ಸಿಯೋಲ್: ಆಸ್ಕರ್ ಪ್ರಶಸ್ತಿ ವಿಜೇತ ‘ಪ್ಯಾರಾಸೈಟ್’ ಚಿತ್ರದಲ್ಲಿನ ತಮ್ಮ ಪಾತ್ರದಿಂದ ಜನಪ್ರಿಯರಾಗಿದ್ದ ದಕ್ಷಿಣ ಕೊರಿಯಾ ನಟ ಲೀ ಸುನ್-ಕ್ಯೂನ್ ಬುಧವಾರ ಕಾರೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಹುಶಃ ಆತ್ಮಹತ್ಯೆ ಇರಬಹುದು ಎಂದು ಶಂಕಿಸಲಾಗಿದೆ ಎಂದು ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಕೇಂದ್ರ ಸಿಯೋಲ್ ಬಳಿಯ ಉದ್ಯಾನವನವೊಂದರ ಬಳಿ ಕಾರೊಂದರಲ್ಲಿ ನಟ ಲೀ ಸುನ್-ಕ್ಯೂನ್ ಪತ್ತೆಯಾಗಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಮರಿಜುವಾನಾ ಹಾಗೂ ಇನ್ನಿತರ ಮಾದಕ ದ್ರವ್ಯ ಸೇವನೆಗಳ ಆರೋಪಗಳ ಕಾರಣಕ್ಕೆ ಲೀ ವಿರುದ್ಧ ಪೊಲೀಸ್ ತನಿಖೆ ಪ್ರಗತಿಯಲ್ಲಿತ್ತು.
ಒಂದು ಕಾಲದಲ್ಲಿ ಬಹಳ ಜನಪ್ರಿಯರಾಗಿದ್ದ ಲೀ ಸುನ್-ಕ್ಯೂನ್ ವಿರುದ್ಧ ಮಾದಕ ದ್ರವ್ಯ ಸೇವನೆಯ ಆರೋಪಗಳು ಕೇಳಿ ಬಂದ ನಂತರ ಅವರನ್ನು ಟಿವಿ ಹಾಗೂ ವಾಣಿಜ್ಯ ಯೋಜನೆಗಳಿಂದ ಕೈಬಿಡಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ದಕ್ಷಿಣ ಕೊರಿಯಾದ ಪ್ರತಿಷ್ಠಿತ ಕೊರಿಯಾ ರಾಷ್ಟ್ರೀಯ ಕಲಾ ವಿಶ್ವವಿದ್ಯಾಲಯದ ಪದವೀಧರರಾಗಿದ್ದ ಲೀ, 2001ರಲ್ಲಿ ಟಿವಿ ಕಾರ್ಯಕ್ರಮವಾದ ‘ಲವರ್ಸ್’ ಮೂಲಕ ನಟನೆಗೆ ಪದಾರ್ಪಣೆ ಮಾಡಿದ್ದರು.