ಬೆಂಗಳೂರು:
ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ (ಕೊಲಂಬಿಯಾ ಏಷ್ಯಾ)ನ ಶೇಕಡಾ 100ರಷ್ಟು ಷೇರನ್ನು ಮಣಿಪಾಲ್ ಆಸ್ಪತ್ರೆ ಸ್ವಾಧೀನ ಪಡಿಸಿಕೊಳ್ಳುವ ಮೂಲಕ ಆಸ್ಪತ್ರೆಯನ್ನು ಸೋಮವಾರ ಖರೀದಿಸಿದೆ.
ಮಾಲೀಕತ್ವದ ವರ್ಗಾವಣೆಯು ಕಾನೂನು ನಿಯಂತ್ರಕ ಅನುಮೋದನೆಗಳ ನಂತರ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈ ಒಪ್ಪಂದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (ಎಂಇಎಂಜಿ) ಅಧ್ಯಕ್ಷ ಡಾ.ರಂಜನ್ ಪೈ, ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳನ್ನು ಮಣಿಪಾಲ್ ಕುಟುಂಬದ ತೆಕ್ಕೆಗೆ ಸ್ವಾಗತಿಸಲು ನಮಗೆ ಸಂತಸವಾಗುತ್ತಿದೆ. ಹಲವು ವರ್ಷಗಳಿಂದ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿರುವ ಆಸ್ಪತ್ರೆಯ ಅತ್ಯುತ್ತಮ ದಾಖಲೆಯನ್ನು ನಾವು ಹೆಮ್ಮೆಯಿಂದ ಅಂಗೀಕರಿಸಿದ್ದೇವೆ. ಕೊಲಂಬಿಯಾ ಏಷ್ಯಾವು ತನ್ನ ಗುಣಮಟ್ಟದ ಆರೋಗ್ಯ ಸೇವೆ ಮೂಲಕ ಗುರುತಿಸಿಕೊಂಡಿದೆ. ನಮ್ಮ ಮೌಲ್ಯಗಳೊಂದಿಗೆ ಸಂಸ್ಥೆ ಉತ್ತಮ ಹೊಂದಾಣಿಕೆ ಮಾಡಿಕೊಂಡಿದೆ. ರೋಗಿಗಳ ಸೇವೆಯನ್ನು ಬದ್ಧತೆಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಈ ಆಸ್ಪತ್ರೆ ಸೇರ್ಪಡೆ ಮೂಲಕ ದೇಶದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ದೊಡ್ಡ ಮತ್ತು ಬಲಶಾಲಿ ಹಾಗೂ ಅನನ್ಯ ಸ್ಥಾನವನ್ನು ನಾವು ಪಡೆದಂತಾಗಿದೆ ಎಂದು ತಿಳಿಸಿದ್ದಾರೆ.
ಕೊಲಂಬಿಯಾ ಏಷ್ಯಾ ಆಸ್ಪತ್ರೆಗಳು ಭಾರತದಲ್ಲಿ 2005 ರಲ್ಲಿ ಬೆಂಗಳೂರಿನ ಹೆಬ್ಬಾಳದಲ್ಲಿ ಕಾರ್ಯಾಚರಣೆ ಆರಂಭಿಸಿತು. ಪ್ರಸ್ತುತ ಬೆಂಗಳೂರು, ಮೈಸೂರು, ಕೋಲ್ಕತಾ, ಗುರುಗ್ರಾಮ್, ಗಾಜಿಯಾಬಾದ್, ಪಟಿಯಾಲ ಮತ್ತು ಪುಣೆ ಸೇರಿ ದೇಶಾದ್ಯಂತ 11 ಆಸ್ಪತ್ರೆಗಳನ್ನು ನಿರ್ವಹಿಸುತ್ತಿವೆ. ಒಟ್ಟಾರೆ 1,300 ಹಾಸಿಗೆಗಳು, 1,200 ವೈದ್ಯರು ಮತ್ತು 4,000 ಉದ್ಯೋಗಿಗಳನ್ನು ಆಸ್ಪತ್ರೆಯಲ್ಲಿದ್ದಾರೆ.
ಕೊಲಂಬಿಯಾ ಏಷ್ಯಾದ ಸ್ವಾಧೀನದಿಂದ ಮಣಿಪಾಲ್ ಆಸ್ಪತ್ರೆಗಳಿಗೆ ದೇಶದಲ್ಲಿ ಅತಿ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ, 15 ನಗರಗಳಲ್ಲಿ 7,300ಕ್ಕೂ ಅಧಿಕ ಹಾಸಿಗೆಗಳೊಂದಿಗೆ 27 ಆಸ್ಪತ್ರೆಗಳು ಮತ್ತು 4,000 ಕ್ಕೂ ವೈದ್ಯರು ಮತ್ತು 10,000ಕ್ಕೂ ಅಧಿಕ ಉದ್ಯೋಗಿಗಳನ್ನು ಒಳಗೊಂಡ ಆಸ್ಪತ್ರೆಯಾಗಿದ್ದು, ವಾರ್ಷಿಕವಾಗಿ 4 ಮಿಲಿಯನ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಇದು ದೇಶದ ಅತಿದೊಡ್ಡ ಆರೋಗ್ಯ ಪೂರೈಕೆದಾರರ ಜಾಲಗಳಲ್ಲಿ ಮೊದಲ ಸ್ಥಾನ ಪಡೆದಿದೆ.