ಕರ್ನಾಟಕದ ಅನ್ನಭಾಗ್ಯ ಯೋಜನೆಗೂ ನಮಹೂ ಯಾವುದೇ ಸಂಬಂಧವಿಲ್ಲ, ಯೋಜನೆ ಘೋಷಣೆ ಮಾಡುವುದಕ್ಕೂ ಮುನ್ನ ಅಲ್ಲಿನ ಸರ್ಕಾರ ನಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ. ನವದೆಹಲಿ/ಬೆಂಗಳೂರು: ಕರ್ನಾಟಕದ ಅನ್ನಭಾಗ್ಯ ಯೋಜನೆಗೂ ನಮಹೂ ಯಾವುದೇ ಸಂಬಂಧವಿಲ್ಲ, ಯೋಜನೆ ಘೋಷಣೆ ಮಾಡುವುದಕ್ಕೂ ಮುನ್ನ ಅಲ್ಲಿನ ಸರ್ಕಾರ ನಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಹೇಳಿದೆ.
ಈ ಕುರಿತು ಮಾತನಾಡಿರುವ ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸುಭೋದ್ ಕುಮಾರ್ ಸಿಂಗ್ ಅವರು, ಅನ್ನ ಭಾಗ್ಯ ಯೋಜನೆಯನ್ನು ಘೋಷಿಸುವ ಮೊದಲು ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿಲ್ಲ. ಇದು ಅಲ್ಲಿನ ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಆಹಾರ ಧಾನ್ಯವನ್ನು ಸಂಗ್ರಹಿಸಿ ವಿತರಿಸುವ ಜವಾಬ್ದಾರಿಯನ್ನು ಅವರದ್ದೇ ಹೊರತು ಕೇಂದ್ರ ಸರ್ಕಾರದ್ದಲ್ಲ ಎಂದು ಹೇಳಿದ್ದಾರೆ.
ಹೆಚ್ಚುವರಿ ಅಕ್ಕಿ ನೀಡುವಂತೆ ತಮಿಳುನಾಡು ಸರ್ಕಾರ ಕೂಡ ಭಾರತೀಯ ಆಹಾರ ನಿಗಮ (ಎಫ್‌ಸಿಐ)ಕ್ಕೆ ಮನವಿ ಮಾಡಿಕೊಂಡಿದೆ. ಆದರೆ, ನಮ್ಮಲ್ಲಿ ದಾಸ್ತಾನು ಇಲ್ಲ ಎಂದು ತಿಳಿಸಿದ್ದೇವೆ. ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಅನೇಕ ಆಹಾರ ಧಾನ್ಯ ಯೋಜನೆಗಳನ್ನು ಹೊಂದಿವೆ. ಈ ರಾಜ್ಯಗಳು ಸ್ವತಃ ಅಕ್ಕಿಯನ್ನು ಸಂಗ್ರಹಿಸುತ್ತಿವೆ, ಅದನ್ನು ಸಂಗ್ರಹಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸುತ್ತಿವೆ ಎಂದು ತಿಳಿಸಿದರು.
ಈ ರಾಜ್ಯಗಳಂತೆಯೇ ಕರ್ನಾಟಕ ಕೂಡ ಸ್ಥಳೀಯವಾಗಿ ಲಭ್ಯವಿರುವ ರಾಗಿ ಮತ್ತು ಜೋಳವನ್ನು ರಾಜ್ಯದ ದೊಡ್ಡ ವರ್ಗದ ಜನರು ಸೇವಿಸಬಹುದಾಗಿದೆ. ಆ ಧಾನ್ಯಗಳನ್ನು ವಿತರಿಸಬಹುದು ಎಂದು ಸಲಹೆ ನೀಡಿದರು.
ಇದೇ ವೇಳೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್ಎಸ್) ಅಡಿಯಲ್ಲಿ ಅಕ್ಕಿ ಮತ್ತು ಗೋಧಿ ಮಾರಾಟವನ್ನು ನಿಲ್ಲಿಸುವ ಆಹಾರ ಸಚಿವಾಲಯದ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ನಾವು ಯಾವುದೇ ರಾಜ್ಯವನ್ನು ಗುರಿಯಾಗಿಸಿಲ್ಲ. ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.