ವಾಷಿಂಗ್ಟನ್: ಅಮೇರಿಕಾದ ಕೇಂದ್ರ ಗುಪ್ತಚರ ಸಂಸ್ಥೆ (CIA) ಇರಾನ್ ನ ಸರ್ವೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇರಾನ್ನ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಖಮೇನಿ ಪಾಲ್ಗೊಳ್ಳುವ ಬಗ್ಗೆ ಸುಳಿವು ನೀಡಿದ್ದರಿಂದ ಅಮೆರಿಕ- ಇಸ್ರೇಲ್ ಜಂಟಿಯಾಗಿ ದಾಳಿ ನಡೆಸಲು ನೆರವಾಯಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
US ಮತ್ತು ಇಸ್ರೇಲ್ ಇಸ್ಲಾಮಿಕ್ ಗಣರಾಜ್ಯದಲ್ಲಿ ಆಡಳಿತ ಬದಲಾವಣೆಯ ಪ್ರತಿಜ್ಞೆ ಮಾಡಿದ ನಂತರ ರಾಜಧಾನಿ ಟೆಹರಾನ್ ನಲ್ಲಿ ನಡೆದ ದಾಳಿಯಲ್ಲಿ ಖಮೇನಿ ಹತ್ಯೆಯಾಗಿರುವುದನ್ನು ಇರಾನಿನ ಸರ್ಕಾರಿ ನಿಯಂತ್ರಣದ ಮಾಧ್ಯಮಗಳು ಭಾನುವಾರ ಖಚಿತಪಡಿಸಿದವು.
ಟೈಮ್ಸ್ ಪ್ರಕಾರ, CIA ತಿಂಗಳುಗಳಿಂದ ಖಮೇನಿ ಮೇಲೆ ಕಣ್ಣಿಟ್ಟಿತ್ತು. ಅವರ ಚಲನವಲನಗಳು ಮತ್ತು ಅವರ ಇರುವ ಕಟ್ಟಡಗಳ ಬಗ್ಗೆ ಮಾಹಿತಿ ಪಡೆದಿತ್ತು. ದಾಳಿಗೂ ಮುನ್ನ ಕೇಂದ್ರ ಟೆಹ್ರಾನ್ನಲ್ಲಿರುವ ಖಮೇನಿ ಅಡಗಿದ್ದ ಕಟ್ಟಡದಲ್ಲಿ ಶನಿವಾರ ಬೆಳಿಗ್ಗೆ ಇರಾನ್ನ ಉನ್ನತ ರಾಜಕೀಯ ಮತ್ತು ಭದ್ರತಾ ಅಧಿಕಾರಿಗಳ ಸಭೆ ನಡೆಯಲಿದ್ದು, ಅದರಲ್ಲಿ ಖಮೇನಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗೆ ಸಿಕ್ಕಿತ್ತು.
ಆರಂಭದಲ್ಲಿ ರಾತ್ರಿ ಹೊತ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಲು ಯೋಜಿಸಿದ್ದ US ಮತ್ತು ಇಸ್ರೇಲಿ ಅಧಿಕಾರಿಗಳು, ಖಮೇನಿ ಸ್ಥಳದ ಕುರಿತು ಗುಪ್ತಚರ ಸಂಸ್ಥೆ ನೀಡಿದ ಮಾಹಿತಿಗೆ ತಕ್ಕಂತೆ ದಾಳಿಗೆ ಸಮಯನ್ನು ಮರು ಹೊಂದಿಸಿತು. ಖಮೇನಿಯನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲು ತಿಂಗಳುಗಟ್ಟಲೆ ತಯಾರಿ ನಡೆಸಿದ್ದ ಇಸ್ರೇಲ್ ಗೆ ಗುಪ್ತಚರ ಸಂಸ್ಥೆ ಮಾಹಿತಿ ರವಾನಿಸಿತ್ತು. ಇರಾನ್ ನ ಸರ್ವೊಚ್ಛ ನಾಯಕನ ಹತ್ಯೆಗೆ ತ್ವರಿತಗತಿಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಪ್ಲಾನ್ ಬಗ್ಗೆ ಗೊತ್ತಿದ್ದ ಜನರು ಪತ್ರಿಕೆಗೆ ತಿಳಿಸಿದ್ದಾರೆ.
