ಕರಾಚಿ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಬುಧವಾರ ಚುನಾವಣಾ ಆಯೋಗ ನಿಂದನೆಯ ಆರೋಪನ್ನು ಹೊರಿಸಲಾಗಿದೆ. ಮುಖ್ಯಚುನಾವಣಾ ಆಯುಕ್ತರ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ ಇಮ್ರಾನ್ ಖಾನ್ ವಿರುದ್ಧ ಈ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಇಮ್ರಾನ್ ಪರ ನ್ಯಾಯವಾದಿಗಳ ಅನುಪಸ್ಥಿತಿಯಲ್ಲಿಯೇ ಈ ಆರೋಪ ಹೊರಿಸಲಾಗಿದೆಯೆಂದು ಅವರ ವಕೀಲರಾದ ಹೈದರ್ ಪಂಜೂತಾ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ತನ್ನ ವಿರುದ್ಧದ ಆರೋಪಗಳನ್ನು ಇಮ್ರಾನ್ ಖಾನ್ ನಿರಾಕರಿಸಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಿಂದ ತನ್ನನ್ನು ದೂರವಿಡಲು ಪಾಕ್ ಸೇನೆಯು ಶತಾಯಗತಾಯ ಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಆದರೆ ಪಾಕ್ ಸೇನೆಯು ಈ ಆರೋಪಗಳನ್ನು ನಿರಾಕರಿಸಿದೆ.
ಕಳೆದ ವಾರ ಪಾಕ್ ನ ಉನ್ನತ ನ್ಯಾಯಾಲಯವು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಇಮ್ರಾನ್ ಖಾನ್ರನ್ನು ಅನರ್ಹಗೊಳಿಸುವ ತೀರ್ಪನ್ನು ಅಮಾನತಿನಲ್ಲಿರಿಸಲು ನಿರಾಕರಿಸಿತ್ತು.
ಬುಧವಾರ ಪಾಕ್ ನ್ಯಾಯಾಲಯವು ನೀಡಿದ ಪ್ರತ್ಯೇಕ ತೀರ್ಪೊಂದರಲ್ಲಿ, ಇಮ್ರಾನ್ ಖಾನ್ ಅವರ ತೆಹ್ರಿಕೆ ಇನ್ಸಾಫ್ ಪಕ್ಷಕ್ಕೆ ಅದರ ಚುನಾವಣಾ ಚಿಹ್ನೆಯಾದ ಕ್ರಿಕೆಟ್ ಬ್ಯಾಟ್ ಅನ್ನು ಬಳಸುವುದಕ್ಕೆ ಅವಕಾಶ ನೀಡಲಾಗವುದಿಲ್ಲವೆಂದು ತಿಳಿಸಿರುವುದಾಗಿ ಪಂಜೂತಾ ಹೇಳಿದ್ದಾರೆ ಎಂದು ಅವರ ತೆಹ್ರಿಕೆ ಇನ್ಸಾಫ್ ಪಕ್ಷದ ನಾಯಕರು ತಿಳಿಸಿದ್ದಾರೆ.