Home Uncategorized ಅರವಿಂದ್ ಕೇಜ್ರಿವಾಲ್ ಬಂಧನಕ್ಕೊಳಗಾದರೂ ಅಚ್ಚರಿಯಿಲ್ಲ: ಶರದ್ ಪವಾರ್

ಅರವಿಂದ್ ಕೇಜ್ರಿವಾಲ್ ಬಂಧನಕ್ಕೊಳಗಾದರೂ ಅಚ್ಚರಿಯಿಲ್ಲ: ಶರದ್ ಪವಾರ್

28
0

ಶಿರಡಿ: ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಪಡೆದಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಎನ್‌ಸಿಪಿ ವರಿಷ್ಠ ಶರದ್ ಪವಾರ್, ಕೇಂದ್ರ ಸರ್ಕಾರವು ತನ್ನದೇ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿಲ್ಲದವರ ಎದೆಗುಂದಿಸಲು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎನ್‌ಸಿಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್, ಕೇಂದ್ರ ತನಿಖಾ ಸಂಸ್ಥೆಯು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರಿಗೂ ಸಮನ್ಸ್ ಜಾರಿಗೊಳಿಸಿದ್ದು, ಅವರೂ ಬಂಧನಕ್ಕೀಡಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ 10 ವರ್ಷಗಳಿಂದ ಜನರು ಅರವಿಂದ್ ಕೇಜ್ರಿವಾಲ್ ಅವರಿಗೆ ಮತ ನೀಡಿದ್ದು, ಅವರ ಆಮ್ ಆದ್ಮಿ ಪಕ್ಷದ ಸಚಿವರನ್ನು ಜೈಲಿಗೆ ದೂಡಲಾಗಿದೆ ಹಾಗೂ ಅವರನ್ನೂ ಬಂಧಿಸುವ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದರು.

“ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿದೆ. ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಯು ಸರಳ ಹಾಗೂ ನಿಷ್ಕಳಂಕ ವ್ಯಕ್ತಿತ್ವದ ವ್ಯಕ್ತಿ ಎಂಬುದು ಎಲ್ಲ ದಿಲ್ಲಿ ನಾಗರಿಕರಿಗೂ ತಿಳಿದಿದೆ. ಒಂದೊಮ್ಮೆ ಅವರ ಬಂಧನವಾದರೂ ಅಚ್ಚರಿ ಇಲ್ಲ” ಎಂದು ಪವಾರ್ ಪ್ರತಿಪಾದಿಸಿದ್ದಾರೆ.

ಇದರರ್ಥ ತಮ್ಮ ರಾಜಕೀಯ ದೃಷ್ಟಿಕೋನಕ್ಕಿಂತ ಭಿನ್ನ ದೃಷ್ಟಿಕೋನ ಹೊಂದಿರುವವರನ್ನು ಅಧಿಕಾರ ದುರ್ಬಳಕೆ ಮಾಡಿಕೊಂಡು ಎದೆಗುಂದಿಸುವುದಾಗಿದೆ ಎಂದು ಅವರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here