ಬೆಂಗಳೂರು: ಭಾರತದಲ್ಲಿ ಸುಸ್ಥಿರ ಸಂಚಾರ ವ್ಯವಸ್ಥೆಯನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಹೊಸ ಪರಿಹಾರಗಳನ್ನು ಕಂಡುಕೊಳ್ಳಲು ಆರಂಭಿಸಿದ್ದ ಸುಸ್ಥಿರ ಸಂಚಾರಕ್ಕೆ ಕೊಡುಗೆ ನೀಡುವ ತನ್ನ ಹೊಸ ಪರಿಕಲ್ಪನೆಯಾಗಿರುವ ನವೋದ್ಯಮ ಸ್ಪರ್ಧೆಯ ʼಉಬರ್ ಸಸ್ಟೆನೊವೇಟ್ʼ ವಿಜೇತರನ್ನು ಘೋಷಣೆ ಮಾಡಿತ್ತು.
ಗುರುವಾರ ನಡೆದ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು 1 ಕೋಟಿ ರೂ. ಮೊತ್ತದ ಚೆಕ್ ಅನ್ನು ಬಹುಮಾನ ವಿಜೇತರಿಗೆ ಹಸ್ತಾಂತರಿಸಿ ಸ್ಪರ್ಧೆಯ ವಿಜೇತರಿಗೆ ಶುಭಕೋರಿದರು.
ಬಳಿಕ ಮಾತನಾಡಿದ ಅವರು ʼಉಬರ್ ಸಸ್ಟೆನೊವೇಟ್ ಬರೀ ಒಂದು ವಿದ್ಯಮಾನವಲ್ಲ. ಅದೊಂದು ಭರವಸೆಯ ಮಾಧ್ಯಮವಾಗಿರುವುದರ ಜೊತೆಗೆ ಪರಿಸರ ಸ್ನೇಹಿ ಭವಿಷ್ಯದತ್ತ ನಮ್ಮ ಪಯಣದಲ್ಲಿ ಮುಂದೆ ಇರುವ ವಿಪುಲ ಸಾಧ್ಯತೆಗಳಿಗೂ ಸಾಕ್ಷಿಯಾಗಿದೆ. ಶೂನ್ಯ ಹೊಗೆ ಹೊರಸೂಸುವಿಕೆಯ ಕಡೆಗೆ ನಮ್ಮ ಗಮನ ತಿರುಗಿಸಲು ನೆರವಾಗುವ ಹೊಸ ಪರಿಹಾರಗಳನ್ನು ಕಂಡುಹಿಡಿಯುವುದು ಇಂದು ನಮ್ಮೆದುರು ಇರುವ ನಿರ್ಣಾಯಕ ಸವಾಲಾಗಿದೆ. ಬೆಂಗಳೂರು ಸ್ಟಾರ್ಟ್ ಆಫ್ ಕಂಪನಿಗಳಿಗೆ ಹಾಗೂ ಟೆಕ್ ಯುವಜನತೆಗೆ ರಾಜಧಾನಿಯಾಗಿದೆ ಎಂದರು.
ಸುಸ್ಥಿರ ಸಂಚಾರ ವ್ಯವಸ್ಥೆಯು ಕೇವಲ ಒಂದು ಆಯ್ಕೆಯಾಗಿರದೆ ಜೀವನ ವಿಧಾನವಾಗಿರುವ ವಾತಾವರಣ ಬೆಳೆಸುವ ಕರ್ನಾಟಕದಲ್ಲಿನ ನಮ್ಮ ಸ್ವಂತ ಆಕಾಂಕ್ಷೆಗಳನ್ನೂ ಇದು ಪ್ರತಿಬಿಂಬಿಸಲಿದ್ದು, ಅದನ್ನು ಇಡೀ ಭಾರತಕ್ಕೂ ವಿಸ್ತರಿಸಬಹುದು ಎಂದು ಅವರು ಹೇಳಿದರು.
ಉಬರ್ನ ಹಿರಿಯ ಎಂಜಿನಿಯರಿಂಗ್ ನಿರ್ದೇಶಕ ಮತ್ತು ಬೆಂಗಳೂರು ಟೆಕ್ ಸೆಂಟರ್ನ ಮುಖ್ಯಸ್ಥ ಮಣಿಕಂದನ್ ತಂಗರತ್ನಂ ಸಹಿತ ಹಲವರು ಉಪಸ್ಥಿತರಿದ್ದರು.
