ಸಿಲಿಕಾನ್ ಸಿಟಿ ಬೆಂಗಳೂರು ಜನತೆಯ ನೆಚ್ಚಿನ ಸ್ಥಳದಲ್ಲಿ ಒಂದಾದ ವಿ.ವಿ ಪುರಂ ಫುಡ್ ಸ್ಟ್ರೀಟ್ ಆಧುನಿಕ ಸ್ಪರ್ಶದೊಂದಿಗೆ ಪುನರಾರಂಭಕ್ಕೆ ಸಜ್ಜುಗೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನದಂದು ಜನತೆಗೆ ಉಡುಗೊರೆಯಾಗಿ ನೀಡಲು ಬಿಬಿಎಂಪಿ ಮುಂದಾಗಿದೆ. ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನತೆಯ ನೆಚ್ಚಿನ ಸ್ಥಳದಲ್ಲಿ ಒಂದಾದ ವಿ.ವಿ ಪುರಂ ಫುಡ್ ಸ್ಟ್ರೀಟ್ ಆಧುನಿಕ ಸ್ಪರ್ಶದೊಂದಿಗೆ ಪುನರಾರಂಭಕ್ಕೆ ಸಜ್ಜುಗೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನದಂದು ಜನತೆಗೆ ಉಡುಗೊರೆಯಾಗಿ ನೀಡಲು ಬಿಬಿಎಂಪಿ ಮುಂದಾಗಿದೆ.
ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ವಿ.ವಿ ಪುರಂ ಫುಡ್ ಸ್ಟ್ರೀಟ್’ನ್ನು ವಿನೂತನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.
ನಿನ್ನೆಯಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಂದಾಯ ಮತ್ತು ದಕ್ಷಿಣ ವಲಯ ಆಯುಕ್ತ ಜಯರಾಮ ರಾಯಪುರ ಅವರು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಅವರೊಂದಿಗೆ ಫುಡ್ ಸ್ಟ್ರೀಟ್ ನ್ನು ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯರಾಮ್ ರಾಯಪುರ ಅವರು, ಡಿಸೆಂಬರ್ ತಿಂಗಳಿನಲ್ಲಿ ಫುಡ್ ಸ್ಟ್ರೀಟ್ ಮರು ನಿರ್ಮಾಣ ಕಾರ್ಯ ಪ್ರಾರಂಭವಾಗಿತ್ತು. ಆಗಸ್ಟ್ 15ರೊಳಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ. 6-7 ತಿಂಗಳ ಕಾಲ ವರ್ತಕರನ್ನು ನಿಭಾಯಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಕೇಬರ್ ಹಾಕುವುದು, ಚರಂಡಿಗಳ ನಿರ್ಮಾಣ ಹಾಗೂ ಪೈಪ್ ಗಳ ಜೋಡಣೆ ಮಾಡುವುದು ಸವಾಲಾಗಿ ಪರಿಣಮಿಸಿತ್ತು. ಆದರೆ, ಜನರು ಬಿಬಿಎಂಪಿಯ ಮನವಿಗೆ ಸಹಕರಿಸಿದ್ದಾರೆ. ನಿರ್ಮಾಣ ಕಾಮಗಾರಿಗೆ ಅವಕಾಶ ನೀಡಿದ್ದಾರೆ. ಇದೀಗ ಬಹುತೇಕ ಕಾಮಗಾರಿ ಕೆಲಸಗಳು ಪೂರ್ಣಗೊಂಡಿದ್ದು, ಗ್ರೀಸ್ ಟ್ರ್ಯಾಪ್ ಗಳು ಹಾಕುವುದು ಬಾಕಿ ಉಳಿದಿದೆ. ಇಲ್ಲದೆ, ಕ್ಯಾರೇಜ್ ವೇಯಲ್ಲಿ ವರ್ಣರಂಜಿತ ಬಣ್ಣದ ಕಾಂಕ್ರೀಟ್ ರಸ್ತೆ ನಿರ್ಮಾಣ, ಕರ್ಬ್ ಸ್ಟೋನ್ ಗಳ ಅಳವಡಿಕೆ, ಪಾದಚಾರಿ ಮಾರ್ಗ ನಿರ್ಮಾಣ, ಎಚ್‌ಡಿಡಿ ಕೇಬಲ್‌ಗಳೊಂದಿಗೆ ಬೀದಿ ದೀಪದ ಕಂಬಗಳ ಅಳವಡಿಕೆ, ಎಲ್ಲಾ ಅಂಗಡಿಗಳಿಗೆ ಕೆನೋಪಿಗಳ ಅಳವಡಿಕೆ, ಪ್ರವೇಶ ಪ್ಲಾಜಾ, ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆಯ ಸುತ್ತಮುತ್ತ ಸುಂದರೀಕರಣಗೊಳಿಸುವುದು ಬಾಕಿ ಇದೆ. ಆ ಕೆಲಸಗಳೂ ಶೀಘ್ರಗತಿಯಲ್ಲಿ ಪೂರ್ಣಗೊಳ್ಳಲಿದೆ. ಆಗಸ್ಟ್ 15ರೊಳಗೆ ಫುಡ್ ಸ್ಟ್ರೀಟ್ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಶಾಸಕ ಉದಯ್ ಗರುಡಾಚಾರ್ ಮಾತನಾಡಿ, 5 ಕೋಟಿ ರೂ. ಶಾಸಕರ ಅನುದಾನವನ್ನು ಫುಡ್ ಸ್ಟ್ರೀಟ್ ಮರುನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಲಾಗಿದೆ, ‘ರಸ್ತೆ ವಾಕರ್ ಝೋನ್ ಆಗಲಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀಸಲಾದ ಪಾರ್ಕಿಂಗ್ ಜಾಗದಲ್ಲಿ ನಾಗರಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ ಎಂದು ಹೇಳಿದರು.
ಫುಡ್ ಸ್ಟ್ರೀಟ್ ಆರಂಭವಾದ ಬಳಿಕ ಇಲ್ಲಿಗೆ ಬರುವ ಜನರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಒಣ ಮತ್ತು ಒದ್ದೆ ತ್ಯಾಜ್ಯಕ್ಕಾಗಿ ಪ್ರತ್ಯೇಕವಾಗಿ ಬಣ್ಣದ ಕೋಡೆಡ್ ಡಸ್ಟ್ ಬಿನ್ ಗಳನ್ನು ಇಡಲಾಗುತ್ತದೆ. ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗುತ್ತದೆ. ಪೀಕ್ ಅವರ್ ನಲ್ಲಿ ಹೊಯ್ಸಳ ವಾಹನಗಳು ಕೂಡ ಗಸ್ತು ತಿರುಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.