ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಅಡ್ಡಗಾಲು ಹಾಕುತ್ತಿದ್ದಾರೆಂಬ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಅನ್ನಭಾಗ್ಯ ಯೋಜನೆ ಜಾರಿ ಮಾಡಲು ಅಡ್ಡಗಾಲು ಹಾಕುತ್ತಿದ್ದಾರೆಂಬ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.
ಅನ್ನಭಾಗ್ಯ ಯೋಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪದ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸ್ಪಷ್ಟನೆ ನೀಡಿದೆ.
ಕೇಂದ್ರ ಸರ್ಕಾರವು ಹಣದುಬ್ಬರ ನಿಯಂತ್ರಿಸಲು ಯತ್ನಿಸುತ್ತಿದೆ. ಅದಕ್ಕೆ, ಭಾರತೀಯ ಆಹಾರ ನಿಗಮವು ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಹಾಗೂ ಅಕ್ಕಿಯನ್ನು ಮಾರಾಟ ಮಾಡುತ್ತದೆ. ಅಕ್ಕಿ ಮತ್ತು ಗೋಧಿ ಬೆಲೆ ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರವು ಒಎಂಎಸ್ಎಸ್ ಮೂಲಕ ಅವುಗಳನ್ನು ಮಾರಾಟ ಮಾಡಲಿದೆ. ಹೀಗೆ ಮಾರಾಟವಾದ ಸ್ಟಾಕ್ಗಳು ಸಾರ್ವಜನಿಕರಿಗೆ ವೇಗವಾಗಿ ತಲುಪಲು ಸಾಧ್ಯವಾಗಲಿದೆ. 2023-24ರ ಹಣಕಾಸು ವರ್ಷದ ಮೊದಲ ಹರಾಜು ಜೂನ್ 28 ರಂದು ನಡೆಯಲಿದೆ ಎಂದು ಹೇಳಿದೆ. ಆ ಮೂಲಕ ಅಕ್ಕಿಯ ಮಾರಾಟವನ್ನು ಸ್ಥಗಿತಗೊಳಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
15 ವರ್ಷಗಳಲ್ಲಿ ಮೊದಲ ಬಾರಿ ಏರುತ್ತಿರುವ ಗೋಧಿ ಬೆಲೆ ನಿಯಂತ್ರಿಸಲು ಮಾರ್ಚ್ 24, 2024ರ ವರೆಗೆ ದಾಸ್ತಾನು ಮಿತಿ ವಿಧಿಸಿದೆ. ಮುಕ್ತ ಮಾರುಕಟ್ಟೆ ಒಎಂಎಸ್ಎಸ್ ಅಡಿಯಲ್ಲಿ ಮೊದಲ ಹಂತದಲ್ಲಿ ಕೇಂದ್ರ ಬೃಹತ್ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ 1.5 ಮಿಲಿಯನ್ ಟನ್ ಗೋಧಿ ಮಾರಾಟ ಮಾಡಲು ನಿರ್ಧರಿಸಿದೆ.
ಗೋಧಿಯ ಹೊರತಾಗಿ ಅಕ್ಕಿ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಗೋದಿ ಹಾಗೂ ಅಕ್ಕಿ ದಾನ್ಯಗಳ ಬೆಲೆ ಏರಿಕೆ ಸಮತೋಲನ ಕಾಪಾಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಸರ್ಕಾರದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಬೆಲೆಗಳು ನಿಯಂತ್ರಣ ಬಾರದ ಹಿನ್ನೆಲೆ ಬೆಲೆ ನಿಯಂತ್ರಿಸಲು ಮುಕ್ತ ಮಾರುಕಟ್ಟೆ ಮೂಲಕ ಅಕ್ಕಿ ಮತ್ತು ಗೋಧಿಯನ್ನು ಮಾರಾಟ ಮಾಡಲು ನಿರ್ಧರಿಸಿದೆ. ಸಗಟು ಮತ್ತು ಚಿಲ್ಲರೆ ಬೆಲೆಗಳು ಅಷ್ಟಾಗಿ ಏರಿಕೆಯಾಗದಿದ್ದರೂ ಸರ್ಕಾರ ಗೋಧಿ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಿದೆ.
2024ರ ಮಾರ್ಚ್ 24 ರವರೆಗೆ ಸಗಟು ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು ಮಾರಾಟಗಾರರ ಮೇಲೆ ಈ ದಾಸ್ತಾನು ಮಿತಿ ಅನ್ವಯಿಸಲಿದೆ. ಮಾರುಕಟ್ಟೆಯಲ್ಲಿ ಗೋಧಿಯ ಕೃತಕ ಸೆಳೆತಯವನ್ನು ಕಡಿಮೆ ಮಾಡುವುದು ಕೂಡ ಸರ್ಕಾರದ ಉದ್ದೇಶವಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಈ ಭಾರಿ ಒಎಂಎಸ್ಎಸ್ ಹರಾಜಿನಲ್ಲಿ ಏಕಕಾಲದಲ್ಲಿ 10-100 ಮೆಟ್ರಿಕ್ ಟನ್ ಗಳಷ್ಟು ಅಕ್ಕಿ/ಗೋದಿ ಹರಾಜಿನ ಮೂಲಕ ಖರೀದಿಸಬಹುದು. ಈ ಹಿಂದೆ ಹರಾಜಿನಲ್ಲಿ ಗರಿಷ್ಟ 3000 ಮೆಟ್ರಿಕ್ ಟನ್ ದಾನ್ಯಗಳನ್ನ ಖರೀದಿಗೆ ಅವಕಾಶ ಇತ್ತು. ಸಣ್ಣ ಹಾಗೂ ಮಧ್ಯಮ ಖರೀದಿದಾರರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಹಾಗೂ ಈ ಯೋಜನೆಯ (ಒಎಂಎಸ್ಎಸ್) ಹೆಚ್ಚು ಜನರನ್ನ ತಲುಪಲು ಸಾಧ್ಯವಾಗಲಿದೆ, ಜೊತೆಗೆ ಖರೀದಿ ಮಾಡಿದ ದಾನ್ಯಗಳು ಕೂಡಲೇ ಜನರಿಗೆ ತಲುಪಲು ಸಾಧ್ಯವಾಗಲಿದೆ ಎಂದು ಹೇಳಿದೆ.