ಬೆಂಗಳೂರು : ‘ಬಸ್ ನಿಲ್ದಾಣಗಳಲ್ಲಿನ ವ್ಯಾಪಾರ ಮಳಿಗೆಗಳು ಮತ್ತು ಆಹಾರ ಉದ್ದಿಮೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ, ನೈರ್ಮಲ್ಯದ ಕೊರತೆ ಕಾಪಾಡುವ ಸಂಬಂಧ ಲೋಪಗಳನ್ನು ಸರಿಪಡಿಸಿಕೊಳ್ಳದಿದ್ದರೆ ನಿಯಾಮಾನುಸಾರ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಮಳಿಗೆಗಳ ಮಾಲಕರಿಗೆ ಎಚ್ಚರಿಕೆ ನೀಡಲಾಗಿದೆ.
ಬುಧವಾರ ಈ ಸಂಬಂಧ ಸಿಎಂ ಕಚೇರಿ ಪ್ರಕಟಣೆ ನೀಡಿದ್ದು, ಬಸ್ ನಿಲ್ದಾಣಗಳಲ್ಲಿನ ಮಳಿಗೆಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಭಿತ್ತರವಾದ ವರದಿಗಳನ್ನು ಆಧರಿಸಿ ಸಿಎಂ ಕಚೇರಿಯ ಸಾರ್ವಜನಿಕ ಕುಂದು-ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಲಾಗಿದೆ.
ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಉದ್ದಿಮೆಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡಲು ವಿಶೇಷ ಅಭಿಯಾನ ಕೈಗೊಳ್ಳಲಾಗಿದೆ. ಅದರಂತೆ ರಾಜ್ಯಾದ್ಯಂತ 201 ಜಿಲ್ಲಾ-ತಾಲೂಕು ಕೇಂದ್ರಗಳ ಕಚೇರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಇರುವ 748 ವ್ಯಾಪಾರ ಮಳಿಗೆಗಳನ್ನು ಪರಿಶೀಲಿಸಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011 ಅನ್ನು ಪಾಲಿಸುವಂತೆ ಅರಿವು ಮೂಡಿಸಲಾಗಿದೆ ಎಂದು ತಿಳಿಸಿದೆ.