ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಜೋ ಕೆಂಟ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದು, ಇರಾನ್ ವಿರುದ್ಧದ ಯುದ್ಧದಲ್ಲಿ ನಾವು ಗೆದ್ದಿದ್ದೇವೆ ಎಂದು ಬೀಗುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತೀವ್ರ ಹಿನ್ನೆಡೆಯಾಗಿದೆ.
ಟ್ರಂಪ್ ಆಡಳಿತವು ಇರಾನ್ನಲ್ಲಿ ನಡೆಸುತ್ತಿರುವ ಯುದ್ಧವನ್ನು “ಒಳ್ಳೆಯ ಮನಸ್ಸಾಕ್ಷಿಯೊಂದಿಗೆ ಬೆಂಬಲಿಸಲು ಸಾಧ್ಯವಿಲ್ಲ” ಎಂದು ಜೋ ಕೆಂಟ್ ಹೇಳಿದ್ದಾರೆ.
ಇರಾನ್ ವಿರುದ್ಧದ ಯುದ್ಧವನ್ನು ವಿರೋಧಿಸಿ ಟ್ರಂಪ್ ಆಡಳಿತಕ್ಕೆ ರಾಜೀನಾಮೆ ನೀಡಿದ ಮೊದಲ ಅಮೆರಿಕದ ಅತ್ಯಂತ ಹಿರಿಯ ಅಧಿಕಾರಿ ಕೆಂಟ್ ಆಗಿದ್ದಾರೆ.
ಎಕ್ಸ್ ಮೂಲಕ ತಮ್ಮ ರಾಜೀನಾಮೆಯನ್ನು ಘೋಷಿಸಿದ ಕೆಂಟ್, ಇರಾನ್ “ನಮ್ಮ ರಾಷ್ಟ್ರಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಿಲ್ಲ. ಇಸ್ರೇಲ್ ಹಾಗೂ ಅದರ ಪ್ರಬಲ ಅಮೆರಿಕನ್ ಲಾಬಿಯ ಒತ್ತಡದಿಂದಾಗಿ ನಾವು ಈ ಯುದ್ಧವನ್ನು ಪ್ರಾರಂಭಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ” ಎಂದು ಬರೆದಿದ್ದಾರೆ.
ಬಹಳಷ್ಟು ಆಲೋಚನೆ ಮಾಡಿ ಇಂದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಲು ನಾನು ನಿರ್ಧರಿಸಿದ್ದೇನೆ. ಇರಾನ್ನಲ್ಲಿ ನಡೆಯುತ್ತಿರುವ ಯುದ್ಧವನ್ನು ಒಳ್ಳೆಯ ಮನಸ್ಸಿನಿಂದ ಬೆಂಬಲಿಸಲು ನನಗೆ ಸಾಧ್ಯವಿಲ್ಲ. ಇರಾನ್ ನಮ್ಮ ರಾಷ್ಟ್ರಕ್ಕೆ ಯಾವುದೇ ಬೆದರಿಕೆಯನ್ನು ಒಡ್ಡಿರಲಿಲ್ಲ. ಇಸ್ರೇಲ್ ಮತ್ತು ಅದರ ಪ್ರಬಲ ಅಮೆರಿಕ ಲಾಬಿಯ ಒತ್ತಡದಿಂದಾಗಿ ನಾವು ಈ ಯುದ್ಧವನ್ನು ಪ್ರಾರಂಭಿಸಿದ್ದೇವೆ ಎನ್ನುವುದು ಸ್ಪಷ್ಟವಾಗಿದೆ.
2016, 2020, 2024 ರಲ್ಲಿ ನೀವು ಪ್ರಚಾರ ಮಾಡಿದ ಮೌಲ್ಯಗಳು ಮತ್ತು ವಿದೇಶಾಂಗ ನೀತಿಗಳನ್ನು ನಾನು ಬೆಂಬಲಿಸುತ್ತೇನೆ. ನಿಮ್ಮ ಮೊದಲ ಅವಧಿಯಲ್ಲಿ ಇವುಗಳನ್ನು ನೀವು ಜಾರಿಗೆ ತಂದಿದ್ದೀರಿ. 2025 ರ ಜೂನ್ವರೆಗೆ ಮಧ್ಯಪ್ರಾಚ್ಯದಲ್ಲಿನ ಯುದ್ಧಗಳು ಅಮೆರಿಕದ ದೇಶಭಕ್ತರ ಅಮೂಲ್ಯ ಜೀವಗಳನ್ನು ಕಸಿದುಕೊಳ್ಳುವ ಮತ್ತು ನಮ್ಮ ರಾಷ್ಟ್ರದ ಸಂಪತ್ತು, ಅಭಿವೃದ್ಧಿಯನ್ನು ಕುಂಠಿತ ಮಾಡುವ ಬಲೆ ಎಂದು ಅರ್ಥೈಸಿಕೊಂಡಿದ್ದವರು ನೀವು ಎಂದು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.
ಬಲಪಂಥೀಯ ಉಗ್ರಗಾಮಿಗಳೊಂದಿಗೆ ಸಂಪರ್ಕ ಹೊಂದಿದ್ದ ಮಾಜಿ ರಾಜಕೀಯ ಅಭ್ಯರ್ಥಿ ಕೆಂಟ್ ಅವರನ್ನು ಕಳೆದ ಜುಲೈನಲ್ಲಿ 52-44 ಮತಗಳ ಅಂತರದ ಮೂಲಕ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಮುಖ್ಯಸ್ಥರಾಗಿ ನೇಮಿಸಲಾಯಿತು.
ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥರಾಗಿ, ಕೆಂಟ್ ಭಯೋತ್ಪಾದಕ ಬೆದರಿಕೆಗಳನ್ನು ವಿಶ್ಲೇಷಿಸುವ ಮತ್ತು ಪತ್ತೆಹಚ್ಚುವ ಕಾರ್ಯವನ್ನು ನಿರ್ವಹಿಸುತ್ತಿದ್ದ ಸಂಸ್ಥೆಯ ಉಸ್ತುವಾರಿ ವಹಿಸಿದ್ದರು.
