ಗ್ವಾಲಿಯರ್: ತನ್ನ ಬ್ಯಾಂಕ್ ಖಾತೆಯಿಂದ ರೂ. 46 ಕೋಟಿ ವಹಿವಾಟು ನಡೆದಿದೆ ಎಂದು ಆರೋಪಿಸಿ ಮಧ್ಯಪ್ರದೇಶದ ವಿದ್ಯಾರ್ಥಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ವರದಿಯಾಗಿದೆ.
ಆದಾಯ ತೆರಿಗೆ ಇಲಾಖೆಯಿಂದ ತೆರಿಗೆ ನೋಟಿಸ್ ಸ್ವೀಕರಿಸಿದ ನಂತರವಷ್ಟೆ ಗ್ವಾಲಿಯರ್ ನಿವಾಸಿಯಾದ ಪ್ರಮೋದ್ ಕುಮಾರ್ ದಾಂಡೋತಿಯಾಗೆ ತನ್ನ ಬ್ಯಾಂಕ್ ಖಾತೆಯ ವಹಿವಾಟು ಗಮನಕ್ಕೆ ಬಂದಿದೆ. ನಿಮ್ಮ ಪಾನ್ ಕಾರ್ಡ್ ಅನ್ನು ಬಳಸಿಕೊಂಡು ಕಂಪನಿಯೊಂದು ನೋಂದಣಿಗೊಂಡಿದ್ದು, 2021ರಿಂದ ಮುಂಬೈ ಮತ್ತು ದಿಲ್ಲಿಯಲ್ಲಿ ಕಾರ್ಯಾಚರಿಸುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಹಾಗೂ ಜಿಎಸ್ಟಿ ಇಲಾಖೆ ಆತನಿಗೆ ಮಾಹಿತಿ ನೀಡಿವೆ.
ಆದಾಯ ತೆರಿಗೆ ಇಲಾಖೆಯ ನೋಟಿಸ್ ನಿಂದ 20 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿಯಾದ ದಾಂಡೋತಿಯಾ ದಿಗ್ಭ್ರಾಂತನಾಗಿದ್ದಾನೆ. ಕಂಪನಿಯನ್ನು ನೋಂದಾಯಿಸಲು ನನ್ನ ಪಾನ್ ಕಾರ್ಡ್ ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದ್ದು, ಅದರ ಮೂಲಕ ನನ್ನ ಹೆಸರಿನಲ್ಲಿ ರೂ. 46 ಕೋಟಿ ವಹಿವಾಟು ನಡೆಸಲಾಗಿದೆ ಎಂದು ಆತ ಆರೋಪಿಸಿದ್ದಾನೆ.
“ನಾನು ಗ್ವಾಲಿಯರ್ ನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದೇನೆ. ನಾನು ಆದಾಯ ತೆರಿಗೆ ಇಲಾಖೆ ಹಾಗೂ ಜಿಎಸ್ಟಿ ಇಲಾಖೆಯಿಂದ ನೋಟಿಸ್ ಸ್ವೀಕರಿಸಿದ ನಂತರವಷ್ಟೆ ನನ್ನ ಪಾನ್ ಕಾರ್ಡ್ ಮೂಲಕ ಕಂಪನಿಯೊಂದು ನೋಂದಣಿಗೊಂಡಿದ್ದು, ಆ ಕಂಪನಿಯು 2021ರಿಂದ ಮುಂಬೈ ಮತ್ತು ದಿಲ್ಲಿಯಿಂದ ಕಾರ್ಯಾಚರಿಸುತ್ತಿದೆ ಎಂದು ಅರಿವಾಯಿತು. ನನ್ನ ಪಾನ್ ಕಾರ್ಡ್ ಅನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಯಿತು ಹಾಗೂ ಹೇಗೆ ವಹಿವಾಟುಗಳನ್ನು ನಡೆಸಲಾಯಿತು ಎಂಬುದು ನನಗೆ ತಿಳಿದಿಲ್ಲ” ಎಂದು ದಾಂಡೋತಿಯಾ ಅಳಲು ತೋಡಿಕೊಂಡಿದ್ದಾರೆ.
ಈ ಮಾಹಿತಿಯನ್ನು ಸ್ವೀಕರಿಸಿದ ನಂತರ ಆದಾಯ ತೆರಿಗೆ ಇಲಾಖೆಯೊಂದಿಗೆ ಮಾತನಾಡುವ ನನ್ನ ಪ್ರಯತ್ನವು ಫಲಪ್ರದವಾಗಲಿಲ್ಲ. ಈ ಸಂಬಂಧ ಪೊಲೀಸ್ ದೂರು ನೀಡುವ ಪ್ರಯತ್ನವೂ ಶುಕ್ರವಾರದವರೆಗೆ ಯಾವುದೇ ಫಲ ನೀಡಲಿಲ್ಲ. ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ದೂರು ನೀಡಿದ ನಂತರವಷ್ಟೆ ದೂರು ದಾಖಲಾಯಿತು ಎಂದೂ ಆತ ಹೇಳಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿಯಾಝ್ ಕೆ.ಎಂ., “ನನ್ನ ಬ್ಯಾಂಕ್ ಖಾತೆಯಿಂದ ರೂ. 46 ಕೋಟಿಗೂ ಹೆಚ್ಚು ಮೊತ್ತದ ವಹಿವಾಟನ್ನು ನಡೆಸಲಾಗಿದೆ ಎಂದು ಯುವಕನೊಬ್ಬನಿಂದ ಇಂದು ಅರ್ಜಿ ಸ್ವೀಕರಿಸಿದ್ದೇವೆ. ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಲಾಯಿತು. ಆಗ ಪಾನ್ ಕಾರ್ಡ್ ದುರ್ಬಳಕೆಯಾಗಿರುವುದು ಕಂಡು ಬಂದಿದ್ದು, ಆ ಪಾನ್ ಕಾರ್ಡ್ ಅನ್ನು ಬಳಸಿಕೊಂಡು ಕಂಪನಿಯೊಂದನ್ನು ನೋಂದಾಯಿಸಲಾಗಿದೆ. ಆ ಮೂಲಕ ದೊಡ್ಡ ಪ್ರಮಾಣದ ವಹಿವಾಟನ್ನು ನಡೆಸಿರುವುದು ಪತ್ತೆಯಾಗಿದೆ” ಎಂದು ತಿಳಿಸಿದ್ದಾರೆ.