ವಿಜಯಪುರ, ಮಾ.3: ವಿಜಯಪುರ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಬೆಳಗಾವಿ ನಗರದ ಕೆ.ಎಲ್.ಇ. ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರ್ಯಕ್ರಮದ ನಿಮಿತ್ತ ಶನಿವಾರ ಬೆಳಗಾವಿಗೆ ತೆರಳಿದ್ದ ರಮೇಶ್ ಜಿಗಜಿಣಗಿಯವರಿಗೆ ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೆ.ಎಲ್.ಇ. ಆಸ್ಪತ್ರೆಗೆ ದಾಖಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಕಳೆದ ಜನವರಿ 28ರಂದು ಸಹ ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಸಂಚರಿಸುತ್ತಿದ್ದ ವೇಳೆ ರಮೇಶ್ ಜಿಗಜಿಣಗಿಯವರಿಗೆ ದಿಢೀರ್ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಾಗಲಕೋಟೆ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು.