ಮುಂಬಯಿ: ವಿಮಾನ ದುರಂತದಲ್ಲಿ ಮೃತಪಟ್ಟ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್ಸಿಪಿ) ನಾಯಕ ಅಜಿತ್ ಪವಾರ್ ಮಗ ಪಾರ್ಥ ಪವಾರ್ ಅವರಿಗೆ ಎನ್ಸಿಪಿ ರಾಜ್ಯಸಭೆ ಟಿಕೆಟ್ ನೀಡಿದೆ.
ಎನ್ಸಿಪಿ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಅವರು ಪಾರ್ಥ ಪವಾರ್(35) ಹೆಸರನ್ನು ಘೋಷಣೆ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಪಾರ್ಥ ಹೆಸರು ಘೋಷಣೆ ಮಾಡಲಾಗಿದೆ.
ಮಾರ್ಚ್ 16 ರಂದು ರಾಜ್ಯ ಸಭೆ ಚುನಾವಣೆ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ 37 ಶಾಸಕರ ಬೆಂಬಲ ಬೇಕಿದೆ. ಆದರೆ ಪಕ್ಷವು ಪ್ರಸ್ತುತ 40 ಶಾಸಕರನ್ನು ಹೊಂದಿರುವುದರಿಂದ ಪಾರ್ಥ್ ಪವಾರ್ ಗೆಲುವು ನಿರೀಕ್ಷಿತವಾಗಿದೆ. ಪಾರ್ಥ್ ಪವಾರ್ ಆರು ವರ್ಷಗಳ ಕಾಲ ರಾಜ್ಯ ಸಭಾ ಸದಸ್ಯತ್ವ ಪಡೆಯಲಿದ್ದಾರೆ.
ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಪಾರ್ಥ, 2019ರ ಲೋಕಸಭೆ ಚುನಾವಣೆಯಲ್ಲಿ ಮಾವಲ್ ಕ್ಷೇತ್ರದಿಂದ ಸ್ಪರ್ಧಿಸಿ ಅವಿಭಜಿತ ಶಿವಸೇನಾ ಅಭ್ಯರ್ಥಿ ಶ್ರೀರಂಗ ಬರ್ನೆ ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು.
ಪಾರ್ಥ್ ಪವಾರ್ ಅವರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಪಕ್ಷದ ಪ್ರಮುಖ ನಾಯಕರು ಸರ್ವಾನುಮತದಿಂದ ತೆಗೆದುಕೊಂಡಿದೆ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ, ಇದರಲ್ಲಿ ಛಗನ್ ಭುಜಬಲ್, ಸುನಿಲ್ ತತ್ಕರೆ, ಹಸನ್ ಮುಶ್ರಿಫ್, ಧನಂಜಯ್ ಮುಂಡೆ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರಂತಹ ಹಿರಿಯ ನಾಯಕರು ಸೇರಿದ್ದಾರೆ ಎಂದು IANS ವರದಿ ಮಾಡಿದೆ.
