ಕಾಂಗ್ರೆಸ್ ನ ನಾಯಕರು ಸೇರಿದಂತೆ ಕಾರ್ಯಕರ್ತರು, ಬೆಂಬಲಿಗರು ನಗರದ ಸುಮಾರು 300 ಕಡೆಗಳಲ್ಲಿ ಇಂದು ಏಕಕಾಲಕ್ಕೆ ಬಿಜೆಪಿ ಸರ್ಕಾರ ವಿರುದ್ಧ ಮೌನ ಪ್ರತಿಭಟನೆ ನಡೆಸಿದರು. ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಭ್ರಷ್ಟಾಚಾರದಲ್ಲಿ ಮುಳುಗಿದೆ, ಗುತ್ತಿಗೆ ಕಾರ್ಮಿಕರು ಸರ್ಕಾರದ ಭ್ರಷ್ಟಾಚಾರದಲ್ಲಿ ನಲುಗಿ ಹೋಗುತ್ತಿದ್ದಾರೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕಳೆದ ವರ್ಷ ವ್ಯಾಪಕ ಸಂಚಲನ ಮೂಡಿಸಿತ್ತು. ವಿರೋಧ ಪಕ್ಷದ ನಾಯಕರು ಈ ಬಗ್ಗೆ ಆಗಾಗ ಪ್ರಸ್ತಾಪಿಸುತ್ತಾ ಬಂದಿದ್ದು ಸರ್ಕಾರದ ಮುಖ್ಯಮಂತ್ರಿ, ಸಚಿವರುಗಳು, ಶಾಸಕರು, ಅಧಿಕಾರಿಗಳ ಮೇಲೆ ತೀವ್ರ ವಾಗ್ದಾಳಿಯನ್ನೇ ನಡೆಸುತ್ತಾರೆ.
ಇನ್ನೇನು ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದೆ. ಈ ಹೊತ್ತಿನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ. ಇಂದು ಕಾಂಗ್ರೆಸ್ ನ ನಾಯಕರು ಸೇರಿದಂತೆ ಕಾರ್ಯಕರ್ತರು, ಬೆಂಬಲಿಗರು ನಗರದ ಸುಮಾರು 300 ಕಡೆಗಳಲ್ಲಿ ಏಕಕಾಲಕ್ಕೆ ಬಿಜೆಪಿ ಸರ್ಕಾರ ವಿರುದ್ಧ ಮೌನ ಪ್ರತಿಭಟನೆ ನಡೆಸಿದ್ದರು. ಭ್ರಷ್ಟ ಬಿಜೆಪಿ ಸರ್ಕಾರ 40% ಕಮಿಷನ್ ದಂಧೆಯಲ್ಲಿ ಮುಳುಗಿದ್ದು ಸಾಮಾನ್ಯ ಜನರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರದಲ್ಲಿ ಲಂಚ ಕೊಡದಿದ್ದರೆ ಯಾವ ಕೆಲಸ ಆಗಲ್ಲ. ಡಿಸಿಪಿ, ಎಸ್ಪಿ ಪೋಸ್ಟಿಂಗ್ಗೂ ಲಂಚ ಕೊಡಬೇಕು. ಎಲ್ಲಾ ಕಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹೀಗಾಗಿ ಬೆಂಗಳೂರಿನಾದ್ಯಂತ ಮೌನ ಪ್ರತಿಭಟನೆ ಮಾಡಿದ್ದೇವೆ. ಬೆಂಗಳೂರಿನಲ್ಲಿ ನಾವು 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬಿಜೆಪಿಗೆ ಭಯ ಇದೆ, ಹೀಗಾಗಿ ಬಿಬಿಎಂಪಿ ಚುನಾವಣೆ ಮಾಡುತ್ತಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ: ಒಂದು ಕಡೆ ಪ್ರತಿಭಟನೆ ಮಾಡಿದ್ರೆ ಯಾರೂ ಬರಲ್ಲವೆಂದು ಕಾಂಗ್ರೆಸ್ ಮುನ್ನೂರು ಕಡೆ ಮಾಡುತ್ತಿದೆ: ಸಿಎಂ ಬೊಮ್ಮಾಯಿ ಟೀಕೆ
ಕಾಂಗ್ರೆಸ್ ವಿರುದ್ಧ ಸಚಿವ.ಕೆ.ಸುಧಾಕರ್ ಭ್ರಷ್ಟಾಚಾರ ಆರೋಪ ಹೊರಿಸಿದ ವಿಚಾರವಾಗಿ ಮಾತನಾಡಿದ ಅವರು ಸಚಿವ ಡಾ.ಕೆ.ಸುಧಾಕರ್ ಈ ಹಿಂದೆ ಯಾವ ಪಕ್ಷದಲ್ಲಿ ಇದ್ದರು? ಕೊರೊನಾ ಸಮಯದಲ್ಲಿ ಲೂಟಿ ಮಾಡಿದ್ದು ಸುಧಾಕರ್ ತಾನೆ? ನಮ್ಮ ಮುಖ ಚೆನ್ನಾಗಿದೆ, ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಳ್ಳಿ. 60 ವರ್ಷ ನಾವು ಲೂಟಿ ಮಾಡಿದ್ರೆ ತನಿಖೆ ಮಾಡಿಸಿ ಎಂದು ಹೇಳಿದರು.
40% ಅಲ್ಲ 50 ಪರ್ಸೆಂಟ್ ಬೆಂಗಳೂರಿನಲ್ಲಿ ಭ್ರಷ್ಟಾಚಾರ ನಡೆದಿದೆ: ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಹೀಗಾಗಿ ಬೆಂಗಳೂರಿನಲ್ಲಿ ನಮ್ಮ ಹೋರಾಟ ಮುಂದುವರೆದಿದೆ. 40% ಅಲ್ಲ 50 ಪರ್ಸೆಂಟ್ ಬೆಂಗಳೂರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಅಂತಾ ಹೇಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ಆಗಿದ್ದಾಗ ಏನು ಮಾಡುತ್ತಿದ್ದರು? ವಿಪಕ್ಷದ ಸ್ಥಾನದಲ್ಲಿ ಕುಳಿತು ಬಿಜೆಪಿಯವರು ಏನು ಮಾಡುತ್ತಿದ್ದರು? ಭ್ರಷ್ಟಾಚಾರ ಆಗದಿದ್ರೆ ಕೆಂಪಣ್ಣ ಯಾಕೆ ಮೋದಿಗೆ ಪತ್ರ ಬರೆಯುತ್ತಿದ್ದರು? ಎಂದು ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್, ರಂದೀಪ್ ಸಿಂಗ್ ಸುರ್ಜೆವಾಲಾ ಕೂಡ ಬಿಜೆಪಿ ಸರ್ಕಾರವನ್ನು ಟೀಕಿಸಿದರು.
BJP’s misrule in Karnataka is climbing new heights everyday.
Protested against this incompetence alongside Sri @RSSurjewala and other Congress leaders at Trinity Circle, Bengaluru, highlighting 4.5 years of govt failures.#KarnatakaWantsCongress pic.twitter.com/1KzdeEKKvr
— DK Shivakumar (@DKShivakumar) January 23, 2023