ಬೆಂಗಳೂರು: ಬಾಲಿವುಡ್ ನಟ ರಣವೀರ್ ಸಿಂಗ್ ಅವರು, ‘ಕಾಂತಾರ ಚಾಪ್ಟರ್ 1’ ಚಿತ್ರದ ದೈವವನ್ನು ದೆವ್ವ ಎಂದು ಅವಮಾನ ಮಾಡಿದ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಗೋವಾದಲ್ಲಿ ನಡೆದ ಫಿಲ್ಮ್ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ರಣವೀರ್ ಸಿಂಗ್ ಅವರು, ‘ಕಾಂತಾರ’ ಚಿತ್ರದ ಬಗ್ಗೆ ಮಾತನಾಡುತ್ತಾ, ರಿಷಬ್ ಶೆಟ್ಟಿ ನಟನೆಯನ್ನು ತಮಾಷೆಯಾಗಿ ಅನುಕರಣೆ ಮಾಡಿ ವಿವಾದಕ್ಕೀಡಾಗಿದ್ದರು.
ಈ ಸಂಬಂಧ ವಕೀಲ ಪ್ರಶಾಂತ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಾಲಿವುಡ್ ನಟನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಂಗ್ಗೆ ಈ ಹಿಂದೆ ನೋಟಿಸ್ ಸಹ ಜಾರಿ ಮಾಡಿದ್ದರು.
ನಟನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಹೈಗ್ರೌಂಡ್ಸ್ ಪೊಲೀಸರು ಇತ್ತೀಚೆಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಕ್ರಮಗಳನ್ನು ಪ್ರಾರಂಭಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೀಗ ಪ್ರಕರಣ ರದ್ದು ಕೋರಿ ರಣವೀರ್ ಸಿಂಗ್ ಸಲ್ಲಿಸಿರುವ ಅರ್ಜಿಯನ್ನು ಫೆಬ್ರವರಿ 24 ರಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
