ಹೊಸದಿಲ್ಲಿ: ಕುಸ್ತಿ ಒಕ್ಕೂಟದ ಆಡಳಿತವನ್ನು ನೋಡಿಕೊಳ್ಳಲು ನೇಮಿಸಲಾಗಿರುವ ಅಡ್-ಹಾಕ್(ತಾತ್ಕಾಲಿಕ) ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ(IOA)ಸೋಮವಾರ ಪ್ರಕಟಿಸಿದೆ. ರಾಷ್ಟ್ರೀಯ ಕುಸ್ತಿ ಫೆಡರೇಶನ್ ಅನ್ನು ಮರು ಸ್ಥಾಪಿಸಲಾಗಿದ್ದು, ಅದು ಕ್ರೀಡೆಯ ಮೇಲೆ ಸಂಪೂರ್ಣ ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿದೆ. ಹೀಗಾಗಿ ಇನ್ನು ಮುಂದೆ ಅಡ್ ಹಾಕ್ ಸಮಿತಿಯ ಅಗತ್ಯವಿಲ್ಲ ಎಂದು ಐಒಎ ತಿಳಿಸಿದೆ.
ಮುಂದಿನ ತಿಂಗಳು ನಡೆಯುವ ಒಲಿಂಪಿಕ್ಸ್ ಅರ್ಹತಾ ಟೂರ್ನಮೆಂಟ್ ಗಾಗಿ ನಡೆದ ಆಯ್ಕೆ ಟ್ರಯಲ್ಸ್ ಅನ್ನು ಯಶಸ್ವಿಯಾಗಿ ಆಯೋಜಿಸಿದ ನಂತರ ಅಡ್ ಹಾಕ್ ಸಮಿತಿಯನ್ನು ವಿಸರ್ಜಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಕ್ರೀಡಾ ಸಚಿವಾಲಯವು ಭಾರತದ ಕುಸ್ತಿ ಫೆಡರೇಶನ್(WFI)ಅನ್ನು ಅಮಾನತುಗೊಳಿಸಿದ ನಂತರ ಕಳೆದ ವರ್ಷದ ಡಿಸೆಂಬರ್ ನಲ್ಲಿ ಅಡ್-ಹಾಕ್ ಸಮಿತಿಯನ್ನು ರಚಿಸಲಾಗಿತ್ತು. ಜಾಗತಿಕ ಆಡಳಿತ ಮಂಡಳಿ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ನಿಂದ ವಿಧಿಸಲಾದ ನಿಷೇಧವನ್ನು ಫೆಬ್ರವರಿಯಲ್ಲಿ ಹಿಂಪಡೆಯಲಾಗಿತ್ತು. ಇದರಿಂದ ಡಬ್ಲ್ಯುಎಫ್ಐ ಸಮಾಧಾನದ ನಿಟ್ಟುಸಿರು ಬಿಟ್ಟಿತ್ತು.
ಭಾರತದ ಕುಸ್ತಿ ಫೆಡರೇಶನ್ ಮೇಲೆ ವಿಧಿಸಲಾಗಿರುವ ನಿಷೇಧವನ್ನು ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ತೆಗೆದುಹಾಕಿರುವುದು ಹಾಗೂ ದಿಲ್ಲಿಯ ಹೈಕೋರ್ಟ್ನ ನಿರ್ದೇಶನದ ಪ್ರಕಾರ ಐಒಎ ನೇಮಿಸಿದ ಅಡ್ಹಾಕ್ ಸಮಿತಿಯು ಆಯ್ಕೆ ಟ್ರಯಲ್ಸ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅಡ್ಹಾಕ್ ಸಮಿತಿಯನ್ನು ವಿಸರ್ಜಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಮಾರ್ಚ್ 10ರಂದು ಐಒಎ ಆದೇಶ ಹೊರಡಿಸಿತ್ತು.
