ಮ್ಮಾಮ್ (ಸೌದಿ ಅರೇಬಿಯಾ) : ಇಲ್ಲಿನ ಸಫ್ವಾದಲ್ಲಿ ಇಂದು (ಫೆಬ್ರವರಿ 8) ಸಂಜೆ 7ರಿಂದ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ ಎಂದು ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.
ಕರ್ನಾಟಕ ರಾಜ್ಯ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಪೌರಾಡಳಿತ ಮತ್ತು ಹಚ್ ಖಾತೆ ಸಚಿವ ರಹೀಂ ಖಾನ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ, ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಡಾ. ಸುಹೇಲ್ ಅಜಾಜ್ ಖಾನ್, ಅನಿವಾಸಿ ಕನ್ನಡಿಗರ ಕೋಶದ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಶಾಸಕರಾದ ಅಶೋಕ್ ಕುಮಾರ್ ರೈ, ಬಿ.ಎಂ. ಫಾರೂಕ್, ಸಾಹಿತಿ ಎಸ್‌ಐ ಸಿದ್ದರಾಮಯ್ಯ, ಉದ್ಯಮಿಗಳಾದ ಝಕರಿಯಾ ಜೋಕಟ್ಟೆ, ಶೇಖ್ ಕರ್ನಿರೆ, ಇಬ್ರಾಹೀಂ ಹುಸೇನ್, ಅಬ್ದುಲ್ ನಿಶಾನ್, ಪದ್ಮರಾಜ್ ಆರ್. ಮತ್ತಿತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ, ದಫ್ ಪ್ರದರ್ಶನ, ಸಾಂಸ್ಕೃತಿಕ ಕಾಯರ್ಕ್ರಮಗಳು, ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಆಹಾರ ಮಳಿಗೆಗಳು ಸಮ್ಮೇಳನದ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.
ಕನ್ನಡ ಸಂಸ್ಕೃತಿಯ ವೈಭವವನ್ನು ಹರಡುವ ಮತ್ತು ಅನಿವಾಸಿ ಕನ್ನಡಿಗರನ್ನು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯೆಡೆಗೆ ಕರೆದೊಯ್ಯುವ ಉದ್ದೇಶವನ್ನು ಹೊಂದಿರುವ ಈ ಐತಿಹಾಸಿಕ ಸಮ್ಮೇಳನವನ್ನು ಸೌದಿ ಅರೇಬಿಯಾದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದ್ದಾರೆ.