ಉದ್ಯೋಗ, ಭ್ರಷ್ಟಾಚಾರ ಮುಕ್ತ ಹಾಗೂ ಜನರ ಜ್ವಲಂತ ಸಮಸ್ಯೆ ನಿವಾರಣೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗುವುದು ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹೇಳಿದರು. ಬೆಂಗಳೂರು: ಉದ್ಯೋಗ, ಭ್ರಷ್ಟಾಚಾರ ಮುಕ್ತ ಹಾಗೂ ಜನರ ಜ್ವಲಂತ ಸಮಸ್ಯೆ ನಿವಾರಣೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗುವುದು ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಣಾಳಿಕೆ ತಯಾರಿಗೆ ನಾಲ್ಕು ತಿಂಗಳ ಹಿಂದೆ ನಮಗೆ ಜವಾಬ್ದಾರಿ ಕೊಡಲಾಗಿತ್ತು. ಜನಪರವಾದ ಪ್ರಣಾಳಿಕೆ ತಯಾರಿಸಲು ಲಕ್ಷಾಂತರ ಜನರ ಜೊತೆ ಚರ್ಚೆ ಮಾಡಿದ್ದೇವೆ. ನೌಕರರ ವರ್ಗದ ಜೊತೆ ಚರ್ಚೆ ಮಾಡಿದ್ದೇವೆ. ಎಫ್ ಕೆ ಸಿಸಿ ಅವರ ಜೊತೆ ಸುಧೀರ್ಘವಾಗಿ ಚರ್ಚೆ ಮಾಡಿದ್ದೇವೆ ಅಷ್ಟೇ ಅಲ್ಲದೆ, ಜಿಲ್ಲಾವಾರು ಅಧಿಕಾರಿಗಳ ಕರೆದು ಚರ್ಚೆ ಮಾಡಿದ್ದೇವೆ ಎಂದರು.
ಜನರ ಜ್ವಲಂತ ಸಮಸ್ಯೆಗಳ ಜೊತೆಗೆ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು, ಸೇರಿದಂತೆ ಹಲವು ವಿಷಯಗಳ ಸಂಬಂಧ ಜನರ ಅಭಿಪ್ರಾಯ ಹಾಗೂ ಸಲಹೆ ಪಡೆದಿದ್ದೇವೆ ಎಂದರು.
ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿದ್ದೇವೆ. ರೈತನಿಗೆ ವಿದ್ಯುತ್ ಪೂರೈಕೆ ಇದುವರೆಗೆ ಸಾಧ್ಯವಾಗಿಲ್ಲ. ಉಚಿತ ವಿದ್ಯುತ್ ಪೂರೈಕೆ ಗೆ ಬೇಕಾದ ಕೆಲಸಗಳನ್ನು ಮಾಡುತ್ತೇವೆ. ಹಿಂದುಳಿದ ದಲಿತ ಅಲ್ಪಸಂಖ್ಯಾತ ಸಮುದಾಯಗಳಿಗೆ ನಿರ್ದಿಷ್ಟ ಕಾರ್ಯಕ್ರಮ ನೀಡಬೇಕು.
ಇದನ್ನೂ ಓದಿ: ಕೆಎಂಎಫ್-ಅಮುಲ್ ವಿವಾದ ಜೀವಂತವಾಗಿರಿಸಿ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ಮುಂದು!
ಟೂರಿಸಂನಲ್ಲಿ ನಾವು ಬಹಳ ಹಿಂದೆ ಉಳಿದಿದ್ದೇವೆ. ಪಕ್ಕದ ಕೇರಳದಲ್ಲಿ ಕೋಟ್ಯಾಂತರ ರೂ. ಟೂರಿಸಂನಿಂದಲೇ ಬರುತ್ತದೆ. ಟೂರಿಸಂ ಅಭಿವೃದ್ಧಿ ಕೂಡ ಗಣನೆಗೆ ತೆಗೆದುಕೊಂಡಿದ್ದೇವೆ ಎಂದರು. ನಾವು ಕೇರಳದ ಮಾದರಿಯಲ್ಲಿ ರಾಜ್ಯದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಅನ್ವೇಷಿಸಬೇಕಾಗಿದೆ. ಉದ್ಯೋಗವಿಲ್ಲದೆ ಬೀದಿ ಪಾಲಾಗಿರುವ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೂ ಗಮನ ಹರಿಸಲಾಗಿದೆ’ ಎಂದರು.
ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಪ್ರತೀಕ, ಆದರೆ ದೇವಸ್ಥಾನ ನಿರ್ವಹಣೆ ಮಾಡುವುದಕ್ಕೆ ಯೋಜನೆಗಳ ಅವಶ್ಯಕತೆ ಇದೆ. ಧಾರ್ಮಿಕ ಸಾಮರಸ್ಯ ಇಡೀ ರಾಜ್ಯದಲ್ಲಿ ಅತ್ಯಗತ್ಯವಿದೆ ಎಂದು ಹೇಳಿದರು.