ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅನ್ನ ಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆಗೆ (ಡಿಬಿಟಿ) ಚಾಲನೆ ನೀಡಲಿದ್ದು, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಸುಮಾರು 22 ಲಕ್ಷ ಕುಟುಂಬಗಳಿಗೆ ಬ್ಯಾಂಕ್ ಖಾತೆಗಳಿಲ್ಲದ ಕಾರಣ ತಕ್ಷಣವೇ ನೆರವು ಸಿಗುವುದಿಲ್ಲ. ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಅನ್ನ ಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆಗೆ (ಡಿಬಿಟಿ) ಚಾಲನೆ ನೀಡಲಿದ್ದು, ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಸುಮಾರು 22 ಲಕ್ಷ ಕುಟುಂಬಗಳಿಗೆ ಬ್ಯಾಂಕ್ ಖಾತೆಗಳಿಲ್ಲದ ಕಾರಣ ತಕ್ಷಣವೇ ನೆರವು ಸಿಗುವುದಿಲ್ಲ.
ಕರ್ನಾಟಕವು ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ 1.28 ಕೋಟಿ ಪಡಿತರ ಚೀಟಿಯನ್ನು ಹೊಂದಿದೆ. ಇವುಗಳಲ್ಲಿ ಶೇ 99 ರಷ್ಟು ಕಾರ್ಡ್‌ಗಳು ಆಧಾರ್ ಸಂಖ್ಯೆಗಳೊಂದಿಗೆ ಸೀಡ್ ಆಗಿವೆ. ಅವುಗಳಲ್ಲಿ, 1.06 ಕೋಟಿ ಕಾರ್ಡ್‌ಗಳನ್ನು ಹೊಂದಿರುವ ಶೇ 82 ರಷ್ಟು ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಆಗಿದೆ. ಅಂತವರಿಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಉಳಿದವರಿಗೆ ಹೊಸ ಖಾತೆಗಳನ್ನು ತೆರೆಯಲು ತಿಳಿಸಲಾಗುವುದು ಎಂದು ಅಧಿಕೃತ ಹೇಳಿಕೆ ಭಾನುವಾರ ತಿಳಿಸಿದೆ.
ಒಟ್ಟು 1.27 ಕೋಟಿ ಪಡಿತರ ಚೀಟಿಗಳಲ್ಲಿ ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರಾಗಿ (ಎಚ್ಒಎಚ್) ಪರಿಗಣಿಸಲಾಗಿದೆ. ‘ಈ ಎಚ್‌ಒಎಚ್‌ಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತದೆ. ಅವರಲ್ಲಿ ಶೇ 94 ರಷ್ಟು ಮಹಿಳೆಯರು ಮತ್ತು ಶೇ 5ರಷ್ಟು ಪುರುಷರು ಇದ್ದಾರೆ’ ಎಂದು ಅದು ಹೇಳಿದೆ.
ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ಪ್ರಕಾರ, ಸಂಪೂರ್ಣ ಹಣವನ್ನು ಫಲಾನುಭವಿಗಳ ಖಾತೆಗೆ ಹದಿನೈದು ದಿನಗಳಲ್ಲಿ ವರ್ಗಾಯಿಸಲಾಗುವುದು. ಈ ಯೋಜನೆಯಡಿ ರಾಜ್ಯದಲ್ಲಿ 4.41 ಕೋಟಿ ಫಲಾನುಭವಿಗಳಿದ್ದಾರೆ ಎಂದರು.
10 ಕೆಜಿ ಅಕ್ಕಿಯಲ್ಲಿ ಐದು ಕೆಜಿ ಕೇಂದ್ರದ ಪಾಲು ಆಗಿದ್ದು, ಫಲಾನುಭವಿಗಳು ಈಗಾಗಲೇ ಪಡೆಯುತ್ತಿದ್ದಾರೆ. ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ, ಸಮರ್ಪಕವಾಗಿ ಅಕ್ಕಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಪ್ರತಿ ಫಲಾನುಭವಿಗೆ ಐದು ಕೆಜಿ ಹೆಚ್ಚುವರಿ ಅಕ್ಕಿ ಬದಲಿಗೆ ಕೆಜಿಗೆ 34 ರೂ. ನಂತೆ ನಗದು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.