ಬೆಂಗಳೂರು:
ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳೆಯರ ಮೇಲೆ ಅಪಾರ ಗೌರವವಿದೆ. ಹೋರಾಟ ಇಲ್ಲದೆ ಹಕ್ಕು ಸಿಗುವುದಿಲ್ಲ; ಹೋರಾಟವೇ ಜೀವನದ ಲಕ್ಷಣ. ಅದಕ್ಕೆ ಮಹಿಳೆಯರು ನಿರಂತರ ಹೋರಾಟದ ಬದುಕನ್ನು ನಡೆಸುತ್ತಲೇ ಇರುವುದು ಕಂಡು ಬಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಬನಶಂಕರಿ ಮಹಿಳಾ ಸಂದ ಸಹಯೋಗದೊಂದಿಗೆ ಕಸಾಪದ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತ ಪಿ. ಲಂಕೇಶ್ ನೆನಪು (ಜನ್ಮದಿನಾಚರಣೆ) ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಶಕ್ತಿ, ನಾಲ್ಕು ಶಕ್ತಿಗಳ ಸಮ್ಮಿಲನವೇ ಮಹಿಳೆ. ತಾಳ್ಮೆ, ಧೈರ್ಯ, ವಿಶ್ವಾಸ ಮತ್ತು ಶಕ್ತಿ ಇವುಗಳನ್ನೊಳಗೊಂಡ ಸಂಪೂರ್ಣ ಚಿತ್ರಣವೇ ಮಹಿಳೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಲಂಕೇಶ್ ಅವರ ಕುರಿತು ಮಾತನಾಡುತ್ತ, ಲಂಕೇಶ ಅವರಿಗೆ ಸಮಾಜದ ಕುರಿತು ಇರುವ ಕಾಳಜಿ ಮೆಚ್ಚಲೇಬೇಕು. ಸ್ವತಃ ಪ್ರಧಾನಿ ಅವರು ಕಚೇರಿಗೆ ಬರುತ್ತೇನೆ ಎಂದಾಗಲೂ ಬರಬೇಡಿ, ನೀವು ಬರುವುದರಿಂದ ಜನರು ತೊಂದರೆಗೊಳಗಾಗುತ್ತಾರೆ ದಯಮಾಡಿ ಬರಬೇಡಿ ಎಂದ ದಾಢ್ಯ ವ್ಯಕ್ತಿತ್ವ ಅವರದು. ಶ್ರೀಸಾಮಾನ್ಯರಿಗೂ ಅವರು ಗೌರವಾನ್ವಿತ ಬದುಕನ್ನ ಕಟ್ಟಿಕೊಡಲು ಅಕ್ಷರ ಹೋರಾಟ ಮಾಡಿದವರು ಎಂದರು.
ಕಾರ್ಯಕ್ರಮ ಉದ್ಾಟಿಸಿ ಮಾತನಾಡಿದ, ಹಿರಿಯ ರಂಗಭೂಮಿ ಕಲಾವಿದೆ ಶ್ರೀಮತಿ ಮಾಲತಿ ಸುಧೀರ್ – ಮಹಿಳೆ ಪುರುಷ ಪ್ರಧಾನ ಸಮಾಜಕ್ಕೆ ಗಟ್ಟಿ ಬುನಾದಿ ಹಾಕಿಕೊಡುವವಳು, ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್, ಸಾವಿತ್ರಿ ಫುಲೆ, ಕಿರಣ್ ಬೇಡಿ ಮುಂತಾದವರು ಹಾಕಿ ಕೊಟ್ಟ ದಾರಿಯೇ ಮಹಿಳೆಯರಿಗೆ ಮಾರ್ಗದರ್ಶನವಾಗಿದೆ. ಆ ಮೂಲಕವೇ ಮಹಿಳೆಯರು ಧೈರ್ಯವಂತರಾಗಿ ಬಾಳಬೇಕು ಎಂದರು.
ಹಿರಿಯ ಐ.ಪಿ.ಎಸ್. ಅಧಿಕಾರಿ ಶ್ರೀಮತಿ ಸವಿತಾ ಶ್ರೀನಿವಾಸ್ ಅವರು ಮಾತನಾಡಿ, ಮಹಿಳೆ ಹೋರಾಟದ ಬದುಕನ್ನು ಕಡೆಗಣಿಸುವುದಕ್ಕೆ ಸಾಧ್ಯವೇ ಇಲ್ಲ. ದಿನಗಳು ಬದಲಾದರೂ ಮಹಿಳೆಯರ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ. ವಿಶ್ವದಾದ್ಯಂತ ಮಹಿಳೆಯರಿಗಿರುವ ಏಕರೂಪ ಸಮಸ್ಯೆಗಳೇ ಇಂದಿಗೂ ಹೆಚ್ಚಾಗಿ ಕಂಡು ಬರುತ್ತವೆ. ಸಾಧನೆ ಮತ್ತು ಸಾಧಿಸುವ ಗುರುತರ ಜವಾಬ್ದಾರಿ ಹೆಣ್ಣಿಗಿದೆ. ಆದರೆ ರಾಜಕೀಯವಾಗಿ ಮಹಿಳೆಗೆ ಸಾಕಷ್ಟು ಪ್ರಾತಿನಿಧ್ಯ ದೊರಕಬೇಕಿದೆ ಎಂದರು.
