ಭಾರತದ್ದು ಹೇಳಿಕೇಳಿ ಸಂಸದೀಯ ಪ್ರಜಾತಂತ್ರ ವ್ಯವಸ್ಥೆ. ವೈವಿಧ್ಯಮಯ ಭೌಗೋಳಿಕತೆ ಹಾಗೂ ಪ್ರಾದೇಶಿಕ ಮಹತ್ವವನ್ನು ಹೊಂದಿರುವ ಭಾರತದಲ್ಲಿ ಬಹುಪಕ್ಷೀಯ ಸಂಸದೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಅದಕ್ಕೆ ಕಾರಣವೂ ಇದೆ. ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ನಂತರ, ಅದೇ ಪ್ರಥಮ ಬಾರಿಗೆ ಭಾರತವು ಪ್ರಜಾತಂತ್ರ ವ್ಯವಸ್ಥೆಗೆ ಮುಖವೊಡ್ಡಿತ್ತು. ಹೀಗಿದ್ದೂ ರಾಜಶಾಹಿಯ ಪ್ರಭಾವ ಭಾರತೀಯರ ಮೇಲೆ ಢಾಳಾಗಿಯೇ ಉಳಿದಿತ್ತು. ಇಂತಹ ಹೊತ್ತಿನಲ್ಲಿ ಅಮೆರಿಕ ಮಾದರಿಯ ಅಧ್ಯಕ್ಷೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೆ ತಂದರೆ ಅದು ವ್ಯಕ್ತಿಪೂಜೆಯಲ್ಲಿ ಅಂತ್ಯವಾಗಬಹುದು ಎಂಬುದನ್ನು ಸಮರ್ಥವಾಗಿಯೇ ಗ್ರಹಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್, ಭಾರತಕ್ಕೆ ಬ್ರಿಟನ್ ಮಾದರಿಯ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸಿದರು. ಆ ಮೂಲಕ ಭಾರತದಲ್ಲಿ ಬಹುಪಕ್ಷೀಯ ಪ್ರಜಾತಂತ್ರಕ್ಕೆ ಅಡಿಗಲ್ಲು ಹಾಕಿದರು. ಹೀಗಿದ್ದೂ, ಭಾರತದಲ್ಲಿ ಮೊದಲಿಗೆ ಸಮ್ಮಿಶ್ರ ಸರಕಾರ ಪರಿಚಯವಾಗಿದ್ದು 1979ರಲ್ಲಿ, ಜನತಾ ಪರಿವಾರದ ಚರಣ್ ಸಿಂಗ್ ಪ್ರಧಾನಿಯಾಗಿದ್ದಾಗ. ಆದರೆ, ಆ ಸರಕಾರದ ಅವಧಿ ಕ್ಲುಪ್ತ ಸಮಯದಲ್ಲೇ ಅಂತ್ಯಗೊಂಡಿತ್ತು.
ಇದಾದ ನಂತರ ಸಮ್ಮಿಶ್ರ ಸರಕಾರಗಳ ಯುಗ ದೀರ್ಘವಾಗಿ ಪ್ರಾರಂಭಗೊಂಡಿದ್ದು 1989ರಲ್ಲಿ, ವಿ.ಪಿ.ಸಿಂಗ್ ಪ್ರಧಾನಿಯಾದ ನಂತರ. ಈ ಯುಗವು ಅಂತ್ಯಗೊಂಡಿದ್ದು 2014ರಲ್ಲಿ. ಅರ್ಥಾತ್ ಭಾರತದಲ್ಲಿ 25 ವರ್ಷಗಳಷ್ಟು ಸುದೀರ್ಘ ಕಾಲ ಸಮ್ಮಿಶ್ರ ಸರಕಾರಗಳ ಯುಗ ಅಸ್ತಿತ್ವದಲ್ಲಿತ್ತು. ಈ ಯುಗವು ಭಾರತದ ಬಹುಪಕ್ಷೀಯ ಪ್ರಜಾತಂತ್ರದ ಪಾಲಿಗೆ ಸುವರ್ಣ ಯುಗವಾಗಿತ್ತು. ಪ್ರಾದೇಶಿಕ ಪಕ್ಷಗಳೂ ಮುಖ್ಯವಾಹಿನಿ ರಾಜಕಾರಣದಲ್ಲಿ ತಮಗೆ ವೇದಿಕೆ ಕಲ್ಪಿಸಿಕೊಂಡ ಯುಗವಾಗಿತ್ತು. ಹಾಗೆಯೇ ಬಲಿಷ್ಠ ಒಕ್ಕೂಟ ವ್ಯವಸ್ಥೆಗೆ ಭದ್ರ ಅಡಿಪಾಯವನ್ನೂ ಹಾಕಿದ ಯುಗವಾಗಿತ್ತದು.
