ಹೊಸದಿಲ್ಲಿ: ಉಜ್ಜಯಿನಿ ಮಾಸ್ಟರ್‌ಪ್ಲಾನ್‌ನಲ್ಲಿ ದೊಡ್ಡ ಪ್ರಮಾಣದ ದುರ್ಬಳಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಮೋಹನ್ ಯಾದವ್ ಅವರನ್ನು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಮಂಗಳವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
“ಚುನಾವಣಾ ಫಲಿತಾಂಶದ ಎಂಟು ದಿನಗಳ ನಂತರ, ಹಲವು ಗಂಭೀರ ಆರೋಪಗಳಿರುವ ವ್ಯಕ್ತಿಯನ್ನು ಬಿಜೆಪಿಯು ಮಧ್ಯಪ್ರದೇಶದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ. ಸಿಂಹಸ್ಥರಿಗೆ ಮೀಸಲಿಟ್ಟಿದ್ದ 872 ಎಕರೆ ಜಮೀನಿನಲ್ಲಿ ಭೂ ಬಳಕೆ ಬದಲಿಸಿ ಅವರ ಜಮೀನು ಪರಭಾರೆಯಾಗಿದೆ. ನಿಂದನೆ, ಬೆದರಿಕೆ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಮಧ್ಯಪ್ರದೇಶಕ್ಕೆ ‘ಮೋದಿ’ ಗ್ಯಾರಂಟಿಯೇ?” ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಸಿಎಂ ರೇಸಿನಲ್ಲಿ ಕಾಣಿಸಿಕೊಳ್ಳದ ಯಾದವ್ ಅವರನ್ನು ಬಿಜೆಪಿ ಮುಖ್ಯಮಂತ್ರಿಯಾಗಿ ಘೋಷಿಸಿ ಅಚ್ಚರಿ ಹುಟ್ಟಿಸಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರೆಸ್ಸೆಸ್) ನಿಕಟವರ್ತಿಯಾಗಿ ಗುರುತಿಸಲ್ಪಟ್ಟಿರುವ ಯಾದವ್ ಅವರು ರಾಜ್ಯದ ಜನಸಂಖ್ಯೆಯಲ್ಲಿ 48 ಶೇಕಡಾಕ್ಕೂ ಹೆಚ್ಚಿರುವ ಒಬಿಸಿಗಳ ಪ್ರಭಾವಿ ನಾಯಕರಾಗಿದ್ದಾರೆ. ಅವರು ನಿರ್ಗಮಿತ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು.