ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಪ್ರಯತ್ನಗಳಿಂದ ಖಾಸಗಿ ಸಂಸ್ಥೆಗಳಿಂದಲೂ ನೆರವು
ಬೆಂಗಳೂರು:
ಕೊರೊನಾ ನಿರ್ವಹಣೆ ವ್ಯವಸ್ಥೆಗೆ ಅಜೀಂ ಪ್ರೇಮ್‍ಜಿ ಪ್ರತಿಷ್ಠಾನವು ಅಗತ್ಯ ನೆರವುಗಳನ್ನು ನೀಡಿದ್ದು, ಇದಕ್ಕಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಭಿನಂದನೆ ಸಲ್ಲಿಸಿದ್ದಾರೆ.
ಕೊರೊನಾ ನಿರ್ವಹಣೆಗೆ ಸರ್ಕಾರ ಮಾತ್ರವಲ್ಲದೆ, ಸಂಘ, ಸಂಸ್ಥೆಗಳ ನೆರವು ಕೂಡ ಅಗತ್ಯವಿದೆ. ಸಚಿವ ಡಾ.ಕೆ.ಸುಧಾಕರ್ ಅವರು ನಿರಂತರವಾಗಿ ಸಂಘ, ಸಂಸ್ಥೆಗಳ ಸಂಪರ್ಕದಲ್ಲಿದ್ದು, ಕೋವಿಡ್ ನಿರ್ವಹಣೆಯಲ್ಲಿ ಸಂಸ್ಥೆಗಳು ಕೂಡ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.
ಸಚಿವ ಡಾ.ಕೆ.ಸುಧಾಕರ್ ಅವರು ಬೆಂಗಳೂರಿನ ಬ್ರಾಡ್ ವೇ ರಸ್ತೆಯ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭವಾಗಲು ಕೆಲ ಸಂಸ್ಥೆಗಳ ನೆರವು ಪಡೆದಿದ್ದಾರೆ. ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ಡಾಕ್ಟರ್ಸ್ ಫಾರ್ ಯು ಹೆಸರಿನ ತಂಡದ ಸಿಬ್ಬಂದಿಯನ್ನು ಆಸ್ಪತ್ರೆಗೆ ನೀಡಿದೆ.
ಈ ಪ್ರತಿಷ್ಠಾನವು, 5 ಲಿಕ್ವಿಡ್ ಹ್ಯಾಡ್ಲಿಂಗ್ ಸಿಸ್ಟಮ್ ಗಳನ್ನು ಬಿಎಂಸಿಆರ್ ಐ, ನಿಮ್ಹಾನ್ಸ್, ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ ಮತ್ತು ರಾಷ್ಟ್ರೀಯ ವೈರಾಲಜಿ ಸಂಸ್ಥೆಗಳಿಗೆ ನೀಡಿದೆ. 3 ಆರ್ ಟಿಪಿಸಿಆರ್ ಯಂತ್ರ, 4 ಆರ್ ಎನ್ ಎ ಯಂತ್ರಗಳನ್ನು ಬಿಎಂಸಿಆರ್‍ಐ, ಬೌರಿಂಗ್, ಲೇಡಿ ಕರ್ಜನ್ ಸಂಸ್ಥೆಗಳಿಗೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಪೂರ್ವ ವಲಯಕ್ಕೆ 800, ಮಹದೇವಪುರಕ್ಕೆ 500, ಬೊಮ್ಮನಹಳ್ಳಿಗೆ 800 ಮತ್ತು ದಾಸರಹಳ್ಳಿಗೆ 655 ಸೇರಿ ಒಟ್ಟು 4,755 ಪಲ್ಸ್ ಆಕ್ಸಿಮೀಟರ್ ಗಳನ್ನು ಅಜೀಂ ಪ್ರೇಮ್ ಜಿ ಫೌಂಡೇಶನ್ ನೀಡಿದೆ.