ಆದರೆ, ಈ ಪರಂಪರೆ ಮುರಿದು ಬಿದ್ದದ್ದು 2014ರಲ್ಲಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ಸ್ವಂತ ಬಲದ ಮೇಲೆ ಬಹುಮತ ಪಡೆದ ನಂತರ. 2019ರಲ್ಲೂ ಬಿಜೆಪಿ ಸ್ವಂತ ಬಲದ ಮೇಲೆ ಭಾರೀ ಬಹುಮತ (303 ಸ್ಥಾನಗಳು) ನಂತರವಂತೂ ಸಮ್ಮಿಶ್ರ ಸರಕಾರಗಳ ಯುಗ ಅಂತ್ಯವಾಗಬಹುದು ಎಂದೇ ಬಹುತೇಕ ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಈ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನ ಮೇಲೆ ನಡೆದಷ್ಟು ದಾಳಿ ಮತ್ತೆಂದೂ ನಡೆದಿರಲಿಲ್ಲ. ನೋಟು ಅಮಾನ್ಯ, ಕೇಂದ್ರೀಕೃತ ತೆರಿಗೆ ವ್ಯವಸ್ಥೆಯಾದ ಜಿಎಸ್‌ಟಿ ಜಾರಿ, ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ, ಪೌರತ್ವ ತಿದ್ದುಪಡಿ ಕಾಯ್ದೆ, ಕೃಷಿ ಕಾಯ್ದೆಗಳ ತಿದ್ದುಪಡಿ, ರಾಷ್ಟ್ರೀಯ ಶಿಕ್ಷಣ ನೀತಿ, ಅಗ್ನಿವೀರ್ ಹೀಗೆ ಸಾಲು ಸಾಲು ಏಕಪಕ್ಷೀಯ ನೀತಿ-ನಿರ್ಧಾರಗಳಿಂದ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆಗೆ ಭಾರೀ ಧಕ್ಕೆಯುಂಟಾಯಿತು.
