Home ಕರ್ನಾಟಕ ಅಮಿತ್ ಶಾ ಕುರಿತು ಹೇಳಿಕೆ | ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು :...

ಅಮಿತ್ ಶಾ ಕುರಿತು ಹೇಳಿಕೆ | ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು : ಆರ್.ಅಶೋಕ್‌

17
0

ಬೆಂಗಳೂರು: ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ನೀಡಿದ ಹೇಳಿಕೆ ವಿರುದ್ಧ ಬಿಜೆಪಿ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಯತೀಂದ್ರ ಹೀಗೆಯೇ ಮಾತನಾಡುತ್ತಿದ್ದರೆ ರಾಹುಲ್ ಗಾಂಧಿಯಂತೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರ ಪುತ್ರ ಎನ್ನುವ ಕಾರಣಕ್ಕೆ ಹಾಗೂ ರಾಷ್ಟ್ರ ನಾಯಕರ ಬಗ್ಗೆ ಮಾತನಾಡಿದರೆ ದೊಡ್ಡ ವ್ಯಕ್ತಿಯಾಗುತ್ತೇನೆ, ಇದರಿಂದ ಬೆಲೆ ಬರುತ್ತದೆ ಎನ್ನುವ ಕಾರಣಕ್ಕೆ ಯತೀಂದ್ರ ಅಮಿತ್ ಶಾ ಕುರಿತು ಟೀಕೆ ಮಾಡಿದ್ದಾರೆ. ಹತಾಶ ಮನೋಭಾವ, ಬುದ್ಧಿಭ್ರಮಣೆ ಹಾಗೂ ಅಪ್ರಬುದ್ಧತೆಯಿಂದ ಅವರು ಮಾತನಾಡಿದ್ದಾರೆ. ಅವರ ಪ್ರಜ್ಞೆಯ ಮಟ್ಟ ಕಡಿಮೆ ಇದೆ ಎಂದು ಟೀಕಿಸಿದರು.

‘ಮೈಸೂರಿನ ರಾಜಕಾರಣದ ಬಗ್ಗೆ ಮಾತನಾಡಲು ಯತೀಂದ್ರಗೆ ಯೋಗ್ಯತೆ ಇಲ್ಲ. ಅಲ್ಲಿನ ರಾಜಕಾರಣ ಬಿಟ್ಟು ಕೇಂದ್ರದ ರಾಜಕಾರಣದ ಬಗ್ಗೆ ಅವರು ಮಾತನಾಡಿದ್ದಾರೆ. ಇಂತಹ ಬಾಲಿಶ ಹೇಳಿಕೆ ನೀಡುವುದು ಕಾಂಗ್ರೆಸ್ಸಿನ ಡಿಎನ್‍ಎನಲ್ಲೇ ಇದೆ. ಈಗಾಗಲೇ ರಾಹುಲ್ ಗಾಂಧಿ ಬಾಲಿಶ ಹೇಳಿಕೆ ನೀಡಿ ಜೈಲಿಗೆ ಹೋಗುವ ಸ್ಥಿತಿ ಬಂದಿದೆ. ಯತೀಂದ್ರ ಹೀಗೆ ಮಾತನಾಡುತ್ತಿದ್ದರೆ ಕೊನೆಗೆ ಜೈಲೇ ಗತಿಯಾಗಲಿದೆ. ಅವರು ಎಚ್ಚರದಿಂದ ಮಾತನಾಡಲಿ ಎಂದು ಅವರು ಸಲಹೆ ನೀಡಿದರು.

ಗೂಂಡಾ ಗುರು: ಯತೀಂದ್ರಗೆ ತಮ್ಮ ತಂದೆಯ ಗೂಂಡಾಗಿರಿ ಮಾತ್ರ ಕಣ್ಣಿಗೆ ಕಾಣುವುದಿಲ್ಲ. ರಾಜ್ಯದಲ್ಲೀಗ ಅಪ್ಪ-ಮಕ್ಕಳ ಗೂಂಡಾಗಿರಿ ಜಾರಿಯಲ್ಲಿದೆ. ಸದನದಲ್ಲಿ ಪೊಲೀಸರನ್ನು ಬೆದರಿಸುವುದು, ಸ್ಪೀಕರ್ ಗೆ ಧಮ್ಕಿ ಹಾಕುವುದು. ಕಾರ್ಯಕರ್ತರ ಕಪಾಳಕ್ಕೆ ಹೊಡೆಯುವುದು-ಹೀಗೆ ಸಿಎಂ ಸಿದ್ದರಾಮಯ್ಯ ಮಾಡಿದ ರೌಡಿಸಂಗೆ ಲೆಕ್ಕವೇ ಇಲ್ಲ ಎಂದು ಟೀಕಿಸಿದರು.

‘ಬಿಜೆಪಿ-ಜೆಡಿಎಸ್ ಹಾಲು ಜೇನಿನಂತೆ ಕೆಲಸ ಮಾಡುತ್ತಿದೆ. ಇನ್ನಷ್ಟು ಚೆನ್ನಾಗಿ ಕಾರ್ಯನಿರ್ವಹಿಸಲು ಸಮನ್ವಯ ಸಭೆಗಳನ್ನು ನಡೆಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಭೆ ನಡೆಸಲಾಗುವುದು. ರೈತರಿಗೆ ಪರಿಹಾರ ಕೊಡದ, ಕುಡಿಯುವ ನೀರು ಕೊಡದ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಿದೆ. ಇಂತಹ ಸರಕಾರಕ್ಕೆ ಲೋಕಸಭೆ ಚುನಾವಣೆಯಲ್ಲಿ ಜನರು ಬುದ್ಧಿ ಕಲಿಸಬೇಕು’ ಎಂಧು ಹೇಳಿದರು.

LEAVE A REPLY

Please enter your comment!
Please enter your name here