ಮೆಲ್ಬರ್ನ್ : ಪ್ರವಾಸಿ ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯವು ಆರಂಭದಲ್ಲಿ ಬ್ಯಾಟಿಂಗ್ ಕುಸಿತಕ್ಕೆ ಒಳಗಾದರೂ, ಮಿಚೆಲ್ ಮಾರ್ಶ್ರ ದಿಟ್ಟ ಬ್ಯಾಟಿಂಗ್ ನೆರವಿನಿಂದ ಪ್ರತಿ ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಪಂದ್ಯದ ಮೂರನೇ ದಿನವಾದ ಗುರುವಾರ ಆತಿಥೆಯ ತಂಡವು ಪಂದ್ಯದ ಮೇಲಿನ ನಿಯಂತ್ರಣವನ್ನು ಮತ್ತೆ ತನ್ನ ಕೈಗೆ ತೆಗೆದುಕೊಂಡಿದೆ.
ಆರಂಭಿಕ ಬ್ಯಾಟಿಂಗ್ ಕುಸಿತಕ್ಕೆ ಒಳಗಾದ ಆಸ್ಟ್ರೇಲಿಯದ ನೆರವಿಗೆ ಧಾವಿಸಿದ ಮಾರ್ಶ್ ಕ್ರೀಸ್ನಿಂದ ನಿರ್ಗಮಿಸುವ ಮುನ್ನ 96 ರನ್ಗಳ ದೇಣಿಗೆ ನೀಡಿದ್ದರು.
ಮೂರನೇ ದಿನದಾಟ ಮುಗಿದಾಗ ಆಸ್ಟ್ರೇಲಿಯವು ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 6 ವಿಕೆಟ್ಗಳ ನಷ್ಟಕ್ಕೆ 187 ರನ್ಗಳನ್ನು ಗಳಿಸಿದೆ. ಈ ಮೂಲಕ ಅದು 241 ರನ್ಗಳ ಅಮೂಲ್ಯ ಮುನ್ನಡೆಯನ್ನು ಪಡೆದುಕೊಂಡಿದೆ.
ಆಸ್ಟ್ರೇಲಿಯವು ಒಂದು ಹಂತದಲ್ಲಿ 16 ರನ್ಗಳನ್ನು ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಆಗ ಮಾರ್ಶ್ ಮತ್ತು ಸ್ಟೀವ್ ಸ್ಮಿತ್ ಜೊತೆಗೂಡಿ ಐದನೇ ವಿಕೆಟ್ಗೆ ಅಮೂಲ್ಯ 153 ರನ್ಗಳ ಭಾಗೀದಾರಿಕೆ ನಿಭಾಯಿಸಿದರು. ಸ್ಮಿತ್ ಅರ್ಧ ಶತಕ (50) ಬಾರಿಸಿ ದಿನದ ಕೊನೆಯ ಓವರ್ನಲ್ಲಿ ನಿರ್ಗಮಿಸಿದರು.
16 ರನ್ ಗಳಿಸಿರುವ ಅಲೆಕ್ಸ್ ಕ್ಯಾರಿ ಕ್ರೀಸ್ನಲ್ಲಿದ್ದಾರೆ.
ಶಹೀನ್ ಶಾ ಅಫ್ರಿದಿ ಮತ್ತು ಮಿರ್ ಹಂಝ ತಲಾ ಮೂರು ವಿಕೆಟ್ಗಳನ್ನು ಉರುಳಿಸಿ ಪಾಕಿಸ್ತಾನದ ಯಶಸ್ವಿ ಬೌಲರ್ ಗಳಾಗಿ ಹೊರಹೊಮ್ಮಿದರು.
ಮಾರ್ಶ್ 20ರಲ್ಲಿದ್ದಾಗ ಅವರು ನೀಡಿದ ಕ್ಯಾಚನ್ನು ಸ್ಲಿಪ್ನಲ್ಲಿ ಅಬ್ದುಲ್ಲಾ ಶಫೀಕ್ ಕೈಚೆಲ್ಲಿದರು. ಅದು ಪಂದ್ಯಕ್ಕೆ ತಿರುವನ್ನು ನೀಡಿತು. ನಂತರ ಮಾರ್ಶ್ ಹಿಂದಿರುಗಿ ನೋಡಲಿಲ್ಲ. ಆದರೆ ಶತಕ ಪೂರ್ಣಗೊಳಿಸಲು ನಾಲ್ಕು ರನ್ ಬೇಕಾಗಿದ್ದಾಗ ನಿರ್ಗಮಿಸಿದರು.
ಆರಂಭಿಕ ಉಸ್ಮಾನ್ ಖ್ವಾಜ ಶೂನ್ಯಕ್ಕೆ ನಿರ್ಗಮಿಸಿದರೆ, ಡೇವಿಡ್ ವಾರ್ನರ್ 6 ರನ್ಗಳ ಕೊಡುಗೆ ನೀಡಿದರು. ಬಳಿಕ ಮಾರ್ನಸ್ ಲಾಬುಶಾನ್ 4 ರನ್ ಮಾಡಿದರು. ಬಳಿಕ ಟ್ರಾವಿಸ್ ಹೆಡ್ ಕೂಡ ಶೂನ್ಯಕ್ಕೆ ವಾಪಸಾದರು.
