Home ಕರ್ನಾಟಕ ಆರ್.ಅಶೋಕ್ ತಮ್ಮ ರಾಜಕೀಯ ಚಟಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ : ರಮೇಶ್ ಬಾಬು

ಆರ್.ಅಶೋಕ್ ತಮ್ಮ ರಾಜಕೀಯ ಚಟಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ : ರಮೇಶ್ ಬಾಬು

16
0

ಬೆಂಗಳೂರು : ‘ಸಂವಿಧಾನದ ಉಲ್ಲಂಘನೆ, ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿಟ್ಟಿರುವ ಬಿಜೆಪಿ ಅಥವಾ ಅದರ ನಾಯಕರಿಗೆ ತುರ್ತು ಪರಿಸ್ಥಿತಿಯ ಕುರಿತು ಮಾತನಾಡುವ ನೈತಿಕತೆಯೇ ಇಲ್ಲ. ವಿಪಕ್ಷ ನಾಯಕರಾಗಿ ವಿಫಲರಾಗಿರುವ ಆರ್.ಅಶೋಕ್ ತಮ್ಮ ರಾಜಕೀಯ ಚಟಕ್ಕಾಗಿ ಆಗಾಗ ಇಂತಹ ಹೇಳಿಕೆಗಳನ್ನು ನೀಡುತ್ತಾರೆ’ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಜನಸಂಘದಿಂದ ಪರಿವರ್ತನೆಗೊಂಡಿರುವ ಬಿಜೆಪಿಗರು ಮಾತ್ರ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ತುರ್ತುಪರಿಸ್ಥಿತಿಯ ಸಂದರ್ಭವನ್ನು ಪದೇ ಪದೇ ನೆನಪಿಸಿಕೊಳ್ಳುತ್ತಾರೆ. ದೇಶದಲ್ಲಿ ಇಂದು ಇರುವ ಅಘೋಷಿತ ಪರಿಸ್ಥಿತಿ ಮತ್ತು ಏಕವ್ಯಕ್ತಿ ಸರ್ವಾಧಿಕಾರ, ವ್ಯಕ್ತಿ ಪೂಜೆ ಬಿಜೆಪಿಗೆ ಅನಿವಾರ್ಯವಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಅನಿವಾರ್ಯದ ವಿಪಕ್ಷ ನಾಯಕ ಆರ್.ಅಶೋಕ್, ರಾಹುಲ್ ಗಾಂಧಿ ರಾಮಲೀಲಾ ಮೈದಾನದಲ್ಲಿ ಜನರ ಕ್ಷಮೆ ಕೇಳಬೇಕೆಂದು ಹೇಳಿದ್ದಾರೆ. ಬಿಜೆಪಿಯ ಬಹುತೇಕ ನಾಯಕರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಪದೇ ಪದೇ ಇಂತಹ ಹೇಳಿಕೆ ಮೂಲಕ ಕಾಂಗ್ರೆಸ್ ಮತ್ತು ನಮ್ಮ ಪಕ್ಷದ ನಾಯಕರನ್ನು ಟೀಕಿಸಿ ಬೆತ್ತಲೆಯಾಗುತ್ತಾರೆ. ಬಿಜೆಪಿಯ ನಾಯಕ ಎಲ್.ಕೆ.ಅಡ್ವಾಣಿ ಅಂದಿನ ತುರ್ತುಪರಿಸ್ಥಿತಿಯ ಕಾರಣಕ್ಕಾಗಿ ಭಾರತದ ಪ್ರಜಾಪ್ರಭುತ್ವದ ಬೇರುಗಳು ಮತ್ತಷ್ಟು ಗಟ್ಟಿಯಾದವು ಎಂದು ಹೇಳಿದ್ದಾರೆ. ಅದೇ ವೇಳೆ ಮತ್ತೆ ತುರ್ತು ಪರಿಸ್ಥಿತಿ ಬರಲು ಸಾಧ್ಯವಿಲ್ಲವೆಂದು ನಾನು ಹೇಳಲು ಆಗುವುದಿಲ್ಲ ಎಂದು ಹೇಳಿರುತ್ತಾರೆ. ಬಿಜೆಪಿಯ ನಾಯಕರು ಯಾರನ್ನು ಉದ್ದೇಶಿಸಿ ಹೇಳಿದ್ದಾರೆಂದು ಆ ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ರಮೇಶ್ ಬಾಬು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ನಡೆಸಿದ ಪೋಸ್ಟರ್ ಅಭಿಯಾನದ ಬದಲು ಬಿಜೆಪಿಗರು ತಮ್ಮ ಪಕ್ಷದ ಸಿದ್ಧಾಂತಕ್ಕೆ ಅನುಗುಣವಾಗಿ ಮೋದಿ ವ್ಯಕ್ತಿ ಪೂಜೆಯ ವಿರುದ್ಧ ಪೆಪೋಸ್ಟರ್ ಅಭಿಯಾನ ನಡೆಸಬಹುದಿತ್ತು. ಆರ್.ಅಶೋಕ್‍ಗೆ ಪೋಸ್ಟರ್ ಗಳ ಅವಶ್ಯಕತೆ ಇದ್ದಲ್ಲಿ ಕಾಂಗ್ರೆಸ್ ಪಕ್ಷ ಉಚಿತವಾಗಿ ಪೂರೈಕೆ ಮಾಡುತ್ತಿತ್ತು’ ಎಂದು ಅವರು ಕಿಡಿಕಾರಿದ್ದಾರೆ.

ಬಿಜೆಪಿಗರು ರಾತ್ರೊರಾತ್ರಿ ನಾಯಕರಾಗುತ್ತಾರೆ: ‘ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಾನು ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದೆ ಮತ್ತು ಬೆಂಗಳೂರಿನಲ್ಲಿ 1 ತಿಂಗಳ ಕಾಲ ಜೈಲುವಾಸ ಅನುಭವಿಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಪ್ರಥಮ ಪಿಯು ಓದುವ 16 ವರ್ಷದ ಅಪ್ರಾಪ್ತರನ್ನು ಜೈಲಿನಲ್ಲಿ ಇಡಲು ದೇಶದ ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ. ಇಂತಹ ಹಸಿ ಸುಳ್ಳುಗಳ ಮೂಲಕವೇ ಬಿಜೆಪಿಗರು ರಾತ್ರೊರಾತ್ರಿ ನಾಯಕರಾಗಿರುತ್ತಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here