Home Uncategorized ಇಸ್ರೇಲಿ ಒತ್ತೆಯಾಳುಗಳು ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಇದು ಹಮಾಸ್‌ ತಂತ್ರ ಎಂದು ಸೈನಿಕರು ಗುಂಡಿಕ್ಕಿದ್ದರು: ತನಿಖಾ ವರದಿ

ಇಸ್ರೇಲಿ ಒತ್ತೆಯಾಳುಗಳು ಸಹಾಯಕ್ಕಾಗಿ ಅಂಗಲಾಚುತ್ತಿದ್ದರೂ ಇದು ಹಮಾಸ್‌ ತಂತ್ರ ಎಂದು ಸೈನಿಕರು ಗುಂಡಿಕ್ಕಿದ್ದರು: ತನಿಖಾ ವರದಿ

31
0

ಜೆರುಸಲೆಂ: ಗಾಝಾದಲ್ಲಿ ಹಮಾಸ್‌ ಒತ್ತೆಯಾಳಾಗಿರಿಸಿದ್ದ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಪ್ರಮಾದವಶಾತ್‌ ಹತ್ಯೆಗೈಯ್ಯುವ ಮುನ್ನ ಅವರಿದ್ದ ಕಟ್ಟಡದೊಳಗೆ ಸಹಾಯ ಅಂಗಲಾಚಿ ಕೇಳುತ್ತಿದ್ದ ಜನರ ಕೂಗುಗಳನ್ನು ಇಸ್ರೇಲಿ ಸೈನಿಕರು ಕಡೆಗಣಿಸಿದ್ದರೆಂಬ ಅಂಶ ಮಿಲಿಟರಿ ತನಿಖೆಯಿಂದ ಬಹಿರಂಗಗೊಂಡಿದೆ.

ಒತ್ತೆಯಾಳುಗಳು ಹೀಬ್ರೂ ಭಾಷೆಯಲ್ಲಿ ಸಹಾಯಕ್ಕಾಗಿ ಡಿಸೆಂಬರ್‌ 10ರಂದು ಅಂಗಲಾಚು ದ್ದುದನ್ನು ಇಸ್ರೇಲಿ ಸೈನಿಕರು ಕೇಳಿಸಿಕೊಂಡರೂ ಗಾಝಾ ನಗರ ಜಿಲ್ಲೆಯಾದ ಶೆಜಯ್ಯ ಎಂಬಲ್ಲಿದ್ದ ಕಟ್ಟಡದೊಳಗೆ ತಾವು ಪ್ರವೇಶಿಸಲು ಹಮಾಸ್‌  ಸಂಚು ಇದು ಎಂದು ಇಸ್ರೇಲಿ ಸೈನಿಕರು ನಂಬಿದ್ದರೆಂದು ತನಿಖೆ ಕಂಡುಕೊಂಡಿದೆ.

ಈ ಕಟ್ಟಡದಲ್ಲಿ ಸ್ಫೋಟಗಳಿವೆ ಎಂದು ಅಂದುಕೊಂಡ ಸೈನಿಕರು ಅಲ್ಲಿಂದ ಹೊರಹೋಗಿ ಐದು ಮಂದಿ ಹಮಾಸ್‌ ಹೋರಾಟಗಾರರನ್ನು ಹತ್ಯೆಗೈದರು. ಒತ್ತೆಯಾಳುಗಳೂ ನಂತರ ಆ ಕಟ್ಟಡದಿಂದ ತಪ್ಪಿಸಿಕೊಂಡರೆಂದು ಹೇಳಲಾಗುತ್ತಿದ್ದು ಡಿಸೆಂಬರ್‌ 15ರಂದು ಇಸ್ರೇಲಿ ಸೈನಿಕರು ಅವರನ್ನು ಗುರುತಿಸಲು ವಿಫಲರಾಗಿ ಅವರಿಂದ ತಮಗೆ ಅಪಾಯವಿದೆಯೆಂದು ಅಂದುಕೊಂಡು ಅವರಿಗೆ ಗುಂಡಿಕ್ಕಿದ್ದರು ಎಂದು ತನಿಖೆ ಕಂಡುಕೊಂಡಿದೆ.

ಅವರಲ್ಲಿ ಇಬ್ಬರು ತಕ್ಷಣ ಮೃತಪಟ್ಟರೆ, ಮೂರನೆಯಾತ ತಪ್ಪಿಸಿಕೊಂಡಿದ್ದರು. ಆತನನ್ನು ಗುರುತಿಸುವಂತಾಗಲು ಗುಂಡಿಕ್ಕದಂತೆ ಸೈನಿಕರಿಗೆ ಇಸ್ರೇಲಿ ಕಮಾಂಡರ್‌ಗಳು ಸೂಚಿಸಿದ್ದರು. ಆದರೆ ಅಲ್ಲಿನ ಗದ್ದಲದಿಂದ ಆದೇಶ ಕೇಳಿಸಿಕೊಳ್ಳದ ಇಬ್ಬರು ಸೈನಿಕರು ಓಡುತ್ತಿದ್ದ ಒತ್ತೆಯಾಳಿಗೆ ಗುಂಡಿಕ್ಕಿದ್ದರು. ಮೂವರು ಒತ್ತೆಯಾಳುಗಳೂ ಶರ್ಟ್‌ ಧರಿಸಿರಲಿಲ್ಲ ಮತ್ತು ಅವರಲ್ಲೊಬ್ಬಾತ ಬಿಳಿ ಬಾವುಟ ಹಿಡಿದುಕೊಂಡಿದ್ದ.

ಡಿಸೆಂಬರ್‌ 15ರಂದು ಸೇನೆಯ ಡ್ರೋನ್‌ ಎಸ್‌ಒಎಸ್‌ ಗುರುತುಗಳು ಹಾಗೂ ಮೂವರು ಒತ್ತೆಯಾಳುಗಳಿಗೆ ಸಹಾಯ ಮಾಡಿ ಎಂದು ಬರೆದಿರುವ ಚಿಹ್ನೆಗಳು ಮೂವರು ಒತ್ತೆಯಾಳುಗಳನ್ನು ಗುಂಡಿಕ್ಕಲಾದ ಕಟ್ಟಡದ ಸಮೀಪ ಕಂಡುಬಂದಿತ್ತು ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ನಿರ್ದಿಷ್ಟ ಘಟನೆಯಲ್ಲಿ ಸೇನೆಯು ಒತ್ತೆಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ವಿಫಲವಾಗಿತ್ತು ಎಂದು ಸೇನಾ ಮುಖ್ಯಸ್ಥ ಹೆರ್ಝಿ ಹಲೆವಿ ಹೇಳಿದ್ದಾರೆ. ಈ ಹತ್ಯೆಗಳನ್ನು ತಪ್ಪಿಸಬಹುದಾಗಿತ್ತು ಎಂಬ ಅಭಿಪ್ರಾಯವನ್ನು ಸೇನಾ ಮುಖ್ಯಸ್ಥರು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here