ಬೆಂಗಳೂರು: ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧು ಎಂದು ಘೋಷಿಸಿದೆ. ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರ ಪೀಠ ಈ ಮಹತ್ವದ ತೀರ್ಪು ನೀಡಿದ್ದು, ಪರಾಜಿತ ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ಸಲ್ಲಿಸಿದ್ದ ಚುನಾವಣಾ ಅರ್ಜಿಯ ಆಧಾರದ ಮೇಲೆ ಈ ಆದೇಶ ಹೊರಬಂದಿದೆ.
ಮುನಿರಾಜು ತಮ್ಮ ಅರ್ಜಿಯಲ್ಲಿ, ಸುಬ್ಬಾರೆಡ್ಡಿ ಅವರು ಚುನಾವಣಾ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ನೀಡಿದ್ದು, ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದರು. ತಾನೇ ಎರಡನೇ ಸ್ಥಾನದಲ್ಲಿದ್ದ ಕಾರಣ ತನ್ನನ್ನು ವಿಜೇತ ಎಂದು ಘೋಷಿಸಬೇಕು ಎಂದು ಕೂಡ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಆ ಬೇಡಿಕೆಯನ್ನು ತಳ್ಳಿಹಾಕಿದ್ದು, ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ಸಾಬೀತಾದ ಹಿನ್ನೆಲೆಯಲ್ಲಿ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿದೆ.

ತೀರ್ಪಿನ ಬಳಿಕ ಸಿ. ಮುನಿರಾಜು ಪ್ರತಿಕ್ರಿಯಿಸಿ ಹೇಳಿದರು: “2023ರಲ್ಲಿ ಚುನಾವಣೆ ನಡೆದ ಬಳಿಕ ನಾನು ಸೋತ ನಂತರ ಅವರು ಅಫಿಡವಿಟ್ನಲ್ಲಿ ಸರ್ಕಾರಕ್ಕೆ ವಂಚನೆ ಮಾಡಿದ್ದು ಹಾಗೂ ಜನರಿಗೆ ತಪ್ಪು ಮಾಹಿತಿ ನೀಡಿದ್ದು ಗಮನಕ್ಕೆ ಬಂತು. ನಮ್ಮ ಸೀನಿಯರ್ ಅಡ್ವಕೇಟ್ ನಲಿನಾ ಮಾಯಗೌಡ ಅವರ ಮೂಲಕ ಅರ್ಜಿ ಸಲ್ಲಿಸಿ, ಎಲ್ಲ ಮಾಹಿತಿಯನ್ನೂ ನ್ಯಾಯಾಲಯದ ಮುಂದೆ ಇಟ್ಟೆವು. ನ್ಯಾಯಾಧೀಶರು ಕೂಡ ‘ದೊಡ್ಡ ತಪ್ಪು ಮಾಡಿದ್ರೆ ತಪ್ಪು, ಸಣ್ಣ ತಪ್ಪು ಮಾಡಿದ್ರೆ ತಪ್ಪಲ್ಲವೇ?’ ಎಂದು ವಾದ ಸಂದರ್ಭದಲ್ಲಿ ಪ್ರಶ್ನಿಸಿದ್ದರು. ಇವತ್ತು ನ್ಯಾಯ ಸಿಕ್ಕಿದೆ. ಬಾಗೇಪಲ್ಲಿಯ ಜನತೆಗೆ ಇದು ಸಂತೋಷದ ವಿಚಾರ.”
ಪ್ರಶ್ನೆ: “ನಿಮ್ಮ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದರೂ ನಿಮ್ಮನ್ನು ವಿಜೇತ ಎಂದು ಘೋಷಿಸಲು ನಿರಾಕರಿಸಿದೆ. ಮುಂದಿನ ಹೆಜ್ಜೆ ಏನು?”
ಮುನಿರಾಜು ಉತ್ತರಿಸಿದರು: “ಕಾನೂನಿನಲ್ಲಿ ಅವಕಾಶ ಇದೆ ಎಂದು ನಾವು ಕೇಳಿದ್ದೇವೆ. ಆದರೆ ನ್ಯಾಯಾಧೀಶರು ಅದನ್ನು ಪರಿಗಣಿಸಲಿಲ್ಲ. ಆದರೂ ಅವರ ಆಯ್ಕೆ ರದ್ದು ಆದದ್ದು ನಮ್ಮಿಗೆ ಸಂತೋಷ. ಈಗ ನಮ್ಮ ಸೀನಿಯರ್ ಅಡ್ವಕೇಟ್ ಮತ್ತು ಹೈಕಮಾಂಡ್ ಜೊತೆ ಚರ್ಚಿಸಿ ಮುಂದಿನ ಕಾನೂನು ಹೆಜ್ಜೆ ಇಡುತ್ತೇವೆ.”
ಮತ್ತೊಂದು ಪ್ರಶ್ನೆಗೆ, “ಸುಪ್ರೀಂ ಕೋರ್ಟ್ಗೆ ಹೋಗುವಿರಾ ಅಥವಾ ಚುನಾವಣಾ ಆಯೋಗದ ಬಳಿ ಹೋಗುವಿರಾ?” ಎಂಬುದಕ್ಕೆ ಅವರು ಪ್ರತಿಕ್ರಿಯಿಸಿ, “ಕಾನೂನಿನಲ್ಲಿ ಇರುವ ಅವಕಾಶಗಳ ಬಗ್ಗೆ ಸಲಹೆ ಪಡೆದು ಯಾವ ಮಾರ್ಗ ಹಿಡಿಯಬೇಕು ಎಂದು ನಿರ್ಧರಿಸುತ್ತೇನೆ. ಕಾನೂನು ಪ್ರಕ್ರಿಯೆಯಂತೆ ಮುಂದುವರೆಯುತ್ತೇವೆ” ಎಂದರು.
ಉಪಚುನಾವಣೆ ನಡೆದರೆ ಸ್ಪರ್ಧೆ ಮಾಡಲಿದ್ದೀರಾ ಎಂಬ ಪ್ರಶ್ನೆಗೆ ಅವರು, “ನಾನು ಸ್ಪರ್ಧೆಗೆ ಸಿದ್ಧ. ನಾನು ಭಾರತೀಯ ಜನತಾ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧನಾಗಿರುತ್ತೇನೆ. 63 ಸಾವಿರ ಮತಗಳನ್ನು ಪಡೆದಿದ್ದೇನೆ. ಮುಂದಿನ ನಿರ್ಧಾರ ಪಕ್ಷದದು” ಎಂದು ಹೇಳಿದರು.
ಈ ತೀರ್ಪು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಕಾನೂನು ಮತ್ತು ರಾಜಕೀಯ ಬೆಳವಣಿಗೆಗಳತ್ತ ಎಲ್ಲರ ಗಮನ ಸೆಳೆದಿದೆ.
