ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರನ್ನು ಟ್ರಾಫಿಕ್ ಕಾನ್ಸ್‌ಸ್ಟೇಬಲ್ ರಕ್ಷಣೆ ಮಾಡಿದ್ದು, ಪೇದೆಯ ಈ ಕಾರ್ಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಬೆಳಗಾವಿ: ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರನ್ನು ಟ್ರಾಫಿಕ್ ಕಾನ್ಸ್‌ಸ್ಟೇಬಲ್ ರಕ್ಷಣೆ ಮಾಡಿದ್ದು, ಪೇದೆಯ ಈ ಕಾರ್ಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.
ಜೀವನದಲ್ಲಿ ಜಿಗುಪ್ಸೆ ಹೊಂದಿದ್ದ 42 ವರ್ಷದ ಮಹಿಳೆ ಶಿವಲೀಲಾ ಅವರು, ಶನಿವಾರ ಸಂಜೆ ಬೆಳಗಾವಿಯ ಕೋಟೆ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮಹಿಳೆ ಕೆರೆಗೆ ಹಾರುತ್ತಿದ್ದುದನ್ನು ಕಂಡ ಕೆಲವರು ಸಹಾಯಕ್ಕಾಗಿ ಕೂಗಿಕೊಂಡಿದ್ದರು.
ಈ ವೇಳೆ ಕೋಟೆ ಕೆರೆ ಬಳಿಯ ಅಶೋಕ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಕಾಶಿನಾಥ ಇರಗಾರ ಅವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರು. ನಂತರ ಸ್ವಲ್ಪವೂ ಯೋಚಿಸದೆ ಕೆರೆಗೆ ಹಾರಿ ಮಹಿಳೆ ಕೆರೆಯಲ್ಲಿ ಮುಳುಗುವ ಮುನ್ನವೇ ರಕ್ಷಣೆ ಮಾಡಿ ಕೆರೆಯಿಂದ ಹೊರ ತಂದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಯನ್ನು ರಕ್ಷಿಸಿದ ಟ್ರಾಫಿಕ್ ಪೊಲೀಸ್ ಕಾಶಿನಾಥ್ ಅವರ ಸಮಯೋಚಿತ ಕ್ರಮಕ್ಕೆ ಜನರು ಮತ್ತು ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.