ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೂ 1977ರ ನಂತರ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಮತದಾರರು ನನಗೆ ಬೆಂಬಲ ನೀಡಬೇಕಾಗಿ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮನವಿ ಮಾಡಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಟಿಕೆಟ್ ನೀಡಿದೆ. ಈ ಚುನಾವಣೆಯೂ ರಾಜವಂಶಸ್ಥ ಮತ್ತು ಸಾಮಾನ್ಯ ಪ್ರಜೆಯ ನಡುವಿನ ಹೋರಾಟ ಎಂದು ಹೇಳಿದರು.
ನಾನೊಬ್ಬ ಸಾಮಾನ್ಯ ಪ್ರಜೆ. ನನ್ನ ಹೆಸರಿನ ಜತೆ ರಾಜ, ಮಹಾರಾಜ, ಒಡೆಯರ್ ಇಲ್ಲ. ಎಂ. ಲಕ್ಷ್ಮಣ್ ಅಷ್ಟೇ. ಕೆಲವರು ಲಕ್ಷ್ಮಣ್ ಗೌಡ ಎಂದು ಹೆಸರು ಬದಲಿಸಿಕೊಳ್ಳುವಂತೆ ಸಲಹೆ ನೀಡಿದರು. ಆದರೆ ಚುನಾವಣೆಗಾಗಿ ಹೆಸರು ಬದಲಿಸಿಕೊಳ್ಳಲಿಲ್ಲ. ಸಿದ್ದರಾಮಯ್ಯ ಅವರು ಒಕ್ಕಲಿಗ ಸಮುದಾಯದ ವಿರೋಧಿ ಅಲ್ಲ ಎನ್ನುವುದನ್ನು ನಿರೂಪಿಸಲು ನನಗೆ ಟಿಕೆಟ್ ನೀಡಲಾಗಿದೆ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳ ಬಗ್ಗೆ ನನಗೆ ಸ್ಮರಣೆ ಇದೆ. ಮೀಸಲಾತಿ, ಸಾಮಾಜಿಕ ನ್ಯಾಯ, ದಲಿತರು, ಬಡವರ ವಿರುದ್ಧ ಇರುವ ಪಕ್ಷದಿಂದ ಯದುವೀರ್ ಸ್ಪರ್ಧಿಸಿರುವುದು ಬೇಸರ ತಂದಿದೆ. 24 ಗಂಟೆಯು ಜನರ ಮನೆ ಬಾಗಿಲಲ್ಲಿ ನಿಂತು ಕೆಲಸಮಾಡುವ ವ್ಯಕ್ತಿ ಬೇಕೋ, ನೀವೇ ಬೇರೆಯವರ ಮನೆಯ ಮುಂದೆ ಹೋಗಿ ನಿಲ್ಲುವಂತ ವ್ಯಕ್ತಿ ಬೇಕಾ ಎನ್ನುವುದನ್ನು ಜನರು ತೀರ್ಮಾನಿಸಬೇಕು ಎಂದು ಹೇಳಿದರು.
ಬಿಜೆಪಿ ಸೇರಿದರೆ ಒಳ್ಳೆಯ ನಾಯಕರು. ಸೇರಲ್ಲ ಅಂದರೆ ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ಇದಕ್ಕೆ ಕೇಜ್ರಿವಾಲ್ ಉದಾಹರಣೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ 22 ಸ್ಥಾನ ಗೆಲ್ಲುತ್ತದೆ. ಬಿಜೆಪಿ ಒಂದು ಪಕ್ಷ, ಆರು ಬಾಗಿಲು. ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಅಸ್ತಿತ್ವವೇ ಇಲ್ಲದಂತೆ ಆಗಿದೆ. ಕೇವಲ ಎರಡು ಸೀಟು ಪಡೆಯಲು ಪರದಾಟುವಂತಾಗಿದೆ. ನಂಬಿಸಿ ಕತ್ತುಕೊಯ್ಯುವ ಕೆಲಸವನ್ನು ಬಿಜೆಪಿ ಮಾಡಿದೆ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಒಕ್ಕಲಿಗ ವಿರೋಧಿ. ಪ್ರತಾಪ್ ಸಿಂಹ, ಸದಾನಂದ ಗೌಡ, ಸಿ.ಟಿ. ರವಿಗೆ ಟಿಕೆಟ್ ಕೊಡದಿರುವ ಬಿಜೆಪಿ ಒಕ್ಕಲಿಗ ವಿರೋಧಿ ಎಂದರು.
ರಾಜ್ಯಾದ್ಯಂತ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಒಕ್ಕಲಿಗ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಬಿಜೆಪಿ ಕೇವಲ ಒಂದು ಕಡೆ ಮಾತ್ರ ಒಕ್ಕಲಿಗರಿಗೆ ಟಿಕೆಟ್ ನೀಡಿದೆ. ನಿಜವಾದ ಒಕ್ಕಲಿಗ ವಿರೋಧಿಗಳು ಬಿಜೆಪಿಯವರು ಎಂದು ಹೇಳಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಬಿ.ಕೆ. ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ನಗರ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಭಾಸ್ಕರ್ ಎಲ್.ಗೌಡ, ಉಪಾಧ್ಯಕ್ಷ ತಿವಾರಿ, ಎನ್. ಭಾಸ್ಕರ್, ಬೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮ್, ಎನ್.ಎಸ್. ಗೋಪಿನಾಥ್, ಎನ್. ಶಿವಮಲ್ಲು, ಕೆ. ಮಹೇಶ್ ಇದ್ದರು.
ಈ ಬಾರಿ ಜನತೆ ಕೈ ಹಿಡಿಯದಿದ್ದರೆ ನಾನು ಸತ್ತಂತೆ
ಕಾಂಗ್ರೆಸ್ ನನಗೆ ಕೊನೆಯ ಅವಕಾಶ ನೀಡಿದೆ. ಎರಡು ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದೇನೆ. ಈ ಬಾರಿ ಜನತೆ ಕೈ ಹಿಡಿಯದಿದ್ದರೆ ನಾನು ಸತ್ತಂತೆ. ಪಕ್ಷಾತೀತ ಮತ್ತು ಜಾತ್ಯತೀತವಾಗಿ ಅವಕಾಶ ಮಾಡಿಕೊಡುವಂತೆ ಎಂ. ಲಕ್ಷ್ಮಣ್ ಮನವಿ ಮಾಡಿದರು.