ಕುಂದಾಪುರ, ಜ.6: ಕಳೆದ ತಿಂಗಳು ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಅಂಪಾರಿನಲ್ಲಿ ನಡೆದಿದ್ದ ಲಕ್ಷಾಂತರ ರೂ.ಮೌಲ್ಯದ ಸಿಪ್ಪೆ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಂಡ್ಲೂರು ಕಾವ್ರಾಡಿ ನಿವಾಸಿಗಳಾದ ಇಮ್ರಾನ್ (19), ಖಾಜಾ ಅಖೀಬ್ (19), ಮುಝಾಫರ್ (26) ಬಂಧಿತ ಆರೋಪಿಗಳು. ಆರೋಪಿಗಳು ಕಳವು ಮಾಡಿ ಮಾರಾಟ ಮಾಡಿದ್ದ ಸುಮಾರು 1.08 ಕ್ವಿಂಟಲ್ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಒಂದು ಸ್ಕೂಟರ್ ಅಂದಾಜು ಮೌಲ್ಯ 5 ಲಕ್ಷದ 28 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
2023ರ ಡಿಸೆಂಬರ್ 18ರಂದು ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಅಂಪಾರು ಗ್ರಾಮದ ನೈಲಕೊಂಡ ಎಂಬಲ್ಲಿ ಕೆ.ಉಮೇಶ ಎನ್ನುವರ ಮನೆಯ ಅಂಗಳದಲ್ಲಿ ಒಣಗಿಸಿದ್ದ ಸುಮಾರು 1 ಲಕ್ಷ ಮೌಲ್ಯದ ಸುಮಾರು 16 ಚೀಲದಷ್ಷು ಸಿಪ್ಪೆ ಅಡಿಕೆ(480 ಕೆ.ಜಿ)ಯನ್ನು ಕದ್ದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಂಕರನಾರಾಯಣ ಠಾಣೆ ಪಿಎಸ್‌ಐ ನಾಸೀರ್ ಹುಸೇನ್ ಹಾಗೂ ಸಿಬ್ಬಂದಿಗಳು, ಕುಂದಾಪುರ ಗ್ರಾಮಾಂತರ ಠಾಣಾ ಅಧಿಕಾರಿ, ಸಿಬ್ಬಂದಿಗಳು ಹಾಗೂ ಅಮಾಸೆಬೈಲು ಠಾಣಾ ಅಧಿಕಾರಿ, ಸಿಬ್ಬಂದಿಗಳು ಜ.5ರಂದು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.