ಇದಕ್ಕೂ ಮುನ್ನ, ಪಾಕಿಸ್ತಾನವು 6 ವಿಕೆಟ್ಗಳ ನಷ್ಟಕ್ಕೆ 194 ರನ್ ಇದ್ದಲ್ಲಿಂದ ತನ್ನ ಮೊದಲ ಇನಿಂಗ್ಸನ್ನು ಮುಂದುವರಿಸಿತು.
ಆಸ್ಟ್ರೇಲಿಯ ಬೌಲರ್ ಗಳ ತೀಕ್ಷ್ಣ ದಾಳಿಯನ್ನು ಎದುರಿಸಿ ಮುಹಮ್ಮದ್ ರಿಝ್ವಾನ್ 51 ಎಸೆತಗಳಲ್ಲಿ 42 ರನ್ಗಳನ್ನು ಸಿಡಿಸಿದರು.
ಅಂತಿಮವಾಗಿ 264 ರನ್ಗಳಿಗೆ ಪಾಕಿಸ್ತಾನ ತನ್ನ ಇನಿಂಗ್ಸ್ ಮುಕ್ತಾಯಗೊಳಿಸಿತು.
ಆಸ್ಟ್ರೇಲಿಯ ನಾಯಕ ಪ್ಯಾಟ್ ಕಿಮಿನ್ಸ್ 48 ರನ್ಗಳನ್ನು ನೀಡಿ 5 ವಿಕೆಟ್ಗಳನ್ನು ಉರುಳಿಸಿದರೆ, ನತಾನ್ ಲಯೋನ್ 73 ರನ್ಗಳನ್ನು ಕೊಟ್ಟು 4 ವಿಕೆಟ್ಗಳನ್ನು ಪಡೆದರು.
ಡೇವಿಡ್ ವಾರ್ನರ್ ಗೆ ಪ್ರೇಕ್ಷಕರಿಂದ ಗೌರವಯುತ ವಿದಾಯ
ಆಸ್ಟ್ರೇಲಿಯ ಕ್ರಿಕೆಟಿಗ ಡೇವಿಡ್ ವಾರ್ನರ್ ಗುರುವಾರ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ತನ್ನ ಟೆಸ್ಟ್ ಬದುಕಿನ ಕೊನೆಯ ಇನಿಂಗ್ಸ್ ಆಡಿದರು. ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಅವರಿಗೆ ಗೌರವ ಸಲ್ಲಿಸಿದರು.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ವಾರ್ನರ್ ಮೊದಲ ಇನ್ನಿಂಗ್ಸ್ ನಲ್ಲಿ 38 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 6 ರನ್ಗಳನ್ನು ಗಳಿಸಿದ್ದಾರೆ. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ಅವರು ಶತಕ ಬಾರಿಸಿದ್ದರು.
ವಾರ್ನರ್ ದ್ವಿತೀಯ ಇನ್ನಿಂಗ್ಸ್ ನಲ್ಲಿ ಔಟಾಗಿ ಪೆವಿಲಿಯನ್ಗೆ ನಿರ್ಗಮಿಸುವಾಗ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಆಗ ಭಾವಪರವಶರಾದಂತೆ ಕಂಡುಬಂದ ವಾರ್ನರ್ ತನ್ನ ಬ್ಯಾಟನ್ನು ಪ್ರೇಕ್ಷಕರತ್ತ ಬೀಸಿದರು.
ಈ ಸಂದರ್ಭದಲ್ಲಿ ಓರ್ವ ಯುವ ಅಭಿಮಾನಿಗೆ ತನ್ನ ಬ್ಯಾಟಿಂಗ್ ಗ್ಲೌಸ್ ಗಳನ್ನು ನೀಡಿದರು.
2ನೇ ಗರಿಷ್ಠ ರನ್ಗಳ ಸರದಾರ
ವಾರ್ನರ್ ಬುಧವಾರ ಸ್ಟೀವ್ ವಾ ಅವರನ್ನು ಹಿಂದಿಕ್ಕಿ, ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯ ಕ್ರಿಕೆಟಿಗನಾಗಿ ದಾಖಲೆ ನಿರ್ಮಿಸಿದ್ದಾರೆ.
371 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ವಾರ್ನರ್, 42.56ರ ಸರಾಸರಿಯಲ್ಲಿ 18,515 ರನ್ಗಳನ್ನು ಗಳಿಸಿದ್ದಾರೆ. ಅದರಲ್ಲಿ 49 ಶತಕ ಮತ್ತು 93 ಅರ್ಧ ಶತಕಗಳಿವೆ. ಅವರ ಶ್ರೇಷ್ಠ ಸ್ಕೋರ್ 335 ಅಜೇಯ.