ಹಿರಿಯ ಲೇಖಕಿ ಡಾ. ಎಲ್. ಜಿ. ಮೀರಾ ಅವರು ಮಾತನಾಡಿ, ಹೆಣ್ಣು ಮಗುವಿಗೆ ಮೊದಲು ಹುಟ್ಟುವುದಕ್ಕಾಗಿ ಬಿಡುವುದು ಅವಶ್ಯವಾಗಿದೆ. ಕಾರಣ, ಅತ್ಯಾಹತವಾಗಿ ಹೆಣ್ಣು ಭ್ರೂಣ ಹತ್ಯೆ ಆಗುತ್ತಿದೆ. ವಿದ್ಯೆ ಕಲಿತ ಹೆಣ್ಣು ಮಗುವು ಶಾಪವಲ್ಲ. ಅದು ಸಮಾಜದ ದೀಪ ಎಂದು ಬಣ್ಣಿಸಿದರು.
ಹಿರಿಯ ಪತ್ರಕರ್ತ ಹಾಗೂ ವಿಮರ್ಶಕ ರವೀಂದ್ರ ರೇಷ್ಮೆ ಅವರು ಮಾತನಾಡಿ, ಇಂದು ಕಾರ್ಯಕ್ರಮದಲ್ಲಿ ಸಮಯ ಪಾಲನೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಪಿ. ಲಂಕೇಶ್ ಅವರಿಗೆ ನಮನ ಸಲ್ಲಿಸಿದೆ. ಅವರು ಇದ್ದಾಗ ಇಂತಹ ಶಿಸ್ತು ಕಂಡು ಸಂತೋಷಪಡುತ್ತಿದ್ದರು. ಬಹುತೇಕರು ಲಂಕೇಶ್ ಅವರನ್ನು ಯರ್ ಬ್ರ್ಯಾಂಡ್ ಎಂದೇ ಕರೆದರು. ಆದರೆ ಅವರು ಹೆಂಗರಳಿನವರು. ಜಾತೀಯತೆಯ ಜೈಲಿನಿಂದ ರಾಜಕಾರಣಿಗಳೂ ಮೊದಲು ಬರಬೇಕು ಎಂದು ಯಾವಾಗಲೂ ಹೇಳುತ್ತಿದ್ದರು. ಪ್ರತಿಷ್ಠಿತ ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದ ಅವರು, ರಾಜಕೀಯ ಒತ್ತಡಕ್ಕಾಗಿ ಅಂಕಣವನ್ನೇ ನಿಲ್ಲಿಸಿದ್ದಕ್ಕಾಗಿ ಸ್ವತಃ ಪತ್ರಿಕೆಯನ್ನೇ ಕಟ್ಟಿ, ಪತ್ರಿಕಾರಂಗದಲ್ಲೊಂದು ಹೊಸ ನಿರ್ಭೀತ ಮನ್ವಂತರವನ್ನೇ ಸೃಷ್ಟಿಮಾಡಿದವರು ಎಂದರು.
ಬನಶಂಕರಿ ಮಹಿಳಾ ಸಂದ ಅಧ್ಯಕ್ಷರಾದ ಶಾಂತ ರಾಮಸ್ವಾಮಿ ಮಾತನಾಡಿ, ಪ್ರತಿಯೊಬ್ಬ ಮಹಿಳೆಯಲ್ಲೂ ಒಂದು ಶಕ್ತಿ ಇರುತ್ತದೆ. ಮನೆಯಲ್ಲಿರುವ ಗೃಹಿಣಿಯಲ್ಲೂ ಸಹ ಒಂದು ಶಕ್ತಿ ಇರುತ್ತದೆ. ಕೆಲವರು ಆ ಶಕ್ತಿಯನ್ನು ಮೀರಿ ಸಮಾಜದಲ್ಲಿ ಗುರುತಿಸಿಕೊಂಡಿರುತ್ತಾರೆ. ಇನ್ನು ಕೆಲವರು ಮನೆಯಲ್ಲಿದ್ದೇ ಸಾಧನೆಯನ್ನು ಮಾಡುತ್ತಾರೆ. ಇದು ಹೆಣ್ಣಿನಿಂದ ಮಾತ್ರ ಸಾಧ್ಯ ಎಂದರು.
ಪತ್ರಕರ್ತೆ ಪುಣ್ಯವತಿ ಮಾತನಾಡಿ, ಮಹಿಳೆಯರು ಮೀಸಲಾತಿ ಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಆದರೆ ನನ್ನ ಅಭಿಪ್ರಾಯದಂತೆ ಮೀಸಲಾತಿ ಬೇಡ. ಸಾಧನೆಗೆ ಸಾಕಷ್ಟು ಅವಕಾಶವಿದೆ. ಆದರೆ ಸವಾಲುಗಳು ನಮ್ಮ ಎದುರಿಗಿವೆ. ಅವುಗಳನ್ನು ನಾವು ಎದುರಿಸಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ. ಭ ರಾಮಲಿಂಗಶೆಟ್ಟಿ ಅವರು ಸ್ವಾಗತಿಸಿ ನಿರೂಪಿಸಿದರು. ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ್ಪಾಂಡು ಅವರು ವಂದನಾರ್ಪಣೆ ನಡೆಸಿದರು.