ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ನಗರದೊಳಗೆ ಸಂಚಾರದಲ್ಲಿ ಏಕಮುಖ ಸಂಚಾರ, ನಿಷೇಧ ವಿಧಿಸಿ ಜಿಲ್ಲಾಧಿಕಾರಿ ಗಳು ಹೊರಡಿಸಿರುವ ಆದೇಶದ ಮರುಪರಿಶೀಲನೆಗೆ ರಿಕ್ಷಾ ಚಾಲಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಅವರು ತಾಲೂಕು ಕಚೇರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಅಗಲ ಕಿರಿದಾದ ಚಿಕ್ಕನಸಾಲ್ ರಸ್ತೆಯಲ್ಲಿ ಭಾರಿ ವಾಹನಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡುಗಳನ್ನು ಪುರಸಭಾ ಮುಖ್ಯ ರಸ್ತೆಯಿಂದ ಚಿಕ್ಕನಸಾಲ್ ರಸ್ತೆಗೆ ಪ್ರವೇಶಿಸುವ ತಿರುವಿನಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ಕುಂದಾಪುರದ ಸಂಗಮ ಹೋಟೆಲ್ ಬದಿಯಿಂದ ಚಿಕ್ಕನಸಾಲ್ ರಸ್ತೆಯನ್ನು ಪ್ರವೇಶಿಸುವ ಮಾರ್ಗದಲ್ಲಿ ಈಗಾಗಲೇ ಇದೆ.
1980-1985ರ ದಶಕದಲ್ಲಿಯೇ ಭಾರಿ ವಾಹನಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡುಗಳನ್ನು ರಸ್ತೆಯ ಬದಿಗಳಲ್ಲಿ ಅಳವಡಿ ಸಲಾಗಿತ್ತು. ಕೆಲವು ಕಿರಿದಾದ ರಸ್ತೆಗಳಲ್ಲಿ ನಿಂತು ಮುಂದೆ ಹೋಗಿ ಎಂಬ ಫಲಕಗಳನ್ನು ಕೂಡಾ ಇದೇ ಸಮಯದಲ್ಲಿ ಅಳವಡಿಸಲಾಗಿತ್ತು. ಈ ಹಿಂದೆ ಇದ್ದ ನಿಯಮಗಳು ಪುನಃ ಜಾರಿಗೆ ಬಂದಿರುವುದು ಸಂತೋಷದ ಸಂಗತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕುಂದಾಪುರ ಪುರಸಭಾ ವ್ಯಾಪ್ತಿಯ ಬೇಗಂ ಹಜರಾತ್ ಮಹಲ್ ರಸ್ತೆ (ಸಟ್ವಾಡಿ ಡಿರ್ಪಾಟ್ಮೆಂಟಲ್ ಸ್ಟೋರ್ ಪಕ್ಕದ ರಸ್ತೆ)ಯು ಕೂಡು ರಸ್ತೆಯಾಗಿ ಹಾದುಹೋಗಿದ್ದು ಕಿರಿದಾದ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಪುರಸಭೆ ರಸ್ತೆಯ ಪಶ್ಚಿಮದಿಂದ ಪೂರ್ವಕ್ಕೆ ರಾಷ್ಟ್ರೀಯ ಹೆದ್ದಾರಿ 66ರ ಕಡೆಗೆ ವಾಹನಗಳನ್ನು ಸಂಚರಿಸಲು ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ವಾಹನಗಳ ಸಂಚಾರವನ್ನು ನಿಷೇಧಿಸಿ ಆದೇಶ ಮಾಡಲಾಗಿದೆ.
ಹೀಗೆ ನಿಷೇಧ ಹೇರುವುದರಿಂದ ಕುಂದಾಪುರ ಪೇಟೆಯಿಂದ ಕೆಎಸಾರ್ಟಿಸಿ ಬಸ್‌ಸ್ಟಾಂಡಿಗೆ ರಿಕ್ಷಾದಲ್ಲಿ ಹೋಗುವ ಪ್ರಯಾಣಿ ಕರು ಅನವಶ್ಯಕವಾಗಿ ಹೆಚ್ಚುವರಿ ಪ್ರಯಾಣವನ್ನು ಮಾಡಬೇಕಾಗುತ್ತದೆ. ಈ ಮೊದಲು ಹಳೆ ಆದರ್ಶ ಆಸ್ಪತ್ರೆ (ಎಪಿಎಮ್‌ಸಿ ಮಾರ್ಕೆಟ್, ಸಂತೆ ಮಾರ್ಕೆಟ್) ಬಳಿ ಡಿವೈಡರ್ ಇದ್ದು ಇದನ್ನು ರಾ.ಹೆ. ಪ್ರಾಧಿಕಾರದವರು ಮುಚ್ಚಿದ್ದರಿಂದ ವಾಹನ ಸವಾರರೆಲ್ಲರೂ ಸಂಗಮ್ ಜಂಕ್ಷನ್ ಬಳಿ ಹೋಗಿಯೇ ಕೆಎಸ್ಸಾರ್ಟಿಸಿ ಬಸ್‌ಸ್ಟಾಂಡ್ ಬದಿಗೆ ಹೋಗಬೇಕಾಗುತ್ತದೆ. ಇದರಿಂದ ಜನರ ಸಮಯ, ಹಣ ಎಲ್ಲವೂ ವ್ಯರ್ಥವಾಗುವುದು.
ಸರಕಾರ ಪ್ರತಿವರ್ಷ ಇಂಧನ ಸಪ್ತಾಹ ಆಚರಿಸುತ್ತಿದ್ದು ಇಂಧನ ಉಳಿಸಿ, ವಿದೇಶ ವಿನಿಮಯ ಉಳಿಸಿ ಬೆಳೆಸಿ, ವಾಯು ಮಾಲಿನ್ಯದಿಂದ ಪರಿಸರ ರಕ್ಷಿಸಿ ಎಂಬಿತ್ಯಾದಿ ಘೋಷ ವಾಕ್ಯಗಳನ್ನು ಜಾಹೀರಾತಾಗಿ ನೀಡುತ್ತಿದ್ದು ಇವೆಲ್ಲವನ್ನೂ ನಾವು ಪಾಲಿಸಲು ನಮ್ಮ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಸರಿಯಾದರೆ ಎಲ್ಲವೂ ಸರಿಯಾಗುತ್ತದೆ ಎಂಬ ಆಶಾಭಾವನೆ ಯಿದೆ. ಆದ್ದರಿಂದ ರಿಕ್ಷಾಗಳಿಗೆ ಬೇಗಂ ಹಜಾರತ್ ಮಹಲ್ ರಸ್ತೆ ಹಾಗೂ ಶಿವಪ್ರಸಾದ್ ಗ್ರಾಂಡ್ ಬಳಿಯ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಾಗಿ ರಿಕ್ಷಾ ಚಾಲಕರು ವಿನಂತಿಸಿದ್ದಾರೆ.
ಸಿಐಟಿಯುನ ಮುಖಂಡರಾದ ಚಂದ್ರಶೇಖರ್, ಕುಂದಾಪುರ ತಾಲೂಕು ಆಟೋರಿಕ್ಷಾ ಮತ್ತು ವಾಹನ ಚಾಲಕರ ಸಂಘದ ಕಾರ್ಯದರ್ಶಿ ರಾಜು ದೇವಾಡಿಗ, ಸಂಘದ ಅಧ್ಯಕ್ಷ ರಮೇಶ್ ವಿ. ಹಾಗೂ ಇತರರು ಉಪತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.