Home Uncategorized ಅಡಿಲೇಡ್ ಇಂಟರ್ನ್ಯಾಶನಲ್ ಪ್ರಶಸ್ತಿ ಗೆದ್ದ ಜಿರಿ ಲೆಹೆಕ

ಅಡಿಲೇಡ್ ಇಂಟರ್ನ್ಯಾಶನಲ್ ಪ್ರಶಸ್ತಿ ಗೆದ್ದ ಜಿರಿ ಲೆಹೆಕ

32
0

ಅಡಿಲೇಡ್ (ಆಸ್ಟ್ರೇಲಿಯ): ಝೆಕ್ ಆಟಗಾರ ಜಿರಿ ಲೆಹೆಕ ಅಡಿಲೇಡ್ ಇಂಟರ್ನ್ಯಾಶನಲ್ ಟೆನಿಸ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಶನಿವಾರ ನಡೆದ ಫೈನಲ್ ನಲ್ಲಿ ಅವರು ಬ್ರಿಟನ್ನ ಜಾಕ್ ಡ್ರೇಪರ್ರನ್ನು 4-6, 6-4, 6-3 ಸೆಟ್ ಗಳಿಂದ ಸೋಲಿಸಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ನಲ್ಲಿ ಕ್ವಾರ್ಟರ್ಫೈನಲ್ ತಲುಪಿದ್ದ ಲೆಹೆಕ, ಅಡಿಲೇಡ್ ನಲ್ಲಿ ಜಿದ್ದಾಜಿದ್ದಿನ ಹೋರಾಟದಲ್ಲಿ ತೀವ್ರ ಪ್ರತಿಹೋರಾಟ ನೀಡಿ ತನ್ನ ಎದುರಾಳಿಯನ್ನು ಮಣಿಸಿದರು.

ಇಪ್ಪತ್ತೆರಡು ವರ್ಷದ ಇಬ್ಬರು ಆಟಗಾರರು, ಟೆನಿಸ್ ಅಂಗಳದಲ್ಲಿ ಎರಡು ಗಂಟೆಗಳ ಕಾಲ ಕಾದಾಡಿದರು. ಈ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಲೆಹೆಕ ಮುಂದಿನ ವಾರ ಮೆಲ್ಬರ್ನ್ನಲ್ಲಿ ಆರಂಭಗೊಳ್ಳಲಿರುವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಗೆ ಸಂಪೂರ್ಣ ಸಿದ್ಧರಾಗಿ ತೆರಳಲಿದ್ದಾರೆ.

‘‘ಅಡಿಲೇಡ್ ನಲ್ಲಿ ನನ್ನ ಮೊದಲ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಹೃದಯ ತುಂಬಿ ಬಂದಿದೆ. ಏನೂ ಹೇಳಲು ಮಾತುಗಳು ಹೊರಡುತ್ತಿಲ್ಲ. ನಾನು ರೋಮಾಂಚಿತನಾಗಿದ್ದೇನೆ’’ ಎಂದು ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಲೆಹೆಕ ಹೇಳಿದರು.

ಮುಂದಿನ ವಾರ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ನ ಮೊದಲ ಸುತ್ತಿನಲ್ಲಿ, 32ನೇ ಶ್ರೇಯಾಂಕದ ಲೆಹೆಕ ಸ್ಪೇನ್ನ ಬರ್ನಬ್ ಝಪಟ ಮಿರಾಲಿಸ್ ವಿರುದ್ಧ ಸೆಣಸಲಿದ್ದಾರೆ. ಅದೇ ವೇಳೆ, ಡ್ರೇಪರ್ ಅಮೆರಿಕದ ಮಾರ್ಕೋಸ್ ಗಿರೋನ್ರನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಲಾತ್ವಿಯದ ಜೆಲೀನಾ ಒಸ್ಟಪೆಂಕೊ ಪ್ರಶಸ್ತಿ ಗೆದ್ದರು. ಅವರು ರಶ್ಯದ ಡಾರಿಯಾ ಕಸಟ್ಕಿನರನ್ನು 6-3, 6-2 ಸೆಟ್ ಗಳಿಂದ ಸೋಲಿಸಿದರು. ಪಂದ್ಯದಲ್ಲಿ ಐದು ಬಾರಿ ಸರ್ವ್ ಗಳನ್ನು ತುಂಡರಿಸುವ ಮೂಲಕ ಒಸ್ಟಪೆಂಕೊ ತನ್ನ ಪ್ರಾಬಲ್ಯವನ್ನು ತೋರ್ಪಡಿಸಿದರು.

ಅಡಿಲೇಡ್ ನಲ್ಲಿ ನೀಡಿರುವ ಭವ್ಯ ಪ್ರದರ್ಶನದ ಹಿನ್ನೆಲೆಯಲ್ಲಿ, ಒಸ್ಟಪೆಂಕೊ ವಿಶ್ವ ರ್ಯಾಂಕಿಂಗ್ ನಲ್ಲಿ ಅಗ್ರ 10ರ ಪಟ್ಟಿಗೆ ಮರಳಲಿದ್ದಾರೆ. 2018ರ ಬಳಿಕ ಅಗ್ರ 10ರ ಪಟ್ಟಿಗೆ ಅವರು ಮರಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

26 ವರ್ಷದ ಲಾತ್ವಿಯ ಆಟಗಾರ್ತಿ, ಆಸ್ಟ್ರೇಲಿಯ ಓಪನ್ ನಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯದ ಕಿಂಬರ್ಲಿ ಬಿರೇಲ್ರನ್ನು ಎದುರಿಸಲಿದ್ದಾರೆ.

15ನೇ ವಿಶ್ವ ರ್ಯಾಂಕಿಂಗ್ ನ ಡಾರಿಯ ಆಸ್ಟ್ರೇಲಿಯ ಓಪನ್ನ ಮೊದಲ ಸುತ್ತಿನಲ್ಲಿ ಅಮೆರಿಕದ ಪೀಟನ್ ಸ್ಟೇರ್ನ್ಸ್ರನ್ನು ಎದುರಿಸುತ್ತಾರೆ.

LEAVE A REPLY

Please enter your comment!
Please enter your name here