ಸ್ಟೀವ್ ವಾ 493 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ 41.65ರ ಸರಾಸರಿಯಲ್ಲಿ 18,496 ರನ್ಗಳನ್ನು ಗಳಿಸಿದ್ದಾರೆ. ಅದರಲ್ಲಿ 35 ಶತಕಗಳು ಮತ್ತು 95 ಅರ್ಧ ಶತಕಗಳಿವೆ.
ಮೊದಲನೇ ಸ್ಥಾನದಲ್ಲಿ ಮಾಜಿ ನಾಯಕ ರಿಕಿ ಪಾಂಟಿಂಗ್ ಇದ್ದಾರೆ. ಅವರು 559 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ 45.84ರ ಸರಾಸರಿಯಲ್ಲಿ 27,368 ರನ್ಗಳನ್ನು ಗಳಿಸಿದ್ದಾರೆ. ಅದರಲ್ಲಿ 70 ಶತಕಗಳು ಮತ್ತು 146 ಅರ್ಧ ಶತಕಗಳಿವೆ.
ತೃತೀಯ ಅಂಪೈರ್ ನಾಪತ್ತೆ!
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ಮತ್ತು ಪಾಕಿಸ್ತಾನ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ನ ಮೂರನೇ ದಿನವಾದ ಗುರುವಾರ ತೃತೀಯ ಅಂಪೈರ್ ನಾಪತ್ತೆಯಾಗಿ ಕುತೂಹಲ ಸೃಷ್ಟಿಸಿದರು.
ತೃತೀಯ ಅಂಪೈರ್ ರಿಚರ್ಡ್ ಇಲಿಂಗ್ವರ್ತ್ “ನಾಪತ್ತೆ”ಯಾದ ಹಿನ್ನೆಲೆಯಲ್ಲಿ ಭೋಜನ ವಿರಾಮಾನಂತರದ ಆಟದ ಆರಂಭವನ್ನು ಮುಂದೂಡಲಾಯಿತು. ಈ ಘಟನೆಯು ಮೈದಾನದಲ್ಲಿ ಹಲವು ತಮಾಷೆಗಳಿಗೆ ಕಾರಣವಾಯಿತು.
ಭೋಜನ ವಿರಾಮದ ಬಳಿಕ, ಆಟಗಾರರು ಮೈದಾನದಿಂದ ಹೊರನಡೆದರು ಹಾಗೂ ಆಟವನ್ನು ಕೆಲವು ನಿಮಿಷಗಳವರೆಗೆ ಮುಂದೂಡಲಾಯಿತು.
ಇಲಿಂಗ್ವರ್ತ್ ತನ್ನ ಸ್ಥಾನಕ್ಕೆ ಬಂದಿಲ್ಲ ಎಂಬುದಾಗಿ ಮೈದಾನದ ಅಂಪಯರ್ ಗಳಾದ ಜೋಯಲ್ ವಿಲ್ಸನ್ ಮತ್ತು ಮೈಕಲ್ ಗೂಫ್ರಿಗೆ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ, “ತೃತೀಯ ಅಂಪೈರ್ ಲಿಫ್ಟ್ನಲ್ಲಿ ಸಿಕ್ಕಿ ಹಾಕಿಕೊಂಡಿರುವುದರಿಂದ ಆಟ ವಿಳಂಬಗೊಂಡಿದೆ’’ ಎಂದು ಕ್ರಿಕೆಟ್ ಆಸ್ಟ್ರೇಲಿಯ ಸಾಮಾಜಿಕ ಮಾಧ್ಯಮ ’x’ ನಲ್ಲಿ ಬರೆಯಿತು.
ಊಟ ಮಾಡುವ ಸ್ಥಳದಿಂದ ತನ್ನ ಸ್ಥಾನಕ್ಕೆ ಬರುವಾಗ ತೃತೀಯ ಅಂಪೈರ್ ಎಲವೇಟರ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.
ಬದಲಿ ತೃತೀಯ ಅಂಪೈರ್ ಫಿಲಿಪ್ ಗಿಲೆಸ್ಪಿ ಇಲಿಂಗ್ವರ್ತ್ರ ಆಸನದತ್ತ ಧಾವಿಸಿದರು. ಕೊನೆಗೂ, ಕೆಲವು ಕ್ಷಣಗಳ ಬಳಿಕ, ಇಲಿಂಗ್ವರ್ತ್ ಎಲವೇಟರ್ ನಿಂದ ಹೊರಬಂದು ತನ್ನ ಆಸನದತ್ತ ತೆರಳಿದರು. ಆಟ ಮುಂದುವರಿಯಿತು.
“ರಿಚರ್ಡ್ ಇಲಿಂಗ್ವರ್ತ್ ಪ್ರತ್ಯಕ್ಷರಾಗಿದ್ದಾರೆ!’’ ಎಂದು ಕ್ರಿಕೆಟ್ ಆಸ್ಟ್ರೇಲಿಯ ‘x’ನಲ್ಲಿ ಬರೆಯಿತು.