ಹೊಸದಾಗಿ ಚುನಾಯಿತರಾದ ಸಂಜಯ್ ಸಿಂಗ್ ನೇತೃತ್ವದ ಡಬ್ಲ್ಯುಎಫ್ಐ ತನ್ನದೇ ಆದ ನಿಯಮಗಳನ್ನು ಉಲ್ಲಂಘಿಸಿದ ನಂತರ ಭೂಪೇಂದರ್ ಸಿಂಗ್ ಬಜ್ವಾ ಅವರ ಅಧ್ಯಕ್ಷತೆಯಲ್ಲಿ ತಾತ್ಕಾಲಿಕ ಸಮಿತಿಯನ್ನು ಡಿಸೆಂಬರ್ 23ರಂದು ರಚಿಸಲಾಗಿತ್ತು.
ಮುಂಬರುವ ಏಶ್ಯನ್ ಚಾಂಪಿಯನ್ಶಿಪ್ ನ ಹಾಗೂ ಮುಂದಿನ ತಿಂಗಳು ಕಿರ್ಗಿಸ್ತಾನ್ ನಲ್ಲಿ ನಿಗದಿಯಾಗಿರುವ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ ಗೆ ತಂಡಗಳನ್ನು ಆಯ್ಕೆ ಮಾಡಲು ಅಡ್-ಹಾಕ್ ಸಮಿತಿ ಈ ತಿಂಗಳಾರಂಭದಲ್ಲಿ ಟ್ರಯಲ್ಸ್ ಆಯೋಜಿಸಿತ್ತು.
ಈ ಹಿಂದೆ ಡಬ್ಲ್ಯುಎಫ್ಐ ವಿರುದ್ಧ ಪ್ರತಿಭಟನೆ ನಡೆಸಿದ ಹೊರತಾಗಿಯೂ ಪ್ರಮುಖ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ಟ್ರಯಲ್ಸ್ ನಲ್ಲಿ ಭಾಗವಹಿಸಿದ್ದರು. ವಿನೇಶ್ 50 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್ ಕ್ವಾಲಿಫೈಯರ್ಗೆ ತನ್ನ ಸ್ಥಾನ ಪಡೆದಿದ್ದರು.
ಟ್ರಯಲ್ಸ್ ಸುಗಮವಾಗಿ ಹಾಗೂ ಯಶಸ್ವಿಯಾಗಿ ಮುಕ್ತಾಯಗೊಂಡ ಕಾರಣ ಕ್ರೀಡೆಯ ಆಡಳಿತಾತ್ಮಕ ನಿಯಂತ್ರಣವನ್ನು ಈಗ ಸಂಪೂರ್ಣವಾಗಿ ಡಬ್ಲ್ಯುಎಫ್ಐಗೆ ವರ್ಗಾಯಿಸಲಾಗಿದೆ.
ಲೈಂಗಿಕ ಕಿರುಕುಳ ಹಾಗೂ ನಿಯಮಗಳ ಅನುಸರಣೆಯಂತಹ ಇತರ ಸಮಸ್ಯೆಗಳನ್ನು ಪರಿಹರಿಸಲು ಸುರಕ್ಷತಾ ಸಮಿತಿ ಅಧಿಕಾರಿಯನ್ನು ನೇಮಿಸಲು ಡಬ್ಲ್ಯುಎಫ್ಐಗೆ ಐಒಎ ಸೂಚನೆ ನೀಡಿದೆ.
ಸ್ಥಾಪಿತ ಕಾರ್ಯವಿಧಾನಗಳು ಹಾಗೂ ಮಾರ್ಗಸೂಚಿಗಳ ಅನುಗುಣವಾಗಿ ಅತ್ಲೀಟ್ ಗಳ ಆಯೋಗದ ಚುನಾವಣೆಗಳನ್ನು ಕಾಲಮಿತಿಯಲ್ಲಿ ನಡೆಸುವಂತೆ ಡಬ್ಲ್ಯುಎಫ್ಐಗೆ ನಿರ್ದೇಶಿಸಲಾಗಿದೆ.