ಬಾಗಲಕೋಟೆ: ಕಮಿಷನ್ ಪಡೆದ ಆರೋಪ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಕ್ಲೀನ್ ಚಿಟ್ ಸಿಕ್ಕಿದ್ದರೂ ಸಚಿವ ಸ್ಥಾನದಿಂದ ಕೆಳಗಿಳಿದಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (K.S.Eshwarappa) ಅವರಿಗೆ ಈವರೆಗೆ ಸಚಿವ ಸ್ಥಾನ ಒಲಿದುಬಂದಿಲ್ಲ. ಈ ಬಗ್ಗೆ ಈಶ್ವರಪ್ಪ ಅವರೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಲ್ಲದೆ, ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ರಾಜ್ಯದ ಜನರ ಪ್ರಶ್ನೆಗೆ ಉತ್ತರಿಸಲಿ ಎಂದು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಲೀನ್ ಚಿಟ್ ತೆಗೆದುಕೊಂಡು ನಿರಪರಾಧಿ ಅಂತ ತೀರ್ಮಾನ ಆದ ಮೇಲೂ ಇಡೀ ರಾಜ್ಯದ ಜನ ನನ್ನ ಪ್ರಶ್ನೆ ಮಾಡುತ್ತಿರುವ ಸಂದರ್ಭದಲ್ಲಿ ನನಗೆ ಉತ್ತರ ಕೊಡಲು ಬರುವುದಿಲ್ಲ. ಇದಕ್ಕೆ ಮುಖ್ಯಮಂತ್ರಿಯವರೇ ಉತ್ತರಿಸಲಿ ಎಂದರು.
ನಾನು 1989ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಕಾಲಿಟ್ಟಿದ್ದೆ. ಅಂದಿನಿಂದ ಒಂದೇ ಒಂದು ಅಧಿವೇಶನದಲ್ಲಿ ರಜೆ ತೆಗೆದುಕೊಂಡಿಲ್ಲ, ಚಕ್ಕರ್ ಹೊಡೆಯಲಿಲ್ಲ. ವಿಧಾನಸಭೆಯಲ್ಲಿ ಒಂದು ದಿನವೂ ನಿದ್ದೆ ಮಾಡಲಿಲ್ಲ. ಅನೇಕ ಮಹಾಪುರುಷರು ನಿದ್ದೆ ಮಾಡುವುದನ್ನು ನೀವು ನೋಡಿರುತ್ತೀರಿ. ವಿಧಾನಸೌಧದ ಪಾವಿತ್ರ್ಯತೆ ನನಗೆ ಗೊತ್ತು. ಆದರೆ ಕ್ಲೀನ್ ಚಿಟ್ ಸಿಕ್ಕರೂ ಯಾಕೆ ಸಚಿವ ಸ್ಥಾನ ನೀಡಿಲ್ಲ ಎಂದು ನನಗೆ ಗೊತ್ತಿಲ್ಲ ಎಂದು ಈಶ್ವರಪ್ಪ ಅವರು ಹೇಳಿದರು.
ಇದನ್ನೂ ಓದಿ: ಡಿ. 25ಕ್ಕೆ ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ, ಮಹತ್ವದ ಘೋಷಣೆ: ಅದಕ್ಕೂ ಮೊದಲು ನಾಳೆಯಿಂದ ವಿವಿಧ ಮಠ, ನಾಯಕರ ಭೇಟಿ
ಯಾಕೆ ಸಂಪುಟಕ್ಕೆ ಈಶ್ವರಪ್ಪನನ್ನು ತೆಗೆದುಕೊಂಡಿಲ್ಲ ಎಂದು ಮಾದ್ಯಮದ ಮೂಲಕ ನಾನು ಮುಖ್ಯಮಂತ್ರಿಯವರಿಗೆ ಕೇಳುತ್ತೇನೆ. ನೀವು ರಾಜ್ಯದ ಜನತೆಗೆ ಉತ್ತರ ಕೊಡಿ. ಕೇಂದ್ರ ನಾಯಕರ ತೀರ್ಮಾನ ಎಂದು ಅವರು ಹೇಳಬಹುದು. ಆದರೆ ನನಗೆ ಗೊತ್ತಿಲ್ಲ. ಯಾಕೆಂದರೆ ಮುಖ್ಯಮಂತ್ರಿಯವರಿಗೆ ತಮ್ಮ ಸಂಪುಟದಲ್ಲಿ ಯಾರ್ಯಾರು ಮಂತ್ರಿಗಳನ್ನು ಇಟ್ಟುಕೊಳ್ಳಬೇಕು ಎಂಬ ಅಧಿಕಾರ ಇರುತ್ತದೆ ಎಂದರು.
ಕೇಂದ್ರ ನಾಯಕರು ನನ್ನ ವಿಚಾರದಲ್ಲಿ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬೇಕಿತ್ತು ಅಂತ ಭಾವನೆಯಲ್ಲಿದ್ದಾರೆ ಅಂತ ನಾನಂದುಕೊಡಿದ್ದೇನೆ. ಈ ಬಗ್ಗೆ ಬಹಿರಂಗವಾಗಿ ನಾನು ಯಾಕೆ ಹೇಳುತ್ತಿದ್ದೇನೆ ಅಂದರೆ ಈ ಬಗ್ಗೆ ಮುಖ್ಯಮಂತ್ರಿಯವರು ಗಮನಿಸಬೇಕು. ಇದು ಸೌಜನ್ಯ ಪ್ರತಿಭಟನೆ, ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯವರ ವಿರುದ್ಧ ನಾನು ಮಾಡುತ್ತಿಲ್ಲ. ಇಡೀ ರಾಜ್ಯದ ಜನ ನನ್ನನ್ನು ಕೇಳುತ್ತಿರುವಾಗ ಏನು ಉತ್ತರ ಕೊಡಬೇಕು ಎಂದು ಗೊತ್ತಿಲ್ಲ. ಅದಕ್ಕೆ ಮಾಧ್ಯಮದ ಮೂಲಕ ಅವರಿಗೆ ನನ್ನ ಉತ್ತರ ತಿಳಿಸುತ್ತಿದ್ದೇನೆ ಎಂದರು.
ಮಾಧ್ಯಮದವರ ಪ್ರಶ್ನೆಗೆ ಸಿಎಂ ಗರಂ ಉತ್ತರ
ಸಚಿವ ಸ್ಥಾನ ಕೊಡುತ್ತಿಲ್ಲ ಅಂತಾ ಈಶ್ವರಪ್ಪ ಹೇಳಿಕೆ ಬಗ್ಗೆ ಮುಖ್ಯಮಂತ್ರಿಯವರನ್ನು ಕೇಳಿದಾಗ ಗರಂ ಆಗಿ ಉತ್ತರಿಸಿದ ಅವರು, ಆ ತರ ಏನೂ ಇಲ್ಲ ನೀವೇ ಸೃಷ್ಟಿ ಮಾಡಿಕೊಂಡು ಮಾತನಾಡಬೇಡಿ, ನಾನು ಈಶ್ವರಪ್ಪ ಜೊತೆ ಮಾತನಾಡುತ್ತೇನೆ ಎಂದು ಹೇಳಿ ತೆರಳಿದರು.
ಮತ್ತಷ್ಟು ರಾಜಕೀಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