ಮುಂಬೈ: ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಸಾಧಿಸಿರುವ ಗೆಲುವು ಕೇವಲ ಆರಂಭವೇ ಹೊರತು ಅಂತ್ಯವಲ್ಲ ಎಂದು ಶನಿವಾರ ಹೇಳಿರುವ ಶಿವಸೇನೆ(ಉದ್ಧವ್ ಠಾಕ್ರೆ ಬಣ)ಯ ಮುಖ್ಯಸ್ಥ ಉದ್ಧವ್ ಠಾಕ್ರೆ, ರಾಜ್ಯದಲ್ಲಿನ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟವು ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಮಿತ್ರ ಪಕ್ಷವಾಗಿರುವ ಶಿವಸೇನೆಯ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಅವರು ದಕ್ಷಿಣ ಮುಂಬೈನಲ್ಲಿ ಮಹಾವಿಕಾಸ್ ಅಘಾಡಿ ಮಿತ್ರ ಪಕ್ಷಗಳು ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಎನ್ಸಿಪಿ(ಎಸ್ಪಿ) ಮುಖ್ಯಸ್ಥ ಶರದ್ ಪವಾರ್ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚೌಹಾಣ್ ಕೂಡಾ ಉಪಸ್ಥಿತರಿದ್ದರು.
ಬಿಜೆಪಿಯ ಅಜೇಯತೆ ಪ್ರತಿಪಾದನೆಯು ಎಷ್ಟು ಹುಸಿಯಾದದ್ದು ಎಂಬುದನ್ನು ರಾಜ್ಯದ ಜನತೆ ತೋರಿಸಿದ್ದಾರೆ ಎಂದೂ ಅವರು ಹೇಳಿದರು.
ಇದೇ ವೇಳೆ, ಮಹಾವಿಕಾಸ್ ಅಘಾಡಿ ಮೈತ್ರಿಕೂಟದ ಮೂರೂ ಮಿತ್ರ ಪಕ್ಷಗಳು ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಪ್ರಾಥಮಿಕ ಸಭೆಯನ್ನೂ ನಡೆಸಿದವು.