ತಮ್ಮ ಬಳಿ ಸ್ವಂತ ಬಲದ ಭಾರೀ ಬಹುಮತವಿದ್ದುದರಿಂದ ಸಹಕಾರ ಒಕ್ಕೂಟ ವ್ಯವಸ್ಥೆಯ ಜಪ ಮಾಡುತ್ತಲೇ ಪ್ರಧಾನಿ ನರೇಂದ್ರ ಮೋದಿ, ಆ ವ್ಯವಸ್ಥೆಯ ಒಂದೊಂದೇ ಇಟ್ಟಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ಕೆಡವುತ್ತಾ ಹೊರಟರು. ಇಂತಹ ನಿರಂಕುಶಾಧಿಕಾರಕ್ಕೆ ಅಂಕುಶ ಹಾಕಲು ಕೊನೆಗೆ ಮತದಾರನೇ ಮನಸ್ಸು ಮಾಡಬೇಕಾಯಿತು. ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಯಾವುದೇ ಏಕ ಪಕ್ಷಕ್ಕೆ ಬಹುಮತ ನೀಡದ ಮತದಾರ, ಅತಂತ್ರ ಲೋಕಸಭೆಗೆ ತನ್ನ ಒಲವನ್ನು ಸ್ಪಷ್ಟವಾಗಿ ತೋರಿದ್ದಾನೆ. ಮತ್ತೊಂದು ಮಹತ್ವದ ಬೆಳವಣಿಗೆಯೆಂದರೆ, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ನೀಡಿರುವಷ್ಟೇ ಬಲಕ್ಕೆ ಸರಿಸಮಾನವಾಗುವಂತಹ ಬಲವನ್ನು ವಿರೋಧ ಪಕ್ಷಗಳ ಮೈತ್ರಿಕೂಟವಾದ ‘ಇಂಡಿಯಾ’ಗೂ ಮತದಾರ ನೀಡಿದ್ದಾನೆ. ಇದರಿಂದಾಗಿ ಯಾವುದೇ ಆಡಳಿತಾರೂಢ ಸರಕಾರದ ನಿರಂಕುಶಾಧಿಕಾರಕ್ಕೆ ನಿಶ್ಚಿತವಾಗಿ ಅಂಕುಶ ಬೀಳಲಿದೆ.
2014ರಿಂದ 2024ರವರೆಗಿನ ಅವಧಿಯು ಭಾರತದ ಬಹುಪಕ್ಷೀಯ ಸಂಸದೀಯ ವ್ಯವಸ್ಥೆಗೆ ಕರಾಳ ಯುಗವಾಗಿತ್ತು. ಈ ಅವಧಿಯಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನ ಮೇಲೆ ನಡೆದಷ್ಟು ದಾಳಿ ಮತ್ಯಾವ ಅವಧಿಯಲ್ಲೂ ನಡೆದಿರಲಿಲ್ಲ. ಸಂವಿಧಾನದ ಪ್ರಕಾರ, ಪ್ರತೀ ರಾಜ್ಯಗಳೂ ಸ್ವತಂತ್ರ ಅಸ್ತಿತ್ವವನ್ನು ಹೊಂದಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವಂತೂ ರಾಜ್ಯ ಸರಕಾರಗಳನ್ನು ಅಕ್ಷರಶಃ ಸಾಮಂತ ರಾಜ್ಯಗಳಂತೆ ನಡೆಸಿಕೊಂಡಿತು. ಕೇಂದ್ರೀಕೃತ ತೆರಿಗೆ ವ್ಯವಸ್ಥೆಯಾದ ಜಿಎಸ್‌ಟಿ ಪದ್ಧತಿಯನ್ನು ಜಾರಿಗೊಳಿಸುವ ಮೂಲಕ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು, ಮುಖ್ಯವಾಗಿ ವಿರೋಧ ಪಕ್ಷಗಳು ಆಡಳಿತಾರೂಢವಾಗಿರುವ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ನಿರ್ದಯವಾಗಿ ಕಿತ್ತುಕೊಳ್ಳಲಾಯಿತು. ಇದು ಭಾರತದ ಒಕ್ಕೂಟ ಪರಿಕಲ್ಪನೆಗೆ ನೀಡಿದ ಭಾರೀ ಪೆಟ್ಟಾಗಿತ್ತು.
ಇನ್ನು ಕೃಷಿ ಹಾಗೂ ಶಿಕ್ಷಣದಂಥ ವಿಷಯಗಳು ಸಹವರ್ತಿ ಪಟ್ಟಿಯಲ್ಲಿದ್ದರೂ, ಪ್ರಧಾನಿ ನರೇಂದ್ರ ಮೋದಿ ಸರಕಾರವು ಏಕಪಕ್ಷೀಯವಾಗಿ ಕೃಷಿ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿತು. ಕೃಷಿ ಕಾಯ್ದೆಗಳ ತಿದ್ದುಪಡಿ ವಿರುದ್ಧ ಸ್ವತಃ ರೈತರೇ ಬೀದಿಗೆ ಇಳಿದ ನಂತರವಷ್ಟೆ ಒಲ್ಲದ ಮನಸ್ಸಿನಿಂದ ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂಪಡೆಯಿತು. ಅದೇ ರೀತಿ ಸಂಘ ಪರಿವಾರದ ಸಿದ್ಧಾಂತಕ್ಕೆ ಅನುಗುಣವಾಗಿ ಸಿದ್ಧಪಡಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಕೆಲವು ರಾಜ್ಯಗಳು, ಅದರಲ್ಲೂ ದಕ್ಷಿಣ ಭಾರತದ ಬಿಜೆಪಿಯೇತರ ರಾಜ್ಯಗಳು ಸಿಡಿದೆದ್ದು, ತಮ್ಮದೇ ಆದ ಶಿಕ್ಷಣ ನೀತಿಗಳನ್ನು ಜಾರಿಗೆ ತಂದಿವೆ. ತಮಿಳುನಾಡು, ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳ ಪೈಕಿ ಪ್ರಮುಖ ರಾಜ್ಯಗಳು.
ಹೀಗೆ ಒಕ್ಕೂಟ ಸರಕಾರವೊಂದು ಅಧಿಕಾರವನ್ನು ಕೇಂದ್ರೀಕರಿಸಲು ಮುಂದಾಗಿದ್ದರಲ್ಲಿ ಮತದಾರರು ನೀಡಿದ ಏಕಪಕ್ಷೀಯ ತೀರ್ಪಿನ ಕಾರಣವೂ ಅಡಗಿತ್ತು. 2014 ಹಾಗೂ 2019ರಲ್ಲಿ ಬಲಪಂಥೀಯ ಬಿಜೆಪಿಗೆ ಮತದಾರರು ಕಣ್ಣು ಮುಚ್ಚಿ ಭಾರೀ ಬಹುಮತ ನೀಡಿದ್ದರಿಂದಾಗಿ, ಒಕ್ಕೂಟ ವ್ಯವಸ್ಥೆಯ ಹೆಣಿಗೆ ಛಿದ್ರವಾಗಿದೆ. ವಿರೋಧ ಪಕ್ಷಗಳು ಆಡಳಿತಾರೂಢವಾಗಿರುವ ರಾಜ್ಯಗಳ ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಾಯತ್ತತೆಯನ್ನು ಜಿಎಸ್‌ಟಿ ಎಂಬ ಅವೈಜ್ಞಾನಿಕ ಕೇಂದ್ರೀಕೃತ ತೆರಿಗೆ ಪದ್ಧತಿಯ ಮೂಲಕ ನಿರ್ದಾಕ್ಷಿಣ್ಯವಾಗಿ ಕಿತ್ತುಕೊಳ್ಳಲಾಗಿದೆ. ಒಕ್ಕೂಟ ಸರಕಾರವೊಂದರ ಇಂತಹ ನಿರಂಕುಶಾಧಿಕಾರಕ್ಕೆ ಮತದಾರರ ಒಲವು-ನಿಲುವುಗಳೂ ಕಾರಣವಾಗಿದ್ದವೇ ಹೊರತು, ಬಿಜೆಪಿಯೊಂದೇ ಅಲ್ಲ.
