು ಸಹ ರಚಿಸಲಾಗುವುದು, ಇದು ಮರಗಳ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಲಾಲ್‌ಬಾಗ್ ಅಧಿಕಾರಿಗಳಿಗೆ ಈ ಯೋಜನೆಯಲ್ಲಿ ಸಹಾಯ ಮಾಡುತ್ತಿರುವ ಕೇಶವ ಮೂರ್ತಿ ತಿಳಿಸಿದರು.
ಮುಂದಿನ ದಿನಗಳಲ್ಲಿ ಪಶ್ಚಿಮ ಘಟ್ಟದ ಪೊದೆಗಳು, ಗಿಡಮೂಲಿಕೆಗಳ ಸಸ್ಯಗಳನ್ನು ಸೇರಿಸಲಾಗುವುದು ಎಂದು ತೋಟಗಾರಿಕಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.