ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳ ನಿರ್ಲಕ್ಷ್ಯತನ ಆಗಾಗ್ಗೆ ಬಹಿರಂಗವಾಗುತ್ತಿರುತ್ತದೆ. ಈಗ ಬೆಳ್ಳಂದೂರು ನಿವಾಸಿಗಳು BWSSB ವಿರುದ್ಧ ಆರೋಪಿಸುತ್ತಿದ್ದಾರೆ. ಬೆಂಗಳೂರು: ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳ ನಿರ್ಲಕ್ಷ್ಯತನ ಆಗಾಗ್ಗೆ ಬಹಿರಂಗವಾಗುತ್ತಿರುತ್ತದೆ. ಈಗ ಬೆಳ್ಳಂದೂರು ನಿವಾಸಿಗಳು BWSSB ವಿರುದ್ಧ ಆರೋಪಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಕಚೇರಿಯ ಎದುರೇ ಏನಾಗುತ್ತಿದೆ ಎಂಬ ಅರಿವೂ ಅಧಿಕಾರಿಗಳಿಗೆ ಇಲ್ಲವೇ? ಎಂಬ ಪ್ರಶ್ನೆ ಮೂಡುವಂತೆ ಈ ಪ್ರಕರಣ ಮಾಡಿದೆ.
ಬೆಳ್ಳಂದೂರು ಮುಖ್ಯರಸ್ತೆಯಲ್ಲಿರುವ BWSSB ಕಚೇರಿಯ ಮುಂಭಾಗವೇ ಮ್ಯಾನ್ ಹೋಲ್ ತುಂಬಿ 3 ದಿನಗಳಿಂದ ಕೊಳಚೆನೀರು ಹೊರ ಬರುತ್ತಿತ್ತು.
ಬಿಡಬ್ಲ್ಯುಎಸ್ಎಸ್ ಬಿ ಹಾಗೂ ಬಿಬಿಎಂಪಿಗೆ ದೂರು ನೀಡಿದ್ದರೂ ಸಹ ಅಧಿಕಾರಿಗಳು ಈ ವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: 31 ಬಿಡಬ್ಲ್ಯುಎಸ್‌ಎಸ್‌ಬಿ ಕೊಳಚೆ ಸಂಸ್ಕರಣಾ ಘಟಕಗಳಲ್ಲಿ ವೈಜ್ಞಾನಿಕವಾಗಿ ಕೆಲಸ ಮಾಡುವುದು ಕೇವಲ 8 ಮಾತ್ರ!
ಪೈಪ್ ಕಾಮಗಾರಿಗಾಗಿ ಮುಖ್ಯರಸ್ತೆಯನ್ನು ಒಂದು ವರ್ಷದ ಹಿಂದೆ ಅಗೆಯಲಾಗಿತ್ತು ಆಗಿನಿಂದಲೂ ರಸ್ತೆ ದುರಸ್ತಿಯಾಗಿಲ್ಲ.
ಬೆಳ್ಳಂದೂರು ನಿವಾಸಿ ಕೃಷ್ಣ ಮಾದೇಶ್ ಎಂಬುವವರು ಈ ಬಗ್ಗೆ ಮಾತನಾಡಿದ್ದು, ಕಳೆದ 3 ದಿನಗಳಿಂದಲೂ ಮುಖ್ಯರಸ್ತೆಯಲ್ಲಿ ಮ್ಯಾನ್ ಹೋಲ್ ನೀರು ಹರಿಯುತ್ತಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳಿಗೆ ಪದೇ ಪದೇ ಮನವಿ ಮಾಡಿದ ಬಳಿಕ ಶನಿವಾರದಿಂದ ನೀರು ಹೊರಬರುವುದು ತಪ್ಪಿದೆ. ಅಷ್ಟೇ ಅಲ್ಲದೇ ಈಗ ಬಿಡಬ್ಲ್ಯುಎಸ್ಎಸ್ ಬಿ ಯ ಲೈನ್ ಕಾಮಗಾರಿ ಹಾಗೂ ಬಿಬಿಎಂಪಿಯ ಚರಡಿ ಕಾಮಗಾರಿಯೂ ಪ್ರಾರಂಭವಾಗಿರುವುದರಿಂದ ಮತ್ತೆ ಸಾರ್ವಜನಿಕರಿಗೆ ಅನಾನುಕೂಲವಾಗತೊಡಗಿದೆ. ಸಮನ್ವಯದ ಕೊರತೆಯ ಕಾರಣದಿಂದ ಕಾಮಗಾರಿಗಳು ಸೂಕ್ತವಾಗಿ ನಡೆಯದೇ ಕಳೆದ 8 ತಿಂಗಳಿನಿಂದ ಸ್ಥಳೀಯರು ತೀವ್ರ ಅನನುಕೂಲ ಎದುರಿಸುವಂತಾಗಿದೆ.
ಆಮ್ ಆದ್ಮಿ ಪಕ್ಷದ ಅಶೋಕ್ ಮೃತ್ಯುಂಜಯ ಮಾತನಾಡಿ, ಸಾರ್ವಜನಿಕರ ದೂರುಗಳಿಗೆ ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ ಬಿಯಂತಹ ಸಂಸ್ಥೆಗಳು ಸ್ಪಂದಿಸುವುದಿಲ್ಲ. ದೂರು ನೀಡಲು ಹೋದ ಸಾರ್ವಜನಿಕರನ್ನು ಸಂಸ್ಥೆಗಳು ಕಚೇರಿಯಿಂದ ಕಚೇರಿಗೆ ಅಲೆಸುತ್ತವೆ. ಕೊನೆಗೆ ಶಾಸಕರ ಆಪ್ತ ಸಹಾಯಕರನ್ನು ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳುವಂತೆ ಹೇಳಲಾಗುತ್ತದೆ. ಶಾಸಕರೇ ಕಾಮಗಾರಿಗಳನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ, ಕೊನೆಗೆ ಶಾಸಕರನ್ನೇ ಸಂಪರ್ಕಿಸಿ ಕೆಲಸ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬಿಡಬ್ಲ್ಯುಎಸ್ ಎಸ್ ಬಿ ಸಹಾಯಕ ಇಂಜಿನಿಯರ್ ಲಭ್ಯವಿರಲಿಲ್ಲ.