ಬಲಪಂಥೀಯ ಪಕ್ಷಗಳು ಎಂದಿಗೂ ನಿರಂಕುಶಾಧಿಕಾರವನ್ನೇ ಹೆಚ್ಚು ಬಯಸುತ್ತವೆ. ಈ ಮಾತಿಗೆ ವಿಶ್ವಾದ್ಯಂತ ಹಲವಾರು ನಿದರ್ಶನಗಳು ದೊರೆಯುತ್ತವೆ. ಇಂತಹ ಪಕ್ಷಗಳಿಗೆ ಪ್ರಜಾತಂತ್ರ ವ್ಯವಸ್ಥೆ ಕೇವಲ ಔಪಚಾರಿಕ ಪ್ರಕ್ರಿಯೆಯಾಗಿರಬೇಕೇ ಹೊರತು, ಪ್ರಜೆಗಳನ್ನೇ ಪ್ರಭುಗಳನ್ನಾಗಿಸಬಾರದು. ಪ್ರಜೆಗಳು ಪ್ರತೀ ಐದು ವರ್ಷಕ್ಕೊಮ್ಮೆ ತಮ್ಮ ಭವಿಷ್ಯ ನಿರ್ಧರಿಸುವುದೇ ಇಂತಹ ಪಕ್ಷಗಳಿಗೆ ಅಪಥ್ಯ. ಇದಕ್ಕೆ ಕಳಶವಿಟ್ಟಂತೆ 2014 ಹಾಗೂ 2019ರ ಚುನಾವಣೆಯಲ್ಲಿ ವಿರೋಧ ಪಕ್ಷಗಳ ವಿರುದ್ಧ ಅತ್ಯಂತ ಕೆಟ್ಟ ಅಸಹನೆ ಪ್ರದರ್ಶಿಸಿದ ಮತದಾರರು, ತಮ್ಮ ಧ್ವನಿಯಾಗಬೇಕಾಗಿದ್ದ ವಿರೋಧ ಪಕ್ಷಗಳನ್ನೇ ದುರ್ಬಲಗೊಳಿಸಿದರು. ಎಷ್ಟರ ಮಟ್ಟಿಗೆಂದರೆ, ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ನಾಯಕ ಕೂಡಾ ಆಯ್ಕೆಯಾಗದ ಮಟ್ಟಕ್ಕೆ. ಇಂತಹ ಕುರುಡು ಅಸಹನೆಯ ಪರಿಣಾಮವೇ ಇಂದು ಇಡೀ ದೇಶವನ್ನು ಕಿತ್ತು ತಿನ್ನುತ್ತಿರುವ ನಿರುದ್ಯೋಗ, ಬೆಲೆಯೇರಿಕೆ, ಹಣದುಬ್ಬರ ಹಾಗೂ ಬಡತನ ಪ್ರಮಾಣದಲ್ಲಿನ ಆತಂಕಕಾರಿ ಏರಿಕೆ.
ಯಾವುದೇ ಆಳುವ ಸರಕಾರವನ್ನು ಪ್ರಜೆಗಳೇ ಚುನಾಯಿಸಿದರೂ, ಅವನ್ನು ಓಲೈಸುವಷ್ಟು ಹತ್ತಿರ ಉದ್ಯಮಪತಿಗಳು, ಸ್ಥಿತಿವಂತರು ಮಾತ್ರ ಇರುತ್ತಾರೆ. ಹೀಗಾಗಿ ಆಳುವ ಸರಕಾರಗಳಲ್ಲಿ ಅವರ ಪ್ರಭಾವವೇ ಹೆಚ್ಚಿರುತ್ತದೆ. ಅವರ ಪ್ರಭಾವದ ತೀವ್ರತೆಗೆ ಅನುಗುಣವಾಗಿ ಆಳುವ ಸರಕಾರಗಳ ನೀತಿ-ನಿರ್ಧಾರಗಳು ಅನುಷ್ಠಾನಗೊಳ್ಳುತ್ತವೆ. ಕಳೆದ ಹತ್ತು ವರ್ಷಗಳಲ್ಲಿ ಆಯ್ದ ಉದ್ಯಮಪತಿಗಳ ಪ್ರಭಾವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮೇಲೆ ದೊಡ್ಡ ಪ್ರಮಾಣದಲ್ಲಿದ್ದುದರಿಂದಾಗಿಯೇ, ಉದ್ಯಮಪತಿಗಳ ಪರವಾದ ನೀತಿಗೆ ಬಿಜೆಪಿ ಸರಕಾರದಲ್ಲಿ ಹೆಚ್ಚು ಆದ್ಯತೆ ದೊರೆಯಿತೇ ಹೊರತು ದೇಶದಲ್ಲಿನ ಬಡತನ, ಹಸಿವು ನಿವಾರಣೆ, ಅನಕ್ಷರತೆಯ ನಿರ್ಮೂಲನಾ ಕಾರ್ಯಕ್ರಮಗಳಿಗಲ್ಲ ಎಂಬುದು ರಾಜಕೀಯ ತಜ್ಞರ ಅಭಿಮತ.
