‘ಇತರ ಹಿಂದುಳಿದ ವರ್ಗಗಳು’ (Other Backward Classes -OBC)ಎಂಬ ಪದ ಗುಚ್ಛವನ್ನು ಸಂವಿಧಾನದಲ್ಲಿ ಎಲ್ಲೂ ಉಪಯೋಗಿಸಿಲ್ಲ. ಅನುಚ್ಛೇದ 15(4) ಮತ್ತು 340ರಲ್ಲಿ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು’ ಎಂಬ ನುಡಿಗಟ್ಟುಗಳನ್ನು ಬಳಸಲಾಗಿದೆ. ಅನುಚ್ಛೇದ 16(4)ರಲ್ಲಿಯೂ ಹಿಂದುಳಿದ ವರ್ಗ ಎಂದು ಬಳಸಲಾಗಿದೆ. ಆದರೆ ಈ ಪದಗಳ ಅರ್ಥ ವಿವರಣೆಯನ್ನು ಸಂವಿಧಾನದಲ್ಲಿ ಎಲ್ಲಿಯೂ ಹೇಳಲಾಗಿಲ್ಲ. ಕೆಲವೊಮ್ಮೆ ಎರಡೂ ಪದಗಳ ನಡುವೆ ಯಾವುದೇ ನಿಜವಾದ ವ್ಯತ್ಯಾಸವಿಲ್ಲ ಎಂದು ಪ್ರತಿಪಾದಿಸಲಾಗಿದೆ. ಆದರೆ ಎರಡು ನಿಬಂಧನೆಗಳ ಅಡಿಯಲ್ಲಿ ಹಿಂದುಳಿದಿರುವಿಕೆಯ ವ್ಯಾಪ್ತಿಯನ್ನು ಪ್ರತ್ಯೇಕಿಸುವ ನಿದರ್ಶನಗಳಿವೆ. ಪ್ರಾಯೋಗಿಕವಾಗಿ ನಿಯಮಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ. ಮತ್ತು ಹಿಂದುಳಿದ ವರ್ಗಗಳು ಎಂಬುದು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ನಂತರ ಮೀಸಲಾತಿ ನೀತಿಯ ಫಲಾನುಭವಿಗಳ ಮೂರನೇ ಗುಂಪು ಅಥವಾ ವರ್ಗವನ್ನು ಪ್ರತಿನಿಧಿಸುತ್ತದೆ.
ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಂತಲ್ಲದೆ, ಮೊದಲಿಗೆ ಕೇಂದ್ರೀಕೃತವಾಗಿರಲಿಲ್ಲ. ತಮ್ಮದೇ ಆದ ಫಲಾನುಭವಿಗಳನ್ನು ಸಾಮಾನ್ಯವಾಗಿ ಬಳಕೆಯಲ್ಲಿರುವ ನಿಯಮಗಳನ್ವಯ ನಿರ್ಧರಿಸಲು ರಾಜ್ಯಗಳಿಗೆ ವಹಿಸಲಾಗಿತ್ತು. ಆನಂತರ ಹಲವಾರು ಕಾನೂನು ಸಂಬಂಧಿತ ಪ್ರಶ್ನೆಗಳು ಉದ್ಭವಿಸಿ ಹಲವಾರು ದೃಷ್ಟಿಕೋನಗಳ ಮೇಲೆ ಮಿತಿಯನ್ನು ಆಖ್ಯಾನಿಸಲು ನ್ಯಾಯಾಲಯವು ಮಧ್ಯ ಪ್ರವೇಶಿಸುವ ಅಗತ್ಯ ಇದ್ದೇ ಇದೆ. ಅನೇಕ ನ್ಯಾಯಾಂಗ ವ್ಯಾಖ್ಯಾನಗಳ ನಂತರ ‘ಜಾತಿ’ಯ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ನಿರ್ಧರಿಸುವುದನ್ನು ಪ್ರಾಥಮಿಕ ಮಾನದಂಡವಾಗಿ ಪರಿಗಣಿಸಿದೆ. ಹಾಗೆಯೇ ನ್ಯಾಯಾಲಯವು ಮೀಸಲಾತಿ ಪ್ರಮಾಣವನ್ನು ಒಟ್ಟು ಸ್ಥಾನಗಳ ಪ್ರತಿಶತ 50ರ ಮಿತಿಗೊಳಪಡಿಸಿದೆ. ಸದ್ಯ ಸಂವಿಧಾನದ ತಿದ್ದುಪಡಿಯಿಂದಾಗಿ ಆರ್ಥಿಕ ದುರ್ಬಲ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ನಿಗದಿಗೊಳಿಸಿ, ಶೇ.50ರ ಮಿತಿ ಮೀರಲಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಪ್ರಾಥಮಿಕ ಗುರುತಾಗಿ ‘ಜಾತಿ’ಯನ್ನು ಅನುಮೋದಿಸಿದ ನಂತರದ ಪರಿಣಾಮವು ವರ್ಗರಹಿತ ಸಮಾಜದ ಸಾಂವಿಧಾನಿಕ ದೃಷ್ಟಿಗೆ ವಿರುದ್ಧವಾಗಿ ಹೊರನೋಟಕ್ಕೆ ಹಿಂದುಳಿದ ವರ್ಗಗಳ ಮೀಸಲಾತಿಯ ಸ್ಥಾನದಲ್ಲಿ ಬದಲಾವಣೆಯನ್ನು ಕಂಡಿತು. ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದ ಹಲವಾರು ವಿಷಯಗಳು ಬೆಳಕಿಗೆ ಬಂದಿವೆ. ಇದು ಸಹ ಹಲವಾರು ಜಾತಿಗಳ ಸೇರ್ಪಡೆಗಾಗಿ ಮುಂದಿರುವ ಬೇಡಿಕೆಯೇ ಆಗಿರುವಂಥದ್ದು, ರಾಜಕೀಯ ಲಾಭಕ್ಕಾಗಿ ಮೀಸಲಾತಿ ನೀತಿಗಳನ್ನು ಬಳಸಿಕೊಳ್ಳುವ ಸರಕಾರದ ಪುನರಾವರ್ತಿತ ಪ್ರಯತ್ನಗಳು ಇತ್ಯಾದಿ. ಅಂತಹ ಸಮಸ್ಯೆಗಳ ಇತ್ಯರ್ಥಕ್ಕಾಗಿ ನ್ಯಾಯಾಲಯಗಳನ್ನು ಯಥಾಪ್ರಕಾರ ಸಂಪರ್ಕಿಸಲಾಗುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ನೀತಿಯ ದುರುಪಯೋಗವನ್ನು ತಡೆಯುವ ಪ್ರಾಧಿಕಾರವಾಗಿ ಅದು ಕಾರ್ಯ ನಿರ್ವಹಿಸಿದೆ. ಹಿಂದುಳಿದ ವರ್ಗಗಳ ಮೀಸಲಾತಿಯ ಪ್ರಸಕ್ತ ಸ್ಥಾನವು ಸಾಂವಿಧಾನಿಕ ದೃಷ್ಟಿಯೊಂದಿಗೆ ಸ್ಪಷ್ಟವಾಗಿ ಮೇಳವಿಸಿಲ್ಲ, ಜೊತೆಗೆ ಗಂಭೀರ ಪರಿಶೀಲನೆಯ ಅಗತ್ಯವಂತೂ ಇದೆ.
ಹಿಂದುಳಿದ ವರ್ಗಗಳನ್ನು ಗುರುತಿಸುವುದು
ಹಿಂದುಳಿದ ವರ್ಗಗಳನ್ನು ಗುರುತಿಸುವುದು ಮೀಸಲಾತಿ ನೀತಿಯ ಅತ್ಯಂತ ಸವಾಲಿನ ಅಂಶಗಳಲ್ಲಿ ಒಂದಾಗಿದೆ. ಸಂವಿಧಾನದ ಆರಂಭದ ಮೊದಲು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ವಿಶೇಷ ಸೌಕರ್ಯಕ್ಕೆ ಒಳಪಡಿಸುವ ಫಲಾನುಭವಿಗಳನ್ನು ‘ಹಿಂದುಳಿದ ವರ್ಗಗಳು’ ಎಂದು ವರ್ಗೀಕರಿಸಲಾಯಿತು. ಈ ನುಡಿಗಟ್ಟು ವಿವಿಧ ಸ್ಥಳಗಳಲ್ಲಿ ವಿಭಿನ್ನ ಅರ್ಥಗಳನ್ನು ಹೊಂದಿತ್ತು. ಉದಾಹರಣೆಗೆ ಮೈಸೂರು ಸಂಸ್ಥಾನದ ಸರಕಾರವು ನೇಮಿಸಿದ ಮಿಲ್ಲರ್ ಸಮಿತಿಯು ಬ್ರಾಹ್ಮಣರನ್ನು ಹೊರತುಪಡಿಸಿ ಎಲ್ಲಾ ಸಮುದಾಯಗಳನ್ನು ಹಿಂದುಳಿದ ವರ್ಗಗಳು ಎಂದು ನಿರ್ಧರಿಸಿತು. ಆದರೆ 1928ರಲ್ಲಿ ಬಾಂಬೆ ಸರಕಾರವು ಒ.ಎ.ಬಿ. ಸ್ಟಾರ್ಟೆ ಅವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿದ ಸಮಿತಿಯು ತನ್ನ 1930ರ ವರದಿಯಲ್ಲಿ ಹಿಂದುಳಿದ ವರ್ಗಗಳನ್ನು(ಎ) ನಿಮ್ನ ವರ್ಗ (ಬಿ) ಮೂಲ ನಿವಾಸಿಗಳು ಮತ್ತು ಗುಡ್ಡಗಾಡು ಬುಡಕಟ್ಟುಗಳು ಮತ್ತು (ಸಿ) ಇತರ ಹಿಂದುಳಿದ ವರ್ಗಗಳು ಎಂದು ವರ್ಗೀಕರಿಸಿದೆ. ಆದ್ದರಿಂದ ಹಿಂದುಳಿದ ವರ್ಗಗಳು ಎಂಬ ನುಡಿಗಟ್ಟು ಸಂವಿಧಾನ ಜಾರಿಯ ಮೊದಲು ಯಾವುದೇ ನಿರ್ದಿಷ್ಟ ಅರ್ಥವನ್ನು ಹೊಂದಿರಲಿಲ್ಲ. ಕೆಲವೊಮ್ಮೆ ಹಿಂದುಳಿದ ವರ್ಗಗಳು ಅಸ್ಪಶ್ಯತೆಯನ್ನು ಮಾತ್ರ ಸೂಚಿಸುತ್ತಿತ್ತು. ಆದರೆ ಇತರ ಸಂದರ್ಭಗಳಲ್ಲಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರ ಬಹು ಭಾಗವನ್ನು ಸೇರಿಸುವುದು ವ್ಯಾಪಕವಾಗಿತ್ತು.
ಸಂವಿಧಾನ ಸಭೆಯ ಚರ್ಚೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜೊತೆಗೆ ಹಿಂದುಳಿದ ವರ್ಗಗಳೆಂದು ಯಾರನ್ನು ಸೇರಿಸಬೇಕೆಂಬುದನ್ನು ಬಹಿರಂಗ ಪಡಿಸಲಿಲ್ಲ. ಹಿಂದುಳಿದ ವರ್ಗಗಳನ್ನು ಗುರುತಿಸುವುದು ಅಂತಿಮವಾಗಿ ಅವರ ಪರಿಸ್ಥಿತಿಗಳ ಆಧಾರದ ಮೇಲೆ ರಾಜ್ಯ ಸರಕಾರಗಳ ವಿವೇಚನೆಗೆ ಬಿಡಲಾಯಿತು. ಆದಾಗ್ಯೂ, ಸಂವಿಧಾನ ಸಭೆಯ ಕೆಲವು ಸದಸ್ಯರ ಹೇಳಿಕೆಗಳಿಂದ ಆ ಕುರಿತು ಸುಳಿವನ್ನು ಪಡೆಯಬಹುದು. ಚಂದ್ರಿಕಾ ರಾಮ್ ಅವರ ದೃಷ್ಟಿಕೋನದ ಪ್ರಕಾರ, ಅವರು ಹಿಂದೂ ಸಮಾಜದ ಮಧ್ಯಮ ವರ್ಗವನ್ನು ಅಂದರೆ ಮೇಲ್ಜಾತಿ ಹಿಂದುಗಳು ಮತ್ತು ಅಸ್ಪಶ್ಯರ ನಡುವೆ ಇರುವವರು ಹಿಂದುಳಿದ ವರ್ಗಗಳು ಎಂದು ಪರಿಗಣಿಸಿದ್ದಾರೆ. ಮತ್ತೊಂದೆಡೆ ಟಿ. ಚೆನ್ನಯ್ಯ ಅವರ ಹೇಳಿಕೆಗಳಲ್ಲಿ ಗಮನಿಸಬಹುದಾದ ಅಂಶವೆಂದರೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನರನ್ನು ಹಿಂದುಳಿದ ವರ್ಗವೆಂದು ಕರೆಯಬಹುದೆಂದು ಸೂಚಿಸಿರುವುದು.
ಅನುಚ್ಛೇದ 15(4)ಅನ್ನು ಪರಿಚಯಿಸಿದ ಮೊದಲ ಸಾಂವಿಧಾನಿಕ ತಿದ್ದುಪಡಿ ಮಸೂದೆ ,1951ರ ಚರ್ಚೆಯ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅನುಚ್ಛೇದ 16(4) ಅನ್ನು ಉಲ್ಲೇಖಿಸುವಾಗ ಹಿಂದುಳಿದ ವರ್ಗಗಳು ಕೆಲವು ಜಾತಿಗಳ ಸಂಗ್ರಹವಲ್ಲದೆ ಬೇರೇನೂ ಅಲ್ಲ ಎಂದು ಹೇಳಿದರು. ಇದಲ್ಲದೆ ಅನುಚ್ಛೇದ 15(4) ಯಾವುದೇ ಗುರುತಿಸುವ ಮಾನದಂಡಗಳನ್ನು ನಿರ್ದಿಷ್ಟ ಪಡಿಸದೆಯೇ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ’ ಹಿಂದುಳಿದ ವರ್ಗ ಎಂಬ ನುಡಿಗಟ್ಟನ್ನು ಪರಿಚಯಿಸಿತು.
ಹಿಂದುಳಿದ ವರ್ಗಗಳನ್ನು ಗುರುತಿಸುವ ಮಾನದಂಡಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಸೂಕ್ತವಾದ ಮಾನದಂಡವನ್ನು ಕಂಡು ಹಿಡಿಯಲು ಸರಕಾರಗಳು ಆಯೋಗಗಳು ಮತ್ತು ಸಮಿತಿಗಳನ್ನು ನೇಮಿಸಿದವು.
ಕೇಂದ್ರೀಯ ಆಯೋಗಗಳ ವರದಿಗಳು
ಸಂವಿಧಾನದ 340ನೇ ವಿಧಿಯ ಪ್ರಕಾರ ಕೇಂದ್ರ ಸರಕಾರವು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿಯನ್ನು ತನಿಖೆ ಮಾಡಲು ಆಯೋಗವನ್ನು ನೇಮಿಸುತ್ತದೆ. ಮೇಲಿನ ನಿಬಂಧನೆಗೆ ಅನುಗುಣ ವಾಗಿ ಕೇಂದ್ರ ಸರಕಾರವು ಈತನಕ ಎರಡು ಆಯೋಗಗಳನ್ನು ನೇಮಿಸಿದೆ.
ಮೊದಲನೇ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ಜನವರಿ 29, 1953ರಂದು ಕೇಂದ್ರ ಸರಕಾರ ನೇಮಿಸಿತು. ಪರಿಶೀಲನಾಂಶಗಳ ಪ್ರಕಾರ ಆಯೋಗವು ಮುಖ್ಯವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ನಿರ್ಧರಿಸುವ ಕುರಿತು ಮಾನದಂಡ ಗುರುತಿಸುವ ಅಗತ್ಯ ಮತ್ತು ಆ ಮಾನದಂಡಗಳ ಆಧಾರದ ಮೇಲೆ ಅಂತಹ ವರ್ಗಗಳ ಪಟ್ಟಿಯನ್ನು ಸಿದ್ಧಪಡಿಸುವುದು. ಇದಲ್ಲದೆ ಆಯೋಗವು ಅವರ ಸ್ಥಿತಿಗತಿಗಳನ್ನು ತನಿಖೆ ಮಾಡಲು ಮತ್ತು ಅವರ ಪರಿಸ್ಥಿತಿಗಳನ್ನು ಸುಧಾರಿಸಲು ಸರಕಾರವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಮಾಡುವುದು. ಆಯೋಗ ವರದಿಯನ್ನು ಮಾರ್ಚ್ 30, 1955ರಂದು ಸರಕಾರಕ್ಕೆ ಸಲ್ಲಿಸಿತು.
ಆಯೋಗವು ಮೌಲ್ಯಮಾಪನದ ನಂತರ ಹಿಂದುಳಿದಿರುವಿಕೆಯನ್ನು ವ್ಯಾಖ್ಯಾನಿಸುವ ಮಾನದಂಡವಾಗಿ ‘ಜಾತಿ’ಯನ್ನು ಪರಿಗಣಿಸಿತು, ಅದನ್ನು ತಪ್ಪಿಸಲು ಪ್ರಯತ್ನಿಸಿದ್ದರೂ ಪ್ರಸಕ್ತ ಚಾಲ್ತಿಯಲ್ಲಿರುವ ಪರಿಸ್ಥಿತಿಗಳಲ್ಲಿ ಜಾತಿಗಳನ್ನು ನಿರ್ಲಕ್ಷಿಸಲು ಕಷ್ಟವಾಯಿತು ಎಂದು ಆಯೋಗವೇ ಹೇಳಿಕೊಂಡಿದೆ. ಆಯೋಗವು, ಆರ್ಥಿಕ ಹಿನ್ನಡೆಯು ಹೆಚ್ಚು ಪರಿಣಾಮ ಬೀರಿದೆಯೇ ಹೊರತು, ಸಾಮಾಜಿಕ ಅನಿಷ್ಟಗಳು ಕಾರಣವಲ್ಲ ಎಂದು ಪರಿಗಣಿಸಿದೆ. ಆದ್ದರಿಂದ ಆಯೋಗವು ಜಾತಿಯ ಮೇಲೆ ಸ್ಥಾಪಿತವಾದ ಸಾಮಾಜಿಕ ಕ್ರಮಾನುಗತದಲ್ಲಿ ತನ್ನ ಉಲ್ಲೇಖದ ಪರಿಶೀಲನಾಂಶಗಳ ವ್ಯಾಖ್ಯಾನವನ್ನು ಸಮರ್ಥಿಸಿಕೊಂಡಿದೆ. ಈ ಮಾನದಂಡದ ಆಧಾರದ ಮೇಲೆ ಆಯೋಗವು 2,399 ಜಾತಿಗಳನ್ನು ಹಿಂದುಳಿದವು ಎಂದು ಗುರುತಿಸಿದೆ. ಅದರಲ್ಲಿ 837 ಜಾತಿಗಳನ್ನು ಅತ್ಯಂತ ಹಿಂದುಳಿದ ವರ್ಗವೆಂದು ವಿಂಗಡಿಸಿದೆ.
ಆದರೂ, ಆಯೋಗದ ಅಧ್ಯಕ್ಷರೇ ತಮ್ಮ ಹೊದಿಕೆಯ ಪತ್ರದಲ್ಲಿಯೇ ಹಿಂದುಳಿದಿರುವಿಕೆಯ ಮಾನದಂಡವಾಗಿ ‘ಜಾತಿ’ಯನ್ನು ಅಳವಡಿಸಿ ಕೊಂಡಿರುವುದರ ಬಗ್ಗೆ ವಿಷಾದಿಸಿದ್ದಾರೆ.
ವರದಿಗೆ ‘ಗೊಂದಲಮಯ ವರದಿ’ ಎಂಬ ಹಣೆ ಪಟ್ಟಿ ಕಟ್ಟಲಾಗಿದೆ, ಏಕೆಂದರೆ ಅದು ಕೇವಲ ಅಧ್ಯಕ್ಷರ ಅಭಿಪ್ರಾಯಗಳಿಂದಲ್ಲ, ಆದರೆ 11 ಮಂದಿ ಸದಸ್ಯರಲ್ಲಿ ಐವರು ಹಿಂದುಳಿದಿರುವಿಕೆಯನ್ನು ನಿರ್ಧರಿಸುವ ಮಾನದಂಡವಾಗಿ ಪರಿಗಣಿಸಿರುವ ‘ಜಾತಿ’ಯ ಕುರಿತು ಅಸಮ್ಮತಿ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲೂ ವರದಿಗೆ ಸಕಾರಾತ್ಮಕ ಮನ್ನಣೆ ಸಿಗಲಿಲ್ಲ. ಗೃಹ ಸಚಿವರು ಹಲವಾರು ನಿಯತಾಂಕಗಳ ಮೇಲಿನ ವರದಿಯನ್ನು ಹೆಚ್ಚು ಟೀಕಿಸಿದರು. ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಜಾತಿಯ ಮಾನದಂಡವು ಅತ್ಯಂತ ಸ್ಪಷ್ಟವಾಗಿದೆ. ಇದು ಅವರ ದೃಷ್ಟಿಯಲ್ಲಿ ಪ್ರತ್ಯೇಕವಾದದ ಅಪಾಯಕಾರಿ ಮತ್ತು ಪ್ರಗತಿಯ ಹಾದಿಯಲ್ಲಿ ದೊಡ್ಡ ಅಡಚಣೆಗೆ ಕಾರಣವಾಗುತ್ತದೆ. ಜಾತಿಯ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ವ್ಯತ್ಯಾಸವನ್ನು ಶಾಶ್ವತಗೊಳಿಸುತ್ತದೆ ಎಂಬುದಾಗಿತ್ತು.
ವರದಿ ಸಂಸತ್ತಿನಲ್ಲಿ ತಿರಸ್ಕೃತಗೊಂಡ ನಂತರ ಕೂಡಲೇ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ಕೇಂದ್ರ ಸರಕಾರ ರಚಿಸುವುದಿಲ್ಲ. ಸಾಂವಿಧಾನಿಕವಾಗಿ ಅವಕಾಶವಿದ್ದರೂ, ಹಿಂದುಳಿದ ವರ್ಗಗಳನ್ನು ಗುರುತಿಸಿ ವಿಧಿ 16(4)ರಂತೆ ಅವುಗಳಿಗೆ ಪ್ರಯೋಜನ ದೊರಕಿಸಿ ಕೊಡದಿದ್ದುದು ಆ ವರ್ಗಗಳಿಗೆ ಆದ ಬಹು ದೊಡ್ಡ ನಷ್ಟ. ಎರಡನೇ ಹಿಂದುಳಿದ ವರ್ಗಗಳ ಆಯೋಗದ ನೇಮಕಾತಿಗೆ ಸುಮಾರು 22 ವರ್ಷಗಳ ಕಾಲ ಕಾಯ ಬೇಕಾಗಿ ಬಂದದ್ದು ಆ ವರ್ಗಗಳ ದುರಂತ.
ಡಿಸೆಂಬರ್ 20, 1978ರಂದು ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ಸಂವಿಧಾನದ 340ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಪರಿಶೀಲನಾಂಶಗಳನ್ವಯ ಆಯೋಗವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಮಾನದಂಡಗಳನ್ನು ನಿರ್ಧರಿಸುತ್ತದೆ ಮತ್ತು ಅಂತಹ ಹಿಂದುಳಿದ ವರ್ಗಗಳ ನಾಗರಿಕರ ಪರವಾಗಿ ನೇಮಕಾತಿಗಳು ಅಥವಾ ಹುದ್ದೆಗಳ ಮೀಸಲಾತಿಗಾಗಿ ನಿಬಂಧನೆಗಳನ್ನು ಮಾಡುತ್ತದೆ ಹಾಗೂ ಅವರ ಪ್ರಗತಿಗೆ ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಒಕ್ಕೂಟ ಅಥವಾ ಯಾವುದೇ ರಾಜ್ಯ ಸಾರ್ವಜನಿಕ ಸೇವೆ ಮತ್ತು ಹುದ್ದೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಇಲ್ಲದಿದ್ದಲ್ಲಿ ಆಯೋಗ ಕ್ರಮವಹಿಸುವುದು. ಆಯೋಗ ಡಿಸೆಂಬರ್, 1980ರಲ್ಲಿ ವರದಿಯನ್ನು ಸಲ್ಲಿಸುತ್ತದೆ.
ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಜಾತಿಯನ್ನು ಮಾನದಂಡವಾಗಿ ಅಳವಡಿಸಿಕೊಂಡಿದೆ. ಆಯೋಗವು ವರ್ಗಗಳು ಮತ್ತು ಹಿಂದುಳಿದ ಜಾತಿಗಳು ಅಥವಾ ಅದೇ ಜನರು ಹಿಂದೂ ಸಮಾಜದ ಸಾಮಾಜಿಕ ಸಂಘಟನೆಯ ಮೂಲ ಘಟಕವಾಗಿರುವ ಜಾತಿಗಳು ಮಾತ್ರ ಸುಲಭವಾಗಿ ಮತ್ತು ಸ್ಪಷ್ಟವಾಗಿ ಗುರುತಿಸಬಹುದಾದ ಮತ್ತು ನಿರಂತರವಾದ ಸಮೂಹಗಳಾಗಿವೆ ಎಂದು ತೀರ್ಮಾನಿಸಿತು. ವರದಿಯು 3,743 ಜಾತಿಗಳನ್ನು ಹಿಂದುಳಿದಿವೆ ಎಂದು ಪಟ್ಟಿಮಾಡಿದೆ. ಎಲ್.ಆರ್. ನಾಯಕ್ ಅವರು ಜಾತಿ ಮಾನದಂಡವನ್ನೇನೋ ಒಪ್ಪಿಕೊಂಡರು. ಆದರೆ ಜಾತಿಗಳ ಉಪ-ವರ್ಗೀಕರಣಕ್ಕಾಗಿ ಒತ್ತಾಯಿಸಿ ಅಸಮ್ಮತಿ ಟಿಪ್ಪಣಿಯನ್ನು ನೀಡಿದ್ದರು.
ಆಯೋಗ ತನ್ನ ವರದಿಯಲ್ಲಿ ಶೇಕಡಾವಾರು ಜನಸಂಖ್ಯೆಯನ್ನು ಲೆಕ್ಕಾಚಾರ ಮಾಡಿದೆ. ಇತರ ಹಿಂದುಳಿದ ವರ್ಗಗಳ (ಹಿಂದೂ ಮತ್ತು ಹಿಂದೂ ಯೇತರರು) ಮೀಸಲಾತಿ ಕೋಟಾ ಸುಮಾರು ಶೇ. 52ರಷ್ಟಿರಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗಾಗಿ ಅಸ್ತಿತ್ವದಲ್ಲಿರುವ ಶೇ. 22.5ರಷ್ಟರೊಂದಿಗೆ ಹಿಂದುಳಿದ ವರ್ಗಗಳಿಗೆ ನಿಗದಿ ಮಾಡುವುದರಿಂದ ಶೇ. 50ರ ಮಿತಿಯನ್ನು ಮೀರಿ ಹೋಗುತ್ತದೆ. ಆದ್ದರಿಂದ ಆಯೋಗವು ಹಿಂದುಳಿದ ವರ್ಗಗಳಿಗೆ ಶೇ. 27ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು, ಸಾರ್ವಜನಿಕ ವಲಯದ ರಾಷ್ಟ್ರೀಕೃತ ಬ್ಯಾಂಕುಗಳು, ಎಲ್ಲಾ ಅಂಗ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಮೀಸಲಾತಿ ಅನ್ವಯಿಸುವಂತೆ ಶಿಫಾರಸು ಮಾಡಿದೆ.
ಮಂಡಲ್ ಆಯೋಗದ ವರದಿಯೂ ಕೇಂದ್ರ ತಳಹದಿಯಾಗಿ ಜಾತಿ ಟೀಕೆಗೆ ಒಳಗಾಗಿತ್ತು. ವರದಿಯನ್ನು ಅಪಹಾಸ್ಯ ಮಾಡಲಾಗಿದೆ.
ಪಾಲ್ಕಿವಾಲಾ ಜಾತೀಯತೆಯನ್ನು ಕ್ಯಾನ್ಸರ್‌ಗೆ ಹೋಲಿಸಿ ಇದನ್ನು ‘ಹಿಮಾಲಯನ್ ಪ್ರಮಾದ’ ಎಂದು ಉಲ್ಲೇಖಿಸಿದ್ದಾರೆ ಮತ್ತು ಅದರ ಅನುಷ್ಠಾನದ ವಿರುದ್ಧ ಎಚ್ಚರಿಕೆಯನ್ನೂ ನೀಡಿ ಇದು ಸಂವಿಧಾನದ ಮೂಲ ರಚನೆಯ ನಾಶಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ. ಅರುಣ್ ಶೌರಿ ಅವರು ಭಾರತದ ಸಂವಿಧಾನದ ಅಗತ್ಯಗಳಿಗೆ ವಿರುದ್ಧವಾಗಿ ಮಂಡಲ ವರದಿಯೂ ಜಾತಿಗಳೊಂದಿಗೆ ಪ್ರಾರಂಭವಾಗಿ ಮತ್ತು ಜಾತಿಗಳಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಿದರು. ರಾಮ್ ಜೇಠ್ಮಲಾನಿ ಮಾತ್ರ ವರ್ಗ ರಹಿತ ಸಮಾಜವನ್ನು ರಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಎಂದು ಮೀಸಲಾತಿಯನ್ನು ಪರಿಗಣಿಸಿ ಮಂಡಲ್ ವರದಿಯ ಅನುಷ್ಠಾನವು ನೆಪಮಾತ್ರದ ಪ್ರಜಾ ಪ್ರಭುತ್ವದ ಗುರಿಯನ್ನು ಬದಲಿಸುವ ಧೀರ ಹೋರಾಟವಾಗಿದೆ ಎಂದು ಸ್ವಾಗತಿಸಿದ್ದಾರೆ.
ಟೀಕೆಯ ಮತ್ತೊಂದು ಅಂಶವೆಂದರೆ ಆಯೋಗವು ತನ್ನ ಮುಂದೆ ಭಾರತೀಯ ಜನ ಸಂಖ್ಯೆಯು ಜಾತಿವಾರು ದತ್ತಾಂಶವನ್ನು 1931ರ ಜನಗಣತಿ ಮೇಲೆ ಶೇ.52 ರಷ್ಟು ಅಂಕಿ ಅಂಶದ ಪರಿಹಾರವನ್ನು ಹೊಂದಿರುವುದು ಸರಿಯಲ್ಲ. ಸುಮಾರು 48 ವರ್ಷಗಳ ಹಿಂದೆ ಸಿದ್ಧಪಡಿಸಿದ್ದ ದತ್ತಾಂಶದ ಮೇಲಿನ ಅವಲಂಬನೆಯೂ ವರ್ಗೀಕರಣಕ್ಕೆ ವೈಜ್ಞಾನಿಕ ಆಧಾರವನ್ನು ಒದಗಿಸಿಲ್ಲ ಎಂಬುದು.
ಇಂಥ ಟೀಕೆಗಳೆಲ್ಲವೂ ತಳಸಮುದಾಯಗಳ ತಜ್ಞರಿಂದ ಬಂದಿರುವುದಿಲ್ಲ ಎಂಬುದನ್ನೂ ನಾವು ನೆನಪಿಡಬೇಕು. ಕೊನೆಗೂ 1990-93ರಲ್ಲಿ ವರದಿ ಜಾರಿಗೊಳ್ಳುತ್ತದೆ. ಅದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ, ಸರ್ವೋಚ್ಚ ನ್ಯಾಯಾಲಯದಲ್ಲೂ, ವರದಿಯನ್ನು ಎತ್ತಿ ಹಿಡಿದದ್ದು ಹಿಂದುಳಿದ ವರ್ಗಗಳಿಗೆ ಸಂದ ಜಯ.
ಮಂಡಲ್ ವರದಿ ಜಾರಿಗೆ ಬರುವ ಸುಮಾರು ಎರಡು-ಮೂರು ದಶಕಗಳಷ್ಟು ಹಿಂದೆಯೇ, ಹಿಂದುಳಿದ ವರ್ಗಗಳೇ ಇಲ್ಲದ ಒಂದೆರಡು ಚಿಕ್ಕ ರಾಜ್ಯಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೆ ತಂದಿವೆ. ಎಂದಿನಂತೆ ಅನರ್ಹ ಬಲಿಷ್ಠರು ಒಳ ಸೇರಲೂ ಸರಕಾರಕ್ಕೆ ಅವಿರತ ತಲೆ ಬೇನೆ ಉಂಟು ಮಾಡುತ್ತಲೇ ಇದ್ದಾರೆ. ಸರಕಾರಗಳೂ ಕೂಡ ತುತ್ತನ್ನು ಇತ್ತ ನುಂಗಲೂ ಆಗದೇ ಅತ್ತ ಉಗುಳಲೂ ಆಗದೇ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿ ಇವೆ.