ಮಾನಸಿಕ ಆರೋಗ್ಯವನ್ನು ಒಂದು ರೀತಿಯ ಕಳಂಕ ಎಂಬಂತೆ ನೋಡುವುದರಿಂದ ಸಮಾಜ ಮುಂದೆ ಬಂದಿದ್ದು, ಇಂದಿನ ಯುವಕರು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಚಿಕಿತ್ಸೆ, ನೆರವನ್ನು ಆರಂಭಿಕ ಹಂತಗಳಲ್ಲೇ ಪಡೆಯಲು ಮುಂದಾಗುತ್ತಿದ್ದಾರೆ. ಮಾನಸಿಕ ಆರೋಗ್ಯವನ್ನು ಒಂದು ರೀತಿಯ ಕಳಂಕ ಎಂಬಂತೆ ನೋಡುವುದರಿಂದ ಸಮಾಜ ಮುಂದೆ ಬಂದಿದ್ದು, ಇಂದಿನ ಯುವಕರು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಚಿಕಿತ್ಸೆ, ನೆರವನ್ನು ಆರಂಭಿಕ ಹಂತಗಳಲ್ಲೇ ಪಡೆಯಲು ಮುಂದಾಗುತ್ತಿದ್ದಾರೆ.
ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವುದೇ ಒಂದು ರೀತಿಯ ಅಪಖ್ಯಾತಿ ಎಂಬ ಮನೋಭಾವನೆ ಇದ್ದಾಗ ಅದನ್ನು ಸಾರ್ವಜನಿಕ ಸಂವಹನದಲ್ಲಿ ಹಾಗೂ ಕೌಟುಂಬಿಕ ಸಂವಹನಗಳಲ್ಲಿ ಪ್ರಸ್ತಾಪಿಸಲಾಗುತ್ತಿರುವ ಮಟ್ಟಿಗೆ ಅರಿವು ಮೂಡಿರುವುದರ ಹಿಂದೆ ಸೆಲಬ್ರಿಟಿಗಳ ಪಾತ್ರವೂ ಮಹತ್ವದ್ದಾಗಿದೆ ಎನ್ನುತ್ತಾರೆ ನಿಮ್ಹಾನ್ಸ್ ನ, ಬಿಹೇವಿಯರಲ್ ಸೈನ್ಸ್ ವಿಭಾಗದ ಡೀನ್ ಮನೋವೈದ್ಯಶಾಸ್ತ್ರದ ಪ್ರೊ.ಪ್ರಭಾ ಎಸ್ ಚಂದ್ರ.
ಪ್ರೊ.ಪ್ರಭಾ ಎಸ್ ಚಂದ್ರ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದು ಅದರ ಸಾರಾಂಶ ಹೀಗಿದೆ.
ಮಾನಸಿಕ ಆರೋಗ್ಯವನ್ನು ಅರ್ಥಮಾಡಿಕೊಳ್ಳುವ ಮಟ್ಟ ಈಗ ಹೇಗಿದೆ?
ಯಾವುದೇ ವ್ಯಕ್ತಿ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದರೆ ಅದನ್ನು ಅಥವಾ ಅಂತಹ ವ್ಯಕ್ತಿಯನ್ನು ಜನ ಹುಚ್ಚು ಎಂದು ಹೇಳುವಂತಹ ಪರಿಸ್ಥಿತಿ ಇಲ್ಲ. ಮಾನಸಿಕ ಸಮಸ್ಯೆಗಳಿವೆ ಎಂಬುದನ್ನು ಕನಿಷ್ಟ, ಭಾರತದ ನಗರ ಪ್ರದೇಶಗಳಲ್ಲಿ ಒಂದಷ್ಟು ಮಟ್ಟಕ್ಕೆ ಸಮಾಜ ಒಪ್ಪಿಕೊಳ್ಳುವ ಹಂತಕ್ಕೆ ಬಂದಿದೆ.
ಮಾನಸಿಕ ಆರೋಗ್ಯದ ಬಗ್ಗೆ ಸಾಮಾನ್ಯವಾದ ಅರಿವಿನ ಮಟ್ಟ, ಪ್ರಮುಖವಾಗಿ ಕೋವಿಡ್ ಪ್ಯಾಂಡಮಿಕ್ ಬಳಿಕ ಹೆಚ್ಚಾಗಿದೆ. ಯುವಜನತೆ ಹೆಚ್ಚು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಹೊಂದಿದ್ದು, ನೆರವು ಪಡೆಯಲು ಮುಂದಾಗುತ್ತಿದ್ದಾರೆ.
ಯುವಜನತೆ ನೆರವು ಪಡೆಯುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳು ಯಾವುದು?
ಮಾನಸಿಕ ಆರೋಗ್ಯದ ಸಮಸ್ಯೆಗಳ ವ್ಯಾಪ್ತಿ ದೊಡ್ಡದಿದೆ. ಯುವಕರು ಆತಂಕ, ಚಿಂತೆಯಂತಹ ವಿಷಯಗಳಿಗೆ ಹೆಚ್ಚು ನೆರವು ಪಡೆಯುತ್ತಿದ್ದಾರೆ. ಇಂದಿನ ಯುವಜನತೆಗೆ ಅವರ ಭವಿಷ್ಯದ್ದೇ ಆತಂಕವಾಗಿದೆ. ಅದು ಶಿಕ್ಷಣದಿಂದ ಹಿಡಿದು ಕೆಲಸ ಮಾಡುವ ಕ್ಷೇತ್ರ, ಪರಸ್ಪರ ಸಂಬಂಧಗಳು, ದುಃಖವನ್ನು ನಿಭಾಯಿಸುವಲ್ಲಿನ ಒತ್ತಡದ ವರೆಗೂ ಹರಡಿಕೊಂಡಿದೆ. ಪ್ಯಾಂಡಮಿಕ್ ವೇಳೆ ಹಲವರು ತಮ್ಮ ನೆಚ್ಚಿನವರನ್ನು ಕಳೆದುಕೊಂಡರು ಆ ನೋವಿನಿಂದ ಹೊರಬರಲು ಅವರಿಗೆ ಸಾಧ್ಯವಾಗಿಲ್ಲ. ಇನ್ನೂ ಕೆಲವರಿಗೆ ಅವರ ನೆಚ್ಚಿನವರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಮತ್ತೂ ಕೆಲವರಿಗೆ ದೈನಂದಿನ ಚಟುವಟಿಕೆಗಳು ಸಾಧ್ಯವಾಗದೇ ಮಾನಸಿಕ ಆರೋಗ್ಯವನ್ನು ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ಮಕ್ಕಳಿಗೆ ಮಾನಸಿಕ ಆರೋಗ್ಯ ಮಹತ್ವ ತಿಳಿಸಲು ‘ಮನೋಸ್ಥೈರ್ಯ’ ಕಾರ್ಯಕ್ರಮ ಆರಂಭ!
ಹಿಂದೆಲ್ಲಾ ಪೋಷಕರು ತಮ್ಮ ಮಕ್ಕಳನ್ನು ಬೇರೆಯ ಮಕ್ಕಳೊಂದಿಗೆ ಹೋಲಿಸುವುದು ಇತ್ತು. ಈಗ ಇಂದಿನ ಯುವಜನತೆ ಜಾಗತಿಕ ಮಟ್ಟದಲ್ಲಿ ಜನರ ಕಾರ್ಯಕ್ಷಮತೆಯೊಂದಿಗೆ ಅವರನ್ನು ಹೋಲಿಸಿಕೊಳ್ಳುತ್ತಿದ್ದು ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಇದರ ಜೊತೆ ಜೊತೆಗೇ ಹಲವು ಸಂಗತಿಗಳಲ್ಲಿ ಒಮ್ಮೆಲೇ ಉತ್ಕೃಷ್ಟರಾಗಲು ಯತ್ನಿಸುತ್ತಿದ್ದಾರೆ. ಇದು ಸಾಧ್ಯವಾಗದ್ದು ಹಾಗೂ ಇದರಿಂದಾಗಿ ಒತ್ತಡ ಮತ್ತು ಕೀಳರಿಮೆ ಭಾವನೆಗಳು, ಖಿನ್ನತೆಗಳು ಉಂಟಾಗುವ ಸಾಧ್ಯತೆಗಳಿವೆ.
ಸಾಮಾಜಿಕ ಜಾಲತಾಣ ಹಾಗೂ ಇಂಟರ್ನೆಟ್ ವ್ಯಸನ ಹೆಚ್ಚಾಗಿದೆಯೇ? ಹಾಗಿದ್ದರೆ ಅದಕ್ಕೆ ಕಾರಣವೇನು?
ಹೌದು ಅಂತಹ ವ್ಯಸನ ಹೆಚ್ಚಾಗಿದೆ. ಇದಕ್ಕೆ ಕಾರಣ ಅಗತ್ಯಕ್ಕಿಂತ ಹೆಚ್ಚಾಗಿ ಅತಿಯಾದ ತಂತ್ರಜ್ಞಾನದ ಬಳಕೆ. ಇದರಿಂದ ಹೊರಬರುವುದಕ್ಕೂ ಯುವಜನತೆ ನೆರವು ಪಡೆಯುತ್ತಿದ್ದಾರೆ. ತಂತ್ರಜ್ಞಾನದ ಆರೋಗ್ಯಕರ ಬಳಕೆಗಾಗಿ ವ್ಯಸನದಿಂದ ಮುಕ್ತರಾಗಲು ನಿಮ್ಹಾನ್ಸ್ ನ ತಂತ್ರಜ್ಞಾನದ ಆರೋಗ್ಯಕರ ಬಳಕೆಗಾಗಿ ಸೇವೆಗಳು (ಎಸ್ ಹೆಚ್ ಯು ಟಿ) ಕ್ಲಿನಿಕ್ ಗಳಿಗೆ ಬರುವವರ ಮಂದಿಯ ಪೈಕಿ ಸರಾಸರಿ 14-25 ವಯಸ್ಸಿನವರಿದ್ದಾರೆ. ಪ್ಯಾಂಡಮಿಕ್ ಅವಧಿಯಲ್ಲಿ ಗೇಮಿಂಗ್, ಸಾಮಾಜಿಕ ಬಂಧಗಳು, ಕ್ರೀಡೆ, ಥಿಯೇಟರ್, ಸಾಹಿತ್ಯವೇ ಮೊದಲಾಗಿ ಜನತೆಗೆ ಒತ್ತಡ ಕಡಿಮೆ ಮಾಡಲು ಇದ್ದ ಹಲವು ಮಾರ್ಗಗಳು ಮುಚ್ಚಿದ್ದರ ಪರಿಣಾಮ ಮೊಬೈಲ್ ವ್ಯಸನ ಹೆಚ್ಚಾಗಿತ್ತು. ಜನತೆ ಸಾಮಾಜಿಕ ಬಂಧಗಳನ್ನು ಅಥವಾ ಪರಸ್ಪರ ಸಂಬಂಧಗಳ ಸಮಸ್ಯೆಗಳನ್ನು ಎದುರಿಸಿದಾಗ ಅಂತಾರ್ಜಾಲದ ಅತಿಯಾದ ಬಳಕೆಯಿಂದ ಸಮಾಧಾನ ಸಿಗುತ್ತದೆ. ಆದರೆ ಅದರ ಬಳಕೆಯನ್ನು ನಿಯಂತ್ರಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ಫೋನ್ ವ್ಯಸನ ನಿಮ್ಮ ಕೆಲಸ, ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿದ್ದರೆ, ಅದೆ ಕಾರಣಕ್ಕಾಗಿ ನಿದ್ದೆ ಹಾಳಾಗುತ್ತಿದ್ದರೆ, ಅಂತರ್ಜಾಲ ಬಳಕೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದರೆ ಅಂತಹ ಸಮಯದಲ್ಲಿ ನೀವು ನೆರವು ಪಡೆಯುವುದು ಸೂಕ್ತ. ಜನರು ಬಳಕೆ, ಅತಿಯಾದ ಬಳಕೆ ಹಾಗೂ ವ್ಯಸನದ ನಡುವೆ ಸ್ಪಷ್ಟ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಿದೆ.
ಇದನ್ನೂ ಓದಿ: ಹೇಗಿದೆ ನಿಮ್ಮ ಮಾನಸಿಕ ಆರೋಗ್ಯ? ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ವಯೋವೃದ್ಧರು ಎದುರಿಸುತ್ತಿರುವ ಸಮಸ್ಯೆಗಳೇನು?