ಇಸ್ರೇಲ್ನಲ್ಲಿ ಯುದ್ಧವಿಮಾನಗಳು ತಮ್ಮ ನೆಲೆಗಳಿಂದ ಹೊರಟಾಗ ಬೆಳಿಗ್ಗೆ 6:00 ಗಂಟೆ ಆಗಿತ್ತು. ಕಾರ್ಯಾಚರಣೆ ಆರಂಭಿಸಿದ ಸರಿಸುಮಾರು ಎರಡು ಗಂಟೆ, ಐದು ನಿಮಿಷಗಳ ನಂತರ, ಟೆಹ್ರಾನ್ನಲ್ಲಿ ಬೆಳಿಗ್ಗೆ 9:40 ರ ಸುಮಾರಿಗೆ ಖಮೇನಿ ತಂಗಿದ್ದ ಕಟ್ಟಡಕ್ಕೆ ದೂರಗಾಮಿ ಕ್ಷಿಪಣಿ ದಾಳಿ ನಡೆಸಿದವು. ದಾಳಿ ವೇಳೆ ಹಿರಿಯ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ಒಂದು ಕಟ್ಟಡದಲ್ಲಿದ್ದರೆ, ಸಮೀಪದ ಮತ್ತೊಂದು ಕಟ್ಟಡದಲ್ಲಿ ಖಮೇನಿ ತಂಗಿದ್ದರು ಎಂದು ವರದಿ ತಿಳಿಸಿದೆ.
ಟೆಹ್ರಾನ್ನ ಹಲವಾರು ಸ್ಥಳಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಇರಾನ್ನ ರಾಜಕೀಯ-ಭದ್ರತಾ ವಿಭಾಗದ ಹಿರಿಯ ವ್ಯಕ್ತಿಗಳು ತಂಗಿದ್ದ ಕಟ್ಟಡಗಳ ಮೇಲೆ ದಾಳಿ ನಡೆಸಲಾಯಿತು ಎಂದು ಇಸ್ರೇಲಿ ರಕ್ಷಣಾ ಅಧಿಕಾರಿಯೊಬ್ಬರು ಯುದ್ಧಕ್ಕೆ ಇರಾನಿನ ಸಿದ್ಧತೆಗಳ ಹೊರತಾಗಿಯೂ, ಇಸ್ರೇಲ್ ಆಚ್ಚರಿ ರೀತಿಯಲ್ಲಿ ಯುದ್ಧತಂತ್ರ ಬಳಸಿ, ಖಮೇನಿಯನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ. ಖಮೇನಿ ಜೊತೆಗೆ ಇಬ್ಬರು ಹಿರಿಯ ಮಿಲಿಟರಿ ವ್ಯಕ್ತಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಇರಾನ್ನ ನ್ಯಾಯಾಂಗ ದೃಢಪಡಿಸಿದೆ.
ರೆವಲ್ಯೂಷನರಿ ಗಾರ್ಡ್ಸ್ ಮುಖ್ಯಸ್ಥ ಜನರಲ್ ಮೊಹಮ್ಮದ್ ಪಕ್ಪೂರ್ ಮತ್ತು ಉನ್ನತ ಭದ್ರತಾ ಸಲಹೆಗಾರ ಅಲಿ ಶಮ್ಖಾನಿ ಹತ್ಯೆಯಾಗಿರುವುದಾಗಿ ಇರಾನ್ನ ರಾಜ್ಯ ಸುದ್ದಿ ಸಂಸ್ಥೆ IRNA ಕೂಡಾ ವರದಿ ಮಾಡಿದೆ.