ಏಕಪಕ್ಷವೊಂದಕ್ಕೆ ಬಹುಮತ ನೀಡುವುದರಿಂದ ಭಾರತದ ಒಕ್ಕೂಟ ವ್ಯವಸ್ಥೆಯ ಮೇಲಾಗುವ ದುಷ್ಪರಿಣಾಮ ಎಂತಹುದು ಎಂಬುದಕ್ಕೆ ಕಳೆದ ಹತ್ತು ವರ್ಷಗಳ ಆಡಳಿತಾವಧಿಯಲ್ಲೇ ದೊಡ್ಡ ಪುರಾವೆ ದೊರೆತಿದೆ. ಅದರಲ್ಲೂ ಏಕ ಪಕ್ಷವೊಂದಕ್ಕೆ ಭಾರೀ ಬಹುಮತ ನೀಡಿದರೆ, ಎಂತೆಂತಹ ನಿರಂಕುಶ ತೀರ್ಮಾನಗಳು ಹೊರ ಬೀಳುತ್ತವೆ ಎಂಬುದಕ್ಕೂ ಈ ಹತ್ತು ವರ್ಷಗಳ ಅವಧಿಯು ಜ್ವಲಂತ ನಿದರ್ಶನವಾಗಿದೆ, ಅಧ್ಯಯನ ಯೋಗ್ಯವೂ ಆಗಿದೆ.
ತಾನೆಸಗಿದ ಪ್ರಮಾದದ ಬಗ್ಗೆ ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಮತದಾರ, ಈ ಬಾರಿ ಮತ್ತೆ ಸಮ್ಮಿಶ್ರ ಸರಕಾರಗಳ ಯುಗಕ್ಕೆ ತನ್ನ ಒಪ್ಪಿಗೆ ಮುದ್ರೆ ಒತ್ತಿದ್ದಾನೆ. ಈ ಒಪ್ಪಿಗೆ ಮುದ್ರೆ ಈ ಅವಧಿಗೆ ಮಾತ್ರ ಅಂತ್ಯವಾಗದೆ, ನಿರಂತರವಾಗಿ ಉಳಿದು, ಬೆಳೆಯಬೇಕಿದೆ. ಆಗ ಮಾತ್ರ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲಿವೆ. ಆ ಮೂಲಕ ತಮ್ಮ ಪ್ರಾದೇಶಿಕ ಹಿತಾಸಕ್ತಿಯನ್ನು ಚೌಕಾಸಿ ರಾಜಕಾರಣದ ಮೂಲಕ ಕಾಯಲೂ ಅವಕ್ಕೆ ಸಾಧ್ಯವಾಗಲಿದೆ. ಒಟ್ಟಾರೆಯಾಗಿ, ಸಮ್ಮಿಶ್ರ ಸರಕಾರಗಳಿಂದ ಒಕ್ಕೂಟ ವ್ಯವಸ್ಥೆ ಮತ್ತಷ್ಟು ಬಲಿಷ್ಠ ಮತ್ತು ಆರೋಗ್ಯಕರವಾಗಲಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ಸಮ್ಮಿಶ್ರ ಸರಕಾರಗಳು ಅತ್ಯವಶ್ಯಕವಾಗಿವೆ.