ಕೋಲ್ಕತ್ತಾ: ಬಿಜೆಪಿ ಮತ್ತು ಸಿಪಿಐ(ಎಂ) ನಡುವಿನ “ಹೊಂದಾಣಿಕೆ” ಕೇರಳಕ್ಕೆ ಹೊಸ ಹೆಸರು ಪಡೆಯಲು ಸಹಾಯ ಮಾಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ.
ಕೇರಳ ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾವಣೆ ಮಾಡುವ ಕೇರಳ ಸರ್ಕಾರದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳವನ್ನು ‘ಬಂಗಾಳ’ ಎಂದು ಹೆಸರಿಸುವ ತನ್ನ ಸರ್ಕಾರದ ಪ್ರಸ್ತಾಪಗಳನ್ನು ಕೇಂದ್ರ ಪದೇ ಪದೇ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಅಭಿವೃದ್ಧಿಗಾಗಿ ಕೇರಳದ ಜನರನ್ನು ಅಭಿನಂದಿಸಿದ ಮಮತಾ ಬ್ಯಾನರ್ಜಿ, ಆಯಾ ರಾಜ್ಯ ಸರ್ಕಾರಗಳು ಅಂತಹ ಪ್ರಸ್ತಾಪಗಳನ್ನು ಅನುಮೋದಿಸಿದ ನಂತರ ಹಲವಾರು ರಾಜ್ಯಗಳ ಹೆಸರುಗಳನ್ನು ಬದಲಾಯಿಸಲಾಗಿದೆ ಎಂದು ಹೇಳಿದರು.
“ಆದಾಗ್ಯೂ, ಪಶ್ಚಿಮ ಬಂಗಾಳದಲ್ಲಿ ಆ ರೀತಿ ಆಗಿಲ್ಲ”. ಕೇಂದ್ರ ಸರ್ಕಾರ “ಬಂಗಾಳಿ ವಿರೋಧಿ” ಆಗಿರುವುದರಿಂದ ತಮ್ಮ ಸರ್ಕಾರದ ಪ್ರಸ್ತಾಪವನ್ನು ಅನುಮೋದಿಸುತ್ತಿಲ್ಲ ಎಂದು ಆರೋಪಿಸಿದರು.
ದಕ್ಷಿಣ ರಾಜ್ಯದ ಆಡಳಿತ ಪಕ್ಷವಾದಸಿಪಿಐ(ಎಂ) ಮತ್ತು ಬಿಜೆಪಿ ನಡುವಿನ ಹೊಂದಾಣಿಕೆ ಕೇರಳಕ್ಕೆ ಹೊಸ ಹೆಸರನ್ನು ಪಡೆಯಲು ಸಹಾಯ ಮಾಡಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳವನ್ನು ಯಾವಾಗಲೂ ಕಡೆಗಣಿಸಲಾಗುತ್ತಿದೆ. ಆದರೆ ಮುಂದೊಂದು ದಿನ, ನೀವು(ಬಿಜೆಪಿ) ಅಧಿಕಾರದಲ್ಲಿ ಇರುವುದಿಲ್ಲ. ಆಗ ನಾವು ಹೆಸರನ್ನು ಬದಲಾಯಿಸುತ್ತೇವೆ” ಎಂದು ಮಮತಾ ಬ್ಯಾನರ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳವನ್ನು ಮರುನಾಮಕರಣ ಮಾಡುವಂತೆ ಕೋರಿ ನಮ್ಮ ಸರ್ಕಾರ ರಾಜ್ಯ ವಿಧಾನಸಭೆಯಲ್ಲಿ ಎರಡು ಬಾರಿ ನಿರ್ಣಯಗಳನ್ನು ಅಂಗೀಕರಿಸಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.
