ಕೊಯಂಬತ್ತೂರು : ಅನಮಲೈ ಹುಲಿ ಸಂರಕ್ಷಿತ ಪ್ರದೇಶದ ದಟ್ಟವಾದ ಕಾಡಿನಲ್ಲಿ ಆನೆಗಳ ಕುಟುಂಬವೊಂದು ನಿದ್ದೆ ಮಾಡುತ್ತಿರುವ ಡ್ರೋಣ್ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಾಯಿಯ ಮಮತೆಯನ್ನು ಸಾರಿದೆ.
ವನ್ಯಜೀವಿ ಛಾಯಾಗ್ರಾಹಕ ಧನು ಪಾರನ್ ಅವರು ಸೆರೆ ಹಿಡಿದಿರುವ ಈ ವೀಡಿಯೊವನ್ನು, ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡಿದ್ದಾರೆ. ಡ್ರೋಣ್ ಮೂಲಕ ಅದ್ಭುತವಾಗಿ ಸೆರೆಹಿಡಿದ ವೀಡಿಯೊ ಆನೆ ಮತ್ತು ಅದರ ಮರಿಗಳು ವಿಶ್ರಾಂತಿ ಪಡೆಯುವುದನ್ನು ತೋರಿಸಿದೆ.
ವೀಡಿಯೊದಲ್ಲಿ ತಾಯಿ ಆನೆಯು ಮೂರು ಮರಿಗಳೊಂದಿಗೆ ವಿಶ್ರಾಂತಿ ತೆಗೆದುಕೊಳ್ಳುವುದು ಕಾಣಿಸುತ್ತದೆ. ಒಂದು ಮರಿಯು,ಈಗಷ್ಟೇ ಹುಟ್ಟಿದ ಮರಿಯಂತೆ ತೋರುತ್ತದೆ. ಇನ್ನೊಂದು ಮರಿಯು ಹುಲ್ಲು ತಿನ್ನುತ್ತಾ ತನ್ನ ಕಾಲನ್ನು ಇನ್ನೊಂದು ಮರಿಯ ಮೇಲೆ ಕಾಲು ಚಾಚುವ ವೀಡಿಯೊ ನೋಡಲು ಅಕರ್ಷಣೀಯವಾಗಿದೆ.
“ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದ ದಟ್ಟವಾದ ಕಾಡಿನಲ್ಲಿ ಒಂದು ಸುಂದರವಾದ ಆನೆ ಕುಟುಂಬವು ಸುಖವಾಗಿ ನಿದ್ರಿಸುತ್ತದೆ. ಮರಿ ಆನೆಗೆ ಕುಟುಂಬದಿಂದ ಝಡ್ ಪ್ಲಸ್ ಭದ್ರತೆಯನ್ನು ಹೇಗೆ ನೀಡಲಾಗಿದೆ ಎಂಬುದನ್ನು ಗಮನಿಸಿ. ಮರಿ ಆನೆಗಳ ಪೈಕಿ ಒಂದು ಮರಿಯು ತನ್ನ ಇತರ ಕುಟುಂಬ ಸದಸ್ಯರ ಉಪಸ್ಥಿತಿಯನ್ನು ಹೇಗೆ ಪರಿಶೀಲಿಸುತ್ತಿದೆ. ಇದು ನಮ್ಮ ಸ್ವಂತ ಕುಟುಂಬಗಲ್ಲೂ ಕಾಣಬಹುದು ಅಲ್ಲವೇ, ” ಎಂದು ಸುಪ್ರಿಯಾ ಸಾಹು X ನ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಈ ವೀಡಿಯೊ 33,000 ವೀಕ್ಷಣೆಗಳನ್ನು ಪಡೆದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಳಕೆದಾರರು, “ಎಂತಹ ಅದ್ಭುತ ದೃಶ್ಯ. ಒಮ್ಮೆಲೇ ಹೃದಯ ಬೆಚ್ಚಗಾಗುತ್ತದೆ. ಈ ದೃಶ್ಯವನ್ನು ಡೆಸ್ಕ್‌ಟಾಪ್ ವಾಲ್‌ಪೇಪರ್ ಮತ್ತು ಹೊಸ ಪೀಳಿಗೆಯಲ್ಲಿ ವನ್ಯಜೀವಿ ಜಾಗೃತಿಯನ್ನು ತರಲು ಬಳಸಬಹುದು” ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಒಂದು ಮರಿಯು ಹಿರಿ ವಯಸ್ಸಿನ ಆನೆಯ ಮೇಲೆ ಕಾಲುಗಳನ್ನು ಇಡುವುದನ್ನು ನೀವು ಗಮನಿಸಿದರೆ, ನಮ್ಮ ಮಕ್ಕಳು ಮಲಗುವಾಗ ತಮ್ಮ ಪೋಷಕರ ಮೇಲೆ ಕಾಲುಗಳನ್ನು ಇಡುವುದನ್ನು ನೆನಪಿಸುತ್ತದೆ. ಸೂಪರ್… ಮುದ್ದಾಗಿದೆ” ಎಂದು ಕಮೆಂಟ್ ಮಾಡಿದ್ದಾರೆ.