ಭಾರತದಲ್ಲಿ ವಯೋವೃದ್ಧರು ಎದುರಿಸುತ್ತಿರುವ ಅತಿ ದೊಡ್ಡ ಮಾನಸಿಕ ಆರೋಗ್ಯ ಸಮಸ್ಯೆ ಎಂದರೆ ಅದು ಏಕಾಂಗಿತನ.
ಬ್ರಿಟನ್, ಜಪಾನ್ ನಂತಹ ರಾಷ್ಟ್ರಗಳಲ್ಲಿ ಏಕಾಂಗಿತನದ ವಿಷಯವನ್ನು ನಿಭಾಯಿಸುವುದಕ್ಕಾಗಿಯೇ ಪ್ರತ್ಯೇಕ ಸಚಿವರನ್ನು ನೇಮಕ ಮಾಡಲಾಗಿದೆ. ಭಾರತದಲ್ಲಿ ನಾವು ಇಂದಿಗೂ ಹಲವಾರು ಅರ್ಥಪೂರ್ಣ ಸಂಬಂಧಗಳನ್ನು ಹೊಂದಿರುವ ವೃದ್ಧರನ್ನು ನೋಡಬಹುದಾಗಿದೆ. ಈಗ ಅವರು ತಮ್ಮಷ್ಟಕ್ಕೆ ತಾವೇ ಬದುಕುತ್ತಿದ್ದಾರೆ. ಇಂತಹ ವಯೋವೃದ್ಧರು ಯುವಕರಂತೆ ನೇರವಾಗಿ ಯಾವುದೇ ಮಾನಸಿಕ ಆರೋಗ್ಯ ನೆರವು ಪಡೆಯಲು ಸಾಧ್ಯವಿಲ್ಲ. ಅವರಿಗೆ ಈ ಖಿನ್ನತೆ (depression), ಚಿಂತೆ (anxiety) ಎಂಬಂತಹ ಮಾನಸಿಕ ಆರೋಗ್ಯ ಸಮಸ್ಯೆಗಳ ಶಬ್ದಗಳ ಅರಿವೂ ಇರುವುದಿಲ್ಲ. ಅವರು ಕೇವಲ ತಮಗೆ ದಣಿವಾಗುತ್ತಿದೆ ಮತ್ತು ನಿದ್ದೆಯಿಲ್ಲ ಎಂದಷ್ಟೇ ಹೇಳುತ್ತಾರೆ. ಆದರೆ ಖಿನ್ನತೆ ಕಾಡುತ್ತಿದೆ ಎಂದು ಹೇಳುವುದಿಲ್ಲ. ಇನ್ನು ವಯೋವೃದ್ಧರನ್ನು ನಿಂದಿಸುವುದೂ ಹೆಚ್ಚಾಗತೊಡಗಿದೆ. ಈಗಿನ ನಗರ ಪ್ರದೇಶಗಳಲ್ಲಿ ವಯೋವೃದ್ಧರಿಗೆ ಆರಾಮಾಗಿ ನಡೆದಾಡುವ, ಜನರನ್ನು ಭೇಟಿ ಮಾಡುವ ವಾತಾವರಣವೂ ಇಲ್ಲ. ಅದು ಅವರನ್ನು ಇನ್ನಷ್ಟು ಏಕಾಂಗಿತನಕ್ಕೆ ದೂಡುತ್ತಿದೆ.
ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ, ಜನ ಏಕಾಗಿ ಜೀವನ ಮುಕ್ತಾಯಗೊಳಿಸಲು ನಿರ್ಧರಿಸುತ್ತಾರೆ?
ಭಾರತದಲ್ಲಿ ಆತ್ಮಹತ್ಯೆ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ ಅದೂ ಪ್ರಮುಖವಾಗಿ 15-29 ವಯಸ್ಸಿನವರಲ್ಲಿ. ಸರ್ಕಾರ ಈ ಸಮಸ್ಯೆಯ ಬಗ್ಗೆ ತುರ್ತಾಗಿ ಗಮನ ಕೊಡಬೇಕಿದೆ. ಇತ್ತೀಚೆಗೆ ಸರ್ಕಾರ ಈ ನೀಟಿನಲ್ಲಿ ರಾಷ್ಟ್ರೀಯ ಆತ್ಮಹತ್ಯೆ ನಿಯಂತ್ರಣ ನೀತಿಯನ್ನೂ ಪ್ರಕಟಿಸಿತ್ತು. ಅನ್ಯ ದೇಶಗಳಂತೆ ಭಾರತದಲ್ಲಿ ಆತ್ಮಹತ್ಯೆಗೆ ಮಾನಸಿಕ ಆರೋಗ್ಯದ ಸಮಸ್ಯೆ ಒಂದೇ ಕಾರಣವಲ್ಲ. ಇಲ್ಲಿ ಆತ್ಮಹತ್ಯೆಗೆ ಹೆಚ್ಚಾಗಿ ಸಾಮಾಜಿಕ-ಸಾಂಸ್ಕೃತಿಕ ಕಾರಣಗಳೂ ಇವೆ. ಭಾರತದಲ್ಲಿ ಯುವಕರ ಆತ್ಮಹತ್ಯೆಗೆ ಶೈಕ್ಷಣಿಕ ವೈಫಲ್ಯವೂ ಹೆಚ್ಚು ಕಾರಣವಾಗುತ್ತಿದೆ. ಇದರಿಂದ ಯುವಜನತೆಯನ್ನು ಹೊರತರಲು ಅಂಕಗಳಿಗೆಯ ಒತ್ತಡದ ಹೊರತಾಗಿ, ಪರ್ಯಾಯ ಕೌಶಲ್ಯ ವೃದ್ಧಿ ಮೂಲಕ ಆ ಮಗುವಿನಲ್ಲಿನ ಸಂಪೂರ್ಣ ಸಾಮರ್ಥ್ಯ ಹೊರತರುವ ಕೆಲಸ ಮಾಡಬೇಕಿದೆ. ಇದಷ್ಟೇ ಅಲ್ಲದೇ ಕೌಟುಂಬಿಕ ಸಮಸ್ಯೆಗಳೂ ಇದ್ದು ಆತ್ಮಹತ್ಯೆಗಳಿಗೆ ವಿಭಿನ್ನ ಸಮಸ್ಯೆಗಳೂ ಕಾರಣವಾಗುತ್ತವೆ. ಆದರೆ ನಾವು ಇದನ್ನು ಹಲವು ಬಾರಿ ನಿರ್ಲಕ್ಷ್ಯಿಸುತ್ತೇವೆ, ಆತ್ಮಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ.
ಆತ್ಮಹತ್ಯೆಯನ್ನು ಹೇಗೆ ತಡೆಗಟ್ಟಬಹುದು?
ಆತ್ಮಹತ್ಯೆಗೆ ಕಾರಣವಾಗುವ ಅಂಶಗಳ ಬಗ್ಗೆ ಗಮನ ಹರಿಸಬೇಕಿದೆ. ಹೆಲ್ಪ್ ಲೈನ್ ಹಾಗೂ ಗೇಟ್ ಕೀಪರ್ ತರಬೇತಿಗಳು ಇಂತಹ ಪ್ರಕರಣಗಳ ತಡೆಗೆ ಸಹಾಯವಾಗಬಲ್ಲವು.
ಕಚೇರಿಗಳಲ್ಲಿ, ಶಾಲೆಗಳಲ್ಲಿ, ಕಾಲೇಜು, ಹಾಸ್ಟೆಲ್, ಪೊಲೀಸ್, ಸೇನೆ ಹೀಗೆ ಎಲ್ಲೇ ನೀವು ಗೇಟ್ ಕೀಪರ್ ಗಳನ್ನು ತಯಾರು ಮಾಡಿದರೆ, ಅವರು ಆತ್ಮಹತ್ಯೆಯಂತಹ ಯೋಚನೆಯನ್ನು ಹೊಂದಿರುವ, ಸಮಸ್ಯೆಗೆ ಸಿಲುಕಿರುವ ವ್ಯಕ್ತಿ ಹಾಗೂ ಮಾನಸಿಕ ಆರೋಗ್ಯ ಸಿಬ್ಬಂದಿಗಳ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಾರೆ. ಯಾರಾದರೂ ಸಮಸ್ಯೆಗೆ ಸಿಲುಕಿದವರನ್ನು ಕಂಡರೆ, ಅಂತಹ ವ್ಯಕ್ತಿಗಳಿಗೆ ಗೇಟ್ ಕೀಪರ್ ಗಳು ಸಹಾಯ ಮಾಡಬಲ್ಲರು.