ಹೊಸದಿಲ್ಲಿ: ವಿಶ್ವದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಪೂರ್ಣಗೊಂಡಿದ್ದು, ಬಹುನಿರೀಕ್ಷೆಯ ಬಾರ್ಬೀ ಚಿತ್ರಕ್ಕಾಗಿ ರೇಸ್ ನಲ್ಲಿದ್ದ ನಟಿ ಮಾರ್ಗೊತ್ ರಾಬ್ಬೀ ಮತ್ತು ನಿರ್ದೇಶಕಿ ಗ್ರೇಟಾ ಗ್ರೆವಿಗ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. 96ನೇ ಅಕಾಡೆಮಿ ಅವಾರ್ಡ್ಸ್ ಗೆ ನಾಮನಿರ್ದೇಶನವನ್ನು ಮಂಗಳವಾರ ಪೂರ್ಣಗೊಳಿಸಲಾಗಿದೆ.
ಇದರ ಜತೆಗೆ ‘ಕಿಲ್ಲರ್ಸ್ ಆಫ್ ದಿ ಫ್ಲವರ್ ಮೂನ್’ ನಟ ಲಿಯನಾರ್ಡೊ ಡಿಕ್ಯಾಪ್ರಿಯೊ ಕೂಡಾ ಉತ್ತಮ ನಟ ರೇಸ್ ನಿಂದ ಹೊರಬಿದ್ದಿದ್ದಾರೆ. ಒಪ್ಪೆನ್ ಹೀಮೆರ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಪೂವರ್ ಥಿಂಗ್ಸ್ 13 ನಾಮನಿರ್ದೇಶನಗಳಿಗೆ ಹೆಸರಿಸಲ್ಪಟ್ಟಿದ್ದರೆ, ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್ 10 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಲಿಯನಾರ್ಡೊ ಅವರ ಸಹ ನಟಿ ಲಿಲಿ ಗ್ಲ್ಯಾಡ್ ಸ್ಟೋನ್ ಈ ವರ್ಷ ಗೋಲ್ಡನ್ ಗ್ಲೋಬ್ ನಲ್ಲಿ ಪ್ರಶಸ್ತಿ ಗೆದ್ದಿದ್ದರು ಹಾಗೂ ಈ ಆಸ್ಕರ್ ಗೆ ಸ್ಪರ್ಧೆಯಲ್ಲಿದ್ದಾರೆ. ಬಾರ್ಬೀ ತಂಡದ ನಟ ಹಾಗೂ ನಿರ್ದೇಶಕ ತಂಡಕ್ಕೆ ಆಘಾತವಾಗಿದೆ. ಆದರೆ ಅಮೆರಿಕಾ ಫೆರೇರಾ ಹೆಸರು ಉತ್ತಮ ಪೋಷಕ ನಟಿ ಸ್ಪರ್ಧೆಯ ಪಟ್ಟಿಯಲ್ಲಿದೆ. ‘ಐ ಆ್ಯಮ್ ಜೆಸ್ಟ್ ಕೆನ್’ ಚಿತ್ರದ ನಟನೆಗಾಗಿ ರಿಯಾನ್ ಗೋಸ್ಲಿಂಗ್ ಅವರನ್ನು ಉತ್ತಮ ಪೋಷಕ ನಟ ಸ್ಪರ್ಧೆಗೆ ಪರಿಗಣಿಸಲಾಗಿದೆ. ಈ ಹಾಡು ಉತ್ತಮ ಹಾಡು ಸ್ಪರ್ಧೆಯಲ್ಲೂ ಇದೆ.
ನಿರೀಕ್ಷೆಯಂತೆ ಸಿಲಿಯನ್ ಮರ್ಫಿ, ರಾಬರ್ಟ್ ಡೌನಿ ಜೂನಿಯರ್ ಮತ್ತು ಎಮ್ಲಿ ಬ್ಲಂಟ್ ಉತ್ತಮ ನಟ, ಉತ್ತಮ ಪೋಷಕ ನಟ ಹಾಗೂ ಉತ್ತಮ ಪೋಷಕ ನಟಿ ರೇಸ್ನಲ್ಲಿದ್ದಾರೆ. ಮೊದಲ ಇಬ್ಬರು ಗೋಲ್ಡನ್ ಗ್ಲೋಬ್ನಲ್ಲಿ ಆಯಾ ವರ್ಗದ ಪ್ರಶಸ್ತಿ ಗೆದ್ದಿದ್ದರು. ಗೋಲ್ಡನ್ಗ್ಲೋಬ್ ಪ್ರಶಸ್ತಿ ಗೆದ್ದ ಎಮ್ಮಾ ಸ್ಟೋನ್ ಮತ್ತು ಡವಿನ್ ಜಾಯ್ ರಾಂಡಲ್ಫ್ ಕೂಡಾ ನಾಮನಿರ್ದೇಶನಗೊಂಡಿದ್ದಾರೆ.
ನಟಿ ಝಾಝಿ ಬೀಟ್ಸ್ ಹಾಗೂ ಜಾಕ್ ಕ್ವೈಡ್ ಆಸ್ಕರ್ ನಾಮನಿರ್ದೇಶನ ಪಟ್ಟಿ ಪ್ರಕಟಿಸಿದರು. ಲಾಸ್ಎಂಜಲೀಸ್ನಲ್ಲಿ ಮಾರ್ಚ್ 10ರಂದು (ಭಾರತದ ಕಾಲಮಾನದ ಪ್ರಕಾರ 11ರ ಮುಂಜಾನೆ) ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಿಮ್ಮಿ ಕಿಮ್ಮೆಲ್ ನಿರೂಪಕರಾಗಿರುತ್ತಾರೆ.