ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಾಗುತ್ತಿದ್ದಂತೆ ಮಧ್ಯಂತರ ಸರ್ವೋಚ್ಚ ನಾಯಕನನ್ನು ನೇಮಿಸಲಾಗಿತ್ತು. ಆದರೆ ಇಸ್ರೇಲ್ ದಾಳಿ ಮಾಡಿ ಮಧ್ಯಂತರ ಸರ್ವೋಚ್ಚ ನಾಯಕನನ್ನು ಹತ್ಯೆ ಮಾಡಿತ್ತು. ಆನಂತರ ಸರ್ವೋಚ್ಚ ನಾಯಕನ ಆಯ್ಕೆ ಮಾಡುವುದೇ ಇರಾನ್ ಗೆ ತಲೆ ನೋವಾಗಿ ಪರಿಣಮಿಸಿತ್ತು. ಆದರೆ ಇಂದು ಹಿರಿಯ ಧಾರ್ಮಿಕ ಮುಖಂಡರು ಮತ್ತು ಐಆರ್ ಜಿಸಿ ಅಲಿ ಖಮೇನಿ ಪುತ್ರ ಮೊಜ್ತಬಾ ಖಮೇನಿಯನ್ನು ಆಯ್ಕೆ ಮಾಡಿದ್ದರು.
ಇನ್ನು ಮೊಜ್ತಬಾ ಖಮೇನಿ ಆಯ್ಕೆಯಾಗುತ್ತಿದಂತೆ ಇಸ್ರೇಲ್ ಮೊಜ್ತಬಾ ಖಮೇನಿ ಇದ್ದ ಕಟ್ಟದ ಮೇಲೆ ವಾಯು ದಾಳಿ ನಡೆಸಿದೆ. ಆದರೆ ಈ ದಾಳಿಯಲ್ಲಿ ಮೊಜ್ತಬಾ ಖಮೇನಿ ಬದುಕುಳಿದಿದ್ದಾರೆ ಎಂದು ಇರಾನ್ ಹೇಳುತ್ತಿದೆ. ಆದರೆ ಇರಾನ್ ಸರ್ವೋಚ್ಚ ನಾಯಕ ಯಾರೇ ಆಗಲಿ ಅವರನ್ನು ಹತ್ಯೆ ಮಾಡುವುದಾಗಿ ಇಸ್ರೇಲ್ ಬೆದರಿಕೆ ಹಾಕಿದೆ. ಇರಾನ್ನಲ್ಲಿ ಸರ್ವೋಚ್ಚ ನಾಯಕನ ಆಯ್ಕೆಯ ನಂತರ, ಇಸ್ರೇಲ್ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಎಕ್ಸ್-ಪೋಸ್ಟ್ ಮೂಲಕ ಕಠಿಣ ಎಚ್ಚರಿಕೆ ನೀಡಿದರು. ಸರ್ವೋಚ್ಚ ನಾಯಕನ ಸ್ಥಾನಕ್ಕೆ ಆಯ್ಕೆಯಾದ ವ್ಯಕ್ತಿ ‘ಹತ್ಯೆಯೇ ನಮ್ಮ ಗುರಿ’ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಕಾಟ್ಜ್ X ನಲ್ಲಿ ಹೇಳಿಕೆ ನೀಡಿದ್ದು, ‘ಇಸ್ರೇಲ್ ಅನ್ನು ನಾಶಮಾಡಲು ಪ್ರಯತ್ನಿಸುವುದು, ಅಮೆರಿಕ ಮತ್ತು ಇತರ ದೇಶಗಳಿಗೆ ಬೆದರಿಕೆ ಒಡ್ಡುವ ಅಥವಾ ಇರಾನಿನ ಜನರನ್ನು ದಮನಿಸುವ ಕಾರ್ಯವನ್ನು ಮುಂದುವರಿಸುವ ಇರಾನ್ನ ಭಯೋತ್ಪಾದಕ ಸರ್ಕಾರವು ಯಾರನ್ನೇ ತನ್ನ ಮುಂದಿನ ಸರ್ವೋಚ್ಛ ನಾಯಕನನ್ನಾಗಿ ನೇಮಿಸಿದರೂ, ಅವರು ನಿರ್ಮೂಲನೆಗೆ ಗುರಿಯಾಗುತ್ತಾರೆ’ ಎಂದು ಅವರು ಬರೆದಿದ್ದಾರೆ. ಅವನ ಹೆಸರು ಏನೇ ಇರಲಿ ಅಥವಾ ಅವನು ಎಲ್ಲಿಯೇ ಅಡಗಿರಲಿ, ಅವನನ್ನು ಹೊಡೆದು ಉರುಳಿಸುತ್ತೇವೆ ಎಂದಿದ್ದಾರೆ.
”ಲಯನ್ಸ್ ರೋರ್’ ಎಂಬ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಯಾವುದೇ ಅಗತ್ಯ ವಿಧಾನಗಳನ್ನು ಬಳಸಿಕೊಂಡು ಕ್ರಮ ಕೈಗೊಳ್ಳಲು ಎಲ್ಲ ರೀತಿಯಿಂದಲೂ ಸಿದ್ಧತೆ ಮತ್ತು ಕಾರ್ಯನಿರ್ವಹಿಸುವಂತೆ ಪ್ರಧಾನ ಮಂತ್ರಿ ಮತ್ತು ನಾನು ಐಡಿಎಫ್ಗೆ (ಇಸ್ರೇಲ್ ರಕ್ಷಣಾ ಪಡೆಗಳು) ಸೂಚನೆ ನೀಡಿದ್ದೇವೆ’ ಎಂದಿದ್ದಾರೆ.
ಮುಂದುವರಿದು, ಇರಾನ್ ಸರ್ಕಾರದ ಮಿಲಿಟರಿ ಮತ್ತು ಕಾರ್ಯತಂತ್ರದ ಸಾಮರ್ಥ್ಯಗಳನ್ನು ದುರ್ಬಲಗೊಳಿಸುವುದು ಅಥವಾ ನಾಶಮಾಡಲು, ಇರಾನಿನ ಜನರು ತಮ್ಮ ಸದ್ಯದ ಸರ್ಕಾರವನ್ನು ಉರುಳಿಸಲು ಮತ್ತು ಅದನ್ನು ಬದಲಾಯಿಸಲು ಅನುವು ಮಾಡಿಕೊಡುವ ಪರಿಸ್ಥಿತಿಗಳನ್ನು ಸೃಷ್ಟಿಸಲು ನಾವು ಅಮೆರಿಕನ್ ಪಾಲುದಾರರೊಂದಿಗೆ ಪೂರ್ಣ ಬಲದಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ’ ಎಂದು ತಿಳಿಸಿದ್ದಾರೆ.
