Home Uncategorized ಉಕ್ರೇನ್ ನಿಂದ ಬರ್ಬರ ಕೃತ್ಯ: ರಶ್ಯ ಆರೋಪ

ಉಕ್ರೇನ್ ನಿಂದ ಬರ್ಬರ ಕೃತ್ಯ: ರಶ್ಯ ಆರೋಪ

29
0

ಮಾಸ್ಕೋ : ಕೈದಿಗಳ ವಿನಿಮಯಕ್ಕೆ ಕರೆದೊಯ್ಯುತ್ತಿದ್ದ 65 ಉಕ್ರೇನಿನ ಯುದ್ಧಕೈದಿಗಳಿದ್ದ ರಶ್ಯದ ಮಿಲಿಟರಿ ಸಾರಿಗೆ ವಿಮಾನವನ್ನು ಉಕ್ರೇನ್ ಸೇನೆ ಉದ್ದೇಶಪೂರ್ವಕವಾಗಿ ಹೊಡೆದುರುಳಿಸಿದೆ ಎಂದು ರಶ್ಯ ಆರೋಪಿಸಿದೆ.

ಉಕ್ರೇನ್ನ ಬರ್ಬರ ಭಯೋತ್ಪಾದಕ ಕೃತ್ಯವು 74 ಜನರ ಸಾವಿಗೆ ಕಾರಣವಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಪ್ರತಿಪಾದಿಸಿದೆ.

`ಸ್ಥಾಪಿತ ಪ್ರಕ್ರಿಯೆಗೆ ಅನುಗುಣವಾಗಿ ಉಕ್ರೇನ್ನ ಸೇನಾಸಿಬಂದಿಯನ್ನು ಬೆಲ್ಗೊರೊಡ್ ಯುದ್ಧಭೂಮಿಗೆ ಬುಧವಾರ ಕೈದಿಗಳ ವಿನಿಮಯಕ್ಕಾಗಿ ಕರೆದೊಯ್ಯಲಾಗುತ್ತದೆ ಎಂಬುದು ಉಕ್ರೇನ್ ಮುಖಂಡರಿಗೆ ತಿಳಿದಿತ್ತು. ಈ ಮೊದಲೇ ಮಾಡಿಕೊಂಡ ಒಪ್ಪಂದದ ಪ್ರಕಾರ ರಶ್ಯ-ಉಕ್ರೇನ್ ಗಡಿಯ ಕೊಲೊಟಿಲೋವ್ಕ ಚೆಕ್ಪಾಯಿಂಟ್ನಲ್ಲಿ ವಿನಿಮಯ ಪ್ರಕ್ರಿಯೆ ಬುಧವಾರ ಮಧ್ಯಾಹ್ನ ನಿಗದಿಯಾಗಿತ್ತು. ಈ ಭಯೋತ್ಪಾದಕ ಕೃತ್ಯದ ಮೂಲಕ ಉಕ್ರೇನ್ನ ನಾಯಕತ್ವ ತನ್ನ ನೈಜ ಮುಖವನ್ನು ಅನಾವರಣಗೊಳಿಸಿದೆ. ತನ್ನದೇ ಪ್ರಜೆಗಳ ಜೀವದ ಬಗ್ಗೆಯೂ ಅವರಲ್ಲಿ ಕಾಳಜಿಯಿಲ್ಲ’ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಬೆಲ್ಗೊರೊಡ್ ಪ್ರಾಂತದ ಯಬ್ಲೊನೊವ್ ಗ್ರಾಮದ ಬಳಿ ಬೃಹತ್ ವಿಮಾನವೊಂದು ನೆಲದತ್ತ ಪತನಗೊಳ್ಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನಿಖಾಧಿಕಾರಿಗಳು ಹಾಗೂ ಶೋಧ ಮತ್ತು ರಕ್ಷಣಾ ತಂಡ ದುರಂತದ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ವರದಿಯಾಗಿದೆ.

ವಿಮಾನ ಪತನಗೊಂಡ ಮಾಹಿತಿಯಿದೆ. ಆದರೆ ಹೆಚ್ಚಿನ ವಿವರ ಲಭಿಸಿಲ್ಲ. ಬುಧವಾರ ನಿಗದಿಯಾಗಿದ್ದ ಕೈದಿಗಳ ವಿನಿಮಯ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಉಕ್ರೇನ್ನ ಅಧ್ಯಕ್ಷೀಯ ಸಲಹೆಗಾರ ಮಿಖಾಯಿಲೊ ಪೊಡೊಲ್ಯಾಕ್ ಪ್ರತಿಕ್ರಿಯಿಸಿದ್ದಾರೆ.

ವಿಮಾನ ಪತನಗೊಳ್ಳುತ್ತಿದ್ದಾಗ ಉಕ್ರೇನ್ ಕಡೆಯಿಂದ ಎರಡು ಕ್ಷಿಪಣಿಗಳು ಉಡಾವಣೆಗೊಂಡಿರುವುದನ್ನು ತನ್ನ ರೇಡಾರ್ ನಿರ್ವಾಹಕರು ಪತ್ತೆಹಚ್ಚಿದ್ದಾರೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ. ಅಮೆರಿಕ ಅಥವಾ ಜರ್ಮನಿ ನಿರ್ಮಿತ ಕ್ಷಿಪಣಿಯಿಂದ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯ ರಕ್ಷಣಾ ಇಲಾಖೆಯ ನಿಕಟ ಮೂಲಗಳು ಹೇಳಿವೆ. ವಿಮಾನದಲ್ಲಿದ್ದ 65 ಉಕ್ರೇನಿನ ಯುದ್ಧಕೈದಿಗಳ ಹೆಸರು ಮತ್ತು ವಿವರಗಳನ್ನು ರಶ್ಯದ ಸರಕಾರಿ ಮಾಧ್ಯಮ ಪ್ರಕಟಿಸಿದೆ.   

LEAVE A REPLY

Please enter your comment!
Please